ಮಂಗಳವಾರ, ನವೆಂಬರ್ 19, 2019
28 °C

ಶಿವಕುಮಾರ್‌ ಬಂಧನಕ್ಕೆ ಮುಂಚಿನ ಕ್ಷಣಗಳು

Published:
Updated:

ನವದೆಹಲಿ: ಡಿ.ಕೆ. ಶಿವಕುಮಾರ್‌ ಬಂಧನವಾಗುವುದಕ್ಕೂ ಕೆಲವು ನಿಮಿಷಗಳ ಮುನ್ನವೇ ಬಂಧನ ಸಾಧ್ಯತೆಯ ಸುದ್ದಿ ಅವರ ಬೆಂಬಲಿಗರನ್ನು ತಲುಪಿತ್ತು. ಪರಿಣಾಮ, ಜಾರಿ ನಿರ್ದೇಶನಾಲಯದ ಕಚೇರಿಯು ಮಂಗಳವಾರ ರಾತ್ರಿ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.

* ಸತತ ನಾಲ್ಕನೆಯ ದಿನ ವಿಚಾರಣೆಗೆ ಹಾಜರಾಗಿದ್ದ ಶಿವಕುಮಾರ್‌ ಅವರನ್ನು ರಾತ್ರಿ 8.40ಕ್ಕೆ ಬಂಧಿಸಲಾಯಿತು.

* ಅದಕ್ಕೂ ಮುನ್ನ, 8.30ಕ್ಕೆ ಶಿವಕುಮಾರ್‌ ಅವರ ಬೆಂಬಲಿಗರನ್ನು ಅಧಿಕಾರಿಗಳು ಕಚೇರಿಯ ಮುಖ್ಯ ಗೇಟ್‌ನಿಂದ ಆಚೆಗೆ ಕಳುಹಿಸಿದರು. ದೊಡ್ಡ ಪ್ರಮಾಣದಲ್ಲಿ ಪೊಲೀಸ್‌ ಭದ್ರತಾ ವ್ಯವಸ್ಥೆ ಮಾಡಲಾಯಿತು. ಇದಾಗಿ ಕೆಲವೇ ಕ್ಷಣಗಳಲ್ಲಿ ಅಧಿಕಾರಿಗಳು ಮುಖ್ಯ ಗೇಟ್‌ಅನ್ನು ಮುಚ್ಚಿದರು.

* ಇದಾಗುತ್ತಿದ್ದಂತೆ ಶಿವಕುಮಾರ್‌ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿತು. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಸುಮಾರು 500ಕ್ಕೂ ಹೆಚ್ಚುಮಂದಿ ಅಭಿಮಾನಿಗಳು ಇ.ಡಿ ಕಚೇರಿಯತ್ತ ಧಾವಿಸಿ ಬಂದರು.

* ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್‌, ಜೆಡಿಎಸ್‌ ಸಂಸದ ಎಲ್‌.ಆರ್‌. ಶಿವರಾಮೆಗೌಡ, ಕುಣಿಗಲ್‌ನ ಕಾಂಗ್ರೆಸ್‌ ಶಾಸಕ ಡಾ. ರಂಗನಾಥ್‌ ಮುಂತಾದವರು ಒಳಗೆ ಏನು ನಡೆಯುತ್ತಿದೆ ಎಂದು ತಿಳಿಯಲು ಕಚೇರಿಯ ಸುತ್ತಮುತ್ತ ಓಡಾಡಿದರು.

* ಶಿವಕುಮಾರ್‌ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಆರ್‌ಎಂಎಲ್‌ ಆಸ್ಪತ್ರೆಗೆ ಕರೆದೊಯ್ಯಲು ರಾತ್ರಿ 9.15ಕ್ಕೆ ಇಡಿ ಅಧಿಕಾರಿಗಳು ಅವರನ್ನು ಕಚೇರಿಯಿಂದ ಹೊರಗೆ ಕರೆತಂದರು.

* ಬೆಂಬಲಿಗರು ಮತ್ತು ಮಾಧ್ಯಮದವರ ನೂಕುನುಗ್ಗಲಿನ ಮಧ್ಯೆಯೇ ಅಧಿಕಾರಿಗಳು ಶಿವಕುಮಾರ್‌ ಅವರನ್ನು ಕಾರಿನಲ್ಲಿ ಕೂರಿಸಿ ಆಸ್ಪತ್ರೆಯತ್ತ ಕರೆದೊಯ್ದರು.

* ಶಿವಕುಮಾರ್‌ ಬೆಂಬಲಿಗರು ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಿವಕುಮಾರ್‌ ಪರ ಜೈಕಾರ ಮೊಳಗಿಸಿದರು.

* ಇ.ಡಿ. ಅಧಿಕಾರಿಗಳು ಮಂಗಳವಾರ ಶಿವಕುಮಾರ್‌ ಅವರಿಗೆ ಮಧ್ಯಾಹ್ನದ ಊಟಕ್ಕೂ ಸಮಯ ಕೊಟ್ಟಿರಲಿಲ್ಲ. ಬದಲಿಗೆ, ಸಹೋದರ ಡಿ.ಕೆ. ಸುರೇಶ್‌ ಅವರ ಮನೆಯಿಂದ ತಂದಿದ್ದ ಆಹಾರವನ್ನು ನೀಡಿದರು. ರಾತ್ರಿ 8.30ರವರೆಗೂ ವಿಚಾರಣೆ ನಡೆಯಿತು

* ಶಿವಕುಮಾರ್‌ ಅವರು ಮಂಗಳವಾರ ಇ.ಡಿ. ಕಚೇರಿಗೆ ತೆರಳುವುದಕ್ಕೂ ಮುನ್ನ, ಕನಕಪುರದ ಕಬ್ಬಾಳಮ್ಮ ದೇವಸ್ಥಾನದ ಪೂಜಾರಿ ಕಬ್ಬಾಳೆಗೌಡ ಅವರು ಕಬ್ಬಾಳಮ್ಮ ದೇವಸ್ಥಾನದಿಂದ ತಂದಿದ್ದ  ಪ್ರಸಾದವನ್ನು ಅವರ ಕೈಗೆ ನೀಡಿದ್ದರು.

ಇಂದು ಅವರು ಗೆದ್ದಿದ್ದಾರೆ’

‘ಬಿಜೆಪಿ ಗೆಳೆಯರು ಮತ್ತು ಅಮಿತ್‌ ಶಾ ಅವರಿಗೆ ಅಭಿನಂದನೆ. ಇಂದು ಅವರು ಗೆದ್ದಿದ್ದಾರೆ, ನನ್ನನ್ನು ಬಂಧಿಸಿದ್ದಾರೆ’– ಬಂಧನದ ಬಳಿಕ ಶಿವಕುಮಾರ್‌ ಅವರ ತಕ್ಷಣದ ಪ್ರತಿಕ್ರಿಯೆ ಇದು. ಬಂಧನದ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.

ವಕೀಲರ ಜತೆ ಚರ್ಚೆ

ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಅವರು ಬಂಧನ ಸಂದರ್ಭದಲ್ಲಿ ಇ.ಡಿ ಕಚೇರಿಯ ಹೊರಗೆ ಇದ್ದರು. ತಕ್ಷಣವೇ ಅವರು ಮತ್ತು ಇತರ ಮುಖಂಡರು ವಕೀಲರನ್ನು ಭೇಟಿಯಾಗಿ ಮುಂದಿನ ಕಾನೂನು ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಜಾಮೀನು ಪಡೆಯುವ ಪ್ರಕ್ರಿಯೆಗಳ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರತಿಕ್ರಿಯಿಸಿ (+)