ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಶನಿವಾರಕ್ಕೆ ಮುಂದೂಡಿಕೆ

‘ಆಸ್ತಿ ಅಕ್ರಮ, ಕೃಷಿ ಜಮೀನಿನಲ್ಲಿ ಚಿನ್ನ ಬೆಳೆಯಲಾಗದು’: ಇ.ಡಿ.ವಕೀಲರ ವಾದ
Last Updated 25 ಸೆಪ್ಟೆಂಬರ್ 2019, 4:01 IST
ಅಕ್ಷರ ಗಾತ್ರ

ನವದೆಹಲಿ:ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿಯ ಅವೆನ್ಯೂ ರಸ್ತೆಯಲ್ಲಿರುವ ಇ.ಡಿ. ವಿಶೇಷನ್ಯಾಯಾಲಯ ಶನಿವಾರಕ್ಕೆ ಮುಂದೂಡಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ಪರ ವಕೀಲಕೆ.ಎಂ.‌ನಟರಾಜ್ ಅವರ ಸುದೀರ್ಘ ವಾದ ಆಲಿಸಿದ ವಿಶೇಷ ನ್ಯಾಯಾಧೀಶ ಕುಹಾರ್ ಕುಮಾರ್ ಅವರುವಿಚಾರಣೆಯನ್ನು ಮುಂದೂಡಿದರು.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಕೈಗೊಂಡ ಕ್ರಮಗಳ ಬಗ್ಗೆಕೆ.ಎಂ.‌ನಟರಾಜ್ ಅವರು ಒಂದು ಗಂಟೆಗೂ ಹೆಚ್ಚು ಕಾಲವಾದ ಮಂಡಿಸಿದರು.

ಹೀಗೆ ಸಾಗಿತು ಇ.ಡಿ.ವಕೀರಲ ವಾದ...: ‘ಆದಾಯ ತೆರಿಗೆ ಇಲಾಖೆಗೆ ಘೋಷಿಸಲಾದ ಆಸ್ತಿ ವಿವರವು ಈ ಪ್ರಕರಣದಲ್ಲಿ ಅಪ್ರಸ್ತುತ. ಕೊಲೆ‌ ಉದ್ದೇಶದಿಂದ ಸುಪಾರಿ ಅಥವಾ ಹಫ್ತಾ ಪಡೆಯುವಂಥ ಅಕ್ರಮಗಳನ್ನೂ ನಾವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ತನಿಖೆಗೆ ಒಳಪಡಿಸುತ್ತೇವೆ’ ಎಂದುಇ.ಡಿ ಪರ ವಕೀಲಕೆ.ಎಂ.‌ನಟರಾಜ್ ಉದಾಹರಣೆ ಸಮೇತ ವಿವರಿಸಿದರು.

‘ಅಪರಾಧಕ್ಕಾಗಿ ಹಸ್ತಾಂತರಗೊಂಡ ಎಲ್ಲ ಹಣದ ‌ಕುರಿತೂ ಕಾಯ್ದೆ ಅಡಿ ತನಿಖೆಗೆ ಅವಕಾಶ ಕಲ್ಪಿಸಲಾಗಿದೆ. ಕಾಯ್ದೆಯ 120 ಬಿ ಸೆಕ್ಷನ್ ಅನ್ವಯ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಅಪರಾಧದ ಪಿತೂರಿ ನಡೆಸಿದವರನ್ನೂ ಈ ಸೆಕ್ಷನ್ ಅಡಿ ವಿಚಾರಣೆಗೆ ಒಳಪಡಿಸಬಹುದು. ಹಣಕಾಸು, ಆದಾಯ ತೆರಿಗೆ, ಕೊಲೆ, ಸುಲಿಗೆ ಸೇರಿದಂತೆ ಯಾವುದೇ ರೀತಿಯ ಅಪರಾಧ ಇದ್ದರೂ ಹಣ ವರ್ಗಾವಣೆ ಆಗಿದ್ದರೆ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದು‘ ಎಂದು ವಕೀಲರುವಾದ ಮಂಡಿಸಿದರು.

‘ಕೃಷಿ ಜಮೀನಿನಲ್ಲಿ ಭತ್ತ ಬೆಳೆಯಬಹುದೇ ವಿನಃ ಚಿನ್ನ ಬೆಳೆಯಲಾಗದು’!

‘ಯಾವುದೇ ವಕೀಲ ವೃತ್ತಿಗೆ ಸಂಬಂಧಿಸಿದಂತೆ ಪಡೆಯುವ‌ ಶುಲ್ಕದ ಹಣವನ್ನು ವಕೀಲ ತನ್ನ ಖಾತೆಗೆ ಹಾಕಿಸಿಕೊಳ್ಳಬಹುದು. ಆ ಆದಾಯಕ್ಕೆ ಆತ ತೆರಿಗೆ ನೀಡುತ್ತಾನೆ. ಆದರೆ ಆತನಿಗೆ ಶುಲ್ಕ‌ ನೀಡುವ ವ್ಯಕ್ತಿ ಆ ಕುರಿತು ದಾಖಲೆ‌ನೀಡಲೇಬೇಕು. ಇಲ್ಲದಿದ್ದರೆ ವಕೀಲನೂ ಆ ಅಪರಾಧದಲ್ಲಿ ಭಾಗಿ ಆದಂತಾಗುತ್ತದೆ. ಕೃಷಿ ಭೂಮಿಯ ಆದಾಯ ₹ 1.38 ಕೋಟಿ ಎಂದು ಡಿಕೆಶಿ‌ ಘೋಷಿಸಿದ್ದಾರೆ. ಆದರೆ ಕಳೆದ 20 ವರ್ಷಗಳಿಂದ ಈ ಆದಾಯ ಕಲೆ‌ ಹಾಕಿದರೂ ₹ 840 ಕೋಟಿ‌ ಆಗದು’ ಎಂದು ನಟರಾಜ್‌ ವಾದಿಸಿದರು.

‘ಕೃಷಿ ಜಮೀನಿನಲ್ಲಿ ಭತ್ತ ಬೆಳೆಯಬಹುದೇ ವಿನಃ ಚಿನ್ನ ಬೆಳೆಯಲು ಆಗದು.‌ ಇವರ ಆಸ್ತಿ ಚಿನ್ನ ಬೆಳೆದವರ ಮಾದರಿಯದ್ದಾಗಿದೆ. ತೈಲ ಉತ್ಪಾದನೆ ಘಟಕ ಹೊಂದಿದ ಮಾದರಿಯಲ್ಲಿ ಯಾವುದೇ ಕೃಷಿ ಆದಾಯ ಇರದು’ ಎಂದು ವಕೀಲ ನಟರಾಜ್ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

‘ಡಿಕೆಶಿ ಆಸ್ತಿ ಅಕ್ರಮ’

ಡಿಕೆಶಿಯವರ ಆಸ್ತಿಯು ಅಕ್ರಮ ಎಂಬುದು ಮೇಲ್ನೋಟಕ್ಕೇ ಕಾಣಿಸುತ್ತಿದೆ. ಅವರು ಯಾವುದೇ ಆಸ್ತಿಯನ್ನು ಹೊಸದಾಗಿ ಖರೀದಿಸಿಲ್ಲ ಎಂದು ನಟರಾಜ್ ವಾದಿಸಿದರು. ಈ ವೇಳೆ, ಅವರ ಆಸ್ತಿ ಮೌಲ್ಯ ವೃದ್ಧಿಸಿದೆ ಎಂದು ಅವರ ಪರ ವಕೀಲರು ವಾದಿಸಿದ್ದಾರಲ್ಲ ಎಂದು ನ್ಯಾಯಾಧೀಶ ಕುಹಾರ್ ಕುಮಾರ್ ಪ್ರಶ್ನಿಸಿದರು. ಇದಕ್ಕುತ್ತರವಾಗಿ ನಟರಾಜ್ ಅವರು, ಪ್ರತಿ‌ ಚುನಾವಣೆಯ ಘೋಷಣೆ ವೇಳೆ ನಮೂದಿಸಲಾದ ಆಸ್ತಿಯ ವಿವರ ಸಂಶಯಾಸ್ಪದವಾಗಿದೆ. ಈ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಪ್ರತಿಪಾದಿಸಿದರು.

ಡಿಕೆಶಿಯವರು ಅಪಾರ ಆಸ್ತಿಯನ್ನು ನಗದು ನೀಡಿ ಖರೀದಿಸುವ ನಿದರ್ಶನಗಳು ಇವೆ. ಅದು ಮೇಲ್ನೋಟಕ್ಕೆ ಅಪರಾಧ ಎಂದು ಕಂಡುಬಂದಿದೆ ಎಂದು ನಟರಾಜ್ ವಾದಿಸಿದರು.

ಆಗ, ಡಿಕೆಶಿ ಅವರ ತಾಯಿ ಗೌರಮ್ಮ ತಮ್ಮ ಆಸ್ತಿಯನ್ನು ಉಡುಗೊರೆ ನೀಡಿದ್ದಾರಲ್ಲ? ಎಂದು ನ್ಯಾಯಾಧೀಶರ ಪ್ರಶ್ನಿಸಿದರು.

ಇದಕ್ಕುತ್ತರಿಸಿದ ನಟರಾಜ್, ‘ಡಿಕೆಶಿ ಅವರ ತಾಯಿಯೂ 1991ರಿಂದ 38 ಆಸ್ತಿಗಳನ್ನು ಖರೀದಿಸಿದ್ದಾರೆ. ಕೆಲವು ಆಸ್ತಿಯನ್ನು ಖರೀದಿಸದೆ ವಶಪಡಿಸಿಕೊಂಡಿದ್ದಾರೆ. ಕೆಲವು ಆಸ್ತಿಗಳು ಡಿ.ಕೆ. ಕೆಂಪೇಗೌಡ ಅವರದ್ದಾಗಿದ್ದರೂ ಯಾವುದೇ ರೀತಿಯ ತೆರಿಗೆ ಕಟ್ಟಿಲ್ಲ. ರಿಟರ್ನ್ ಫೈಲ್ ಮಾಡಿಲ್ಲ. ಮಗಳ ಹೆಸರಲ್ಲಿರುವ ಆಸ್ತಿಯನ್ನೂ ಹಿಂದೂ ಅವಿಭಕ್ತ ಕುಟುಂಬ ಕಾಯ್ದೆ ಅಡಿ ಘೋಷಿಸಿಕೊಂಡಿಲ್ಲ. ಗೌರಮ್ಮ ಅವರಿಗೂ ಸಾಲ ನೀಡಲಾಗಿದೆ. ಅದರ ವಿವರಗಳಿಲ್ಲ. ಸಾಲವನ್ನು ಅವಿಭಕ್ತ ಕುಟುಂಬದ‌ ಮುಖ್ಯಸ್ಥ ನೀಡಿದ್ದರೂ ಅವರು‌ ತೆರಿಗೆ ಕಟ್ಟಿಲ್ಲ. 1999ರಿಂದ ಈವರೆಗೆ ಹೊಂದಲಾದ 54 ಆಸ್ತಿಗಳ ಕುರಿತು‌ ತನಿಖೆ ನಡೆಯಬೇಕು.‌ ಸಹೋದರನ ಹೆಸರಲ್ಲಿ 27 ಆಸ್ತಿಗಳು ಇವೆ. ಶಿವಕುಮಾರ್ ಅವರ ಎರಡು ಖಾತೆಗಳಲ್ಲಿ ₹ 2 ಕೋಟಿ ಠೇವಣಿ ಇದೆ. ಆದರೆ ಒಮ್ಮೆಯೂ‌ ಹಣ ಡ್ರಾ ಮಾಡಲಾಗಿಲ್ಲ. ಕೃಷಿಕರು ಸಾಕಷ್ಟು‌ ಸಮಸ್ಯೆ ಎದುರಿಸುತ್ತಿದ್ದರೂ ₹ 161 ಕೋಟಿ ನಗದು ಇವರ ಖಾತೆಗಳಿಂದ ವ್ಯವಹಾರಕ್ಕೆ ಒಳಗಾಗಿದೆ ಇದೆಲ್ಲವೂ ಅಕ್ರಮ‌ ವ್ಯವಹಾರ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ₹ 40 ಕೋಟಿ ಸಾಲವನ್ನು ಮಗಳ ಹೆಸರಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದು ಕುಟುಂಬ ಅಥವಾ ಮಗಳಿಗೆ ಗೊತ್ತೇ ಇಲ್ಲದವರಿಂದ ಪಡೆದಿದ್ದಾಗಿದೆ. ಸಾಲ‌ ನೀಡಿದ ವ್ಯಕ್ತಿ‌ಯನ್ನು ಸಾಲ ಕೊಡುವುದಕ್ಕೆ ಒತ್ತಾಯಿಸಿರುವುದು ಕಂಡುಬಂದಿದೆ. ಬಹುಶಃ ಇದಕ್ಕೆ ಬಡ್ಡಿಯೂ ಇಲ್ಲ ಭದ್ರತೆಯೂ ಇಲ್ಲ ಎಂಬುದು ಕಂಡುಬಂದಿದೆ‘ ಎಂದು ನ್ಯಾಯಾಧೀಶರಿಗೆ ತಿಳಿಸಿದರು.

ಜತೆಗೆ, ಡಿಕೆಶಿ ವ್ಯವಹಾರಗಳ ದಾಖಲೆಗಳನ್ನು ಇ.ಡಿ. ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ‌ರು.

ಹಣ ಅಕ್ರಮ‌ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ ಕುರಿತು ವಿವರಿಸಿದ ನಟರಾಜ್, ಅಕ್ರಮ ಆಸ್ತಿ ಹೊಂದುವುದು ಈ ಕಾಯ್ದೆ ಅಡಿ ನಿಜಕ್ಕೂ ಅಪರಾಧ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಅಲ್ಲದೆ, ಜಾಮೀನು ಅರ್ಜಿಯ ಬಗ್ಗೆ ಪ್ರಾಸಿಕ್ಯೂಷನ್ ವಿರೋಧಿಸಿದ್ದರೂ ನ್ಯಾಯಾಧೀಶರು ಸಮರ್ಪಕ ಕಾರಣಗಳ ಅಡಿ ಜಾಮೀನು ಮಂಜೂರು ಮಾಡಬಹುದು. ಅದು ಅವರ ವಿವೇಚನೆಗೆ ಬಿಟ್ಟ ವಿಷಯ. ‌ಆದರೆ, ಅಪರಾಧದ ಆಳ-ಅಗಲವನ್ನು ಅರಿತು ಆದೇಶ ನೀಡಬೇಕು ಎಂದು ಕಾಯ್ದೆ ಹೇಳುತ್ತದೆ. ಸೆಕ್ಷನ್ 45ರ ಅಡಿ ದಾಖಲಿಸಲಾದ ಪ್ರಕರಣದ ‌ಬಗ್ಗೆ ಜಾಮೀನು ನೀಡಕೂಡದು ಎಂಬುದಾಗಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ನಟರಾಜ್ ವಾದ ಮಂಡಿಸಿದರು.

‘ತನಿಖೆ ವೇಳೆ ಸಂಗ್ರಹಿಸಲಾದ ದಾಖಲೆಗಳನ್ನು ಅವಲೋಕಿಸುವುದಾದರೆ ಸ್ಪಷ್ಟವಾಗಿ ಇದೊಂದು ಆರ್ಥಿಕ ಅಪರಾಧವಾಗಿದೆ. ಆದಾಯದ ‌ಮೂಲ ಬಹಿರಂಗಪಡಿಸದ‌ ಕಾರಣ ಸೆಕ್ಷನ್‌24ರ ಅಡಿ ಪ್ರಕರಣ ದಾಖಲಿಸಲಾಗಿದೆ. 2015ರಲ್ಲಿ ನೀಡಲಾದ ‌ತೀರ್ಪಿನಲ್ಲಿಯೂ, ಜಾಮೀನು ನೀಡುವಾಗ ಈ ಸೆಕ್ಷನ್‌ನ ಪ್ರಕ್ರಿಯೆ ಪರಿಗಣಿಸುವಂತೆ ಸೂಚಿಸಲಾಗಿತ್ತು‘ ಎಂದು ನಟರಾಜ್ ವಾದ ಮಂಡಿಸಿದರು.

ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ‌ಬಳಿಕ ಜಾಮೀನು ನೀಡುವುದು ಸೂಕ್ತವೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು ಎಂದೂ ಅವರು ಮನವಿ ಮಾಡಿದರು.

ನೋಟು ರದ್ದತಿ ಸಂದರ್ಭ ಆರೋಪಿ ಮನೆಯಿಂದ ರದ್ದಾದ‌ ಹಾಗೂ ಹೊಸ‌ ಕರೆನ್ಸಿಗಳ ಭಾರಿ ಮೊತ್ತ‌ ವಶಪಡಿಸಿಕೊಳ್ಳಲಾಗಿದೆ. ಇದು ಆದಾಯ ತೆರಿಗೆ ಕಾಯ್ದೆ ಪ್ರಕಾರ ಘೋಷಿತ ಅಪರಾಧ. ಇದನ್ನು ಹಣ ಅಕ್ರಮ ವರ್ಗಾವಣೆ ಕಾಯ್ದೆಅಡಿ ತನಿಖೆಗೆ ಒಳಪಡಿಸಲಾಗಿದೆ ಎಂದೂ ನಟರಾಜ್ ನ್ಯಾಯಾಲಯಕ್ಕೆ ತಿಳಿಸಿದರು.

ವಿಚಾರಣೆ ವೇಳೆ ಸಾಕ್ಷ್ಯಗಳ ಹೇಳಿಕೆ‌ಯನ್ನೂ ದಾಖಲಿಸಲಾಗಿದೆ. ದೆಹಲಿಯ ‌ನಿವಾಸದಿಂದವಶಕ್ಕೆ ಪಡೆದ ₹ 8.59 ಕೋಟಿ ಹಣವು ಡಿಕೆಶಿ ಅವರಿಗೇ ಸೇರಿದ್ದಾಗಿದೆ ಎಂಬ ಮಾಹಿತಿ ಲಭಿಸಿದೆ ಎಂದೂ ನಟರಾಜ್ ಹೇಳಿದರು.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8ರ ಪ್ರಕಾರ‌ ಕಲೆ ಹಾಕಿರುವ ದಾಖಲೆಗಳ ಪ್ರಕಾರವೂ ಆರೋಪಿಗೆ ಜಾಮೀನು ನೀಡಕೂಡದು. ಅಪರಾಧದ ಉದ್ದೇಶವನ್ನು ಅರಿಯಬೇಕು ಎಂದೂ ಅವರು ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT