ಶನಿವಾರ, ಅಕ್ಟೋಬರ್ 19, 2019
27 °C
ಜಾಮೀನು ಅರ್ಜಿ ವಿಚಾರಣೆ ಇಂದು ಮುಂದುವರಿಕೆ

ನ್ಯಾಯಾಂಗ ಬಂಧನಕ್ಕೆ ಡಿ.ಕೆ ಶಿವಕುಮಾರ್‌

Published:
Updated:

ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಯಲ್ಲಿದ್ದ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ  ಇಲ್ಲಿನ ವಿಶೇಷ ನ್ಯಾಯಾಲಯವು ಮಂಗಳವಾರ ಆದೇಶ ನೀಡಿದೆ.

ಜಾಮೀನು ಕೋರಿ ಶಿವಕುಮಾರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹಾರ್‌, ಆರೋಪಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಅನಾರೋಗ್ಯಕ್ಕೆ ಒಳಗಾಗಿರುವ ಶಿವಕುಮಾರ್‌ ಅವರನ್ನು ಮೊದಲು ಇಲ್ಲಿನ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿ ವೈದ್ಯರ ಅಭಿಪ್ರಾಯ ಪಡೆಯಬೇಕು. ವೈದ್ಯರು ಸೂಚಿಸಿದರೆ ಅಲ್ಲೇ ದಾಖಲಿಸಿ ಚಿಕಿತ್ಸೆ ಮುಂದುವರಿಸಬೇಕು ಇಲ್ಲವೇ ಜೈಲಿಗೆ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಆರೋಪಿಯು ವಿಚಾರಣೆಯ ವೇಳೆ ಸಹಕಾರ ನೀಡದಿರುವುದರಿಂದ ಮಾಹಿತಿ ಸಂಗ್ರಹಿಸುವುದು ಬಾಕಿ ಇದೆ. ಹಾಗಾಗಿ ಜಾಮೀನು ಮಂಜೂರು ಮಾಡದೆ, ಮತ್ತಷ್ಟು ಅವಧಿಗೆ ನಮ್ಮ ವಶಕ್ಕೆ ನೀಡಬೇಕು. ಅಥವಾ ನ್ಯಾಯಾಂಗ ಬಂಧನದಲ್ಲೇ ವಿಚಾರಣೆಗೆ ಅವಕಾಶ ನೀಡಬೇಕು’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ಇ.ಡಿ. ಪರ ಮಾಡಿಕೊಂಡ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಲಿಲ್ಲ.

 **

ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಇ.ಡಿ. ಸಮನ್ಸ್‌

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಇ.ಡಿ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.

ಇಲ್ಲಿನ ಖಾನ್‌ ಮಾರ್ಕೆಟ್‌ ಬಳಿ ಇರುವ ಇ.ಡಿ. ಪ್ರಧಾನ ಕಚೇರಿಗೆ ಇದೇ 19ರಂದು ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರಿಗೆ ಸಂಬಂಧಿಸಿದ ಪ್ರಕರಣದ ಕುರಿತು ಹೇಳಿಕೆ ದಾಖಲಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

**

ಇ.ಡಿ. ಪರ ಎಎಸ್‌ಜಿ ನಟರಾಜ್‌ ವಾದ
* ಅನಾರೋಗ್ಯದಿಂದಾಗಿ ವಿಚಾರಣೆಗೆ ಲಭ್ಯವಾಗದ ಶಿವಕುಮಾರ್
* ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೂ ವಿಚಾರಣೆಗೆ ಅವಕಾಶ ನೀಡಿ
* ಅಕ್ರಮ ವ್ಯವಹಾರಗಳ ಮಾಹಿತಿ ನೀಡದ ಡಿಕೆಶಿ ಹಾಗೂ ಆಪ್ತರು
* ಬ್ಯಾಂಕ್‌ಗಳು ನೀಡಿರುವ ದಾಖಲೆಗಳಿಂದ ಅಕ್ರಮ ಗೋಚರಿಸಿದೆ
* ಅಕ್ರಮ ವ್ಯವಹಾರಗಳ ಆದಾಯದ ಮೂಲ ತಿಳಿಸದ ಆರೋಪಿ
* ₹ ೮೦೦ ಕೋಟಿ ಅಕ್ರಮ ಆಸ್ತಿ ಇರುವುದರಿಂದ ಜಾಮೀನು ನೀಡಕೂಡದು
* ಆರೋಗ್ಯ ಸುಧಾರಿಸಿದ್ದು, ವೈದ್ಯರೇ ಆಸ್ಪತ್ರೆಯಿಂದ ಕಳುಹಿಸಿಸಿದ್ದಾರೆ

ಡಿಕೆಶಿ ಪರ ವಕೀಲ ಸಿಂಘ್ವಿ ವಾದ
* ಶಿವಕುಮಾರ್‌ ನಿರಂತರ ವೈದ್ಯರ ನಿಗಾದಲ್ಲಿ ಇರಬೇಕಿದೆ
* ಕಸ್ಟಡಿ ವಿಸ್ತರಿಸದೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿ
* ಇ.ಡಿ. ಸಾಕಷ್ಟು ತೊಂದರೆ ನೀಡಿದ್ದರಿಂದ ಹದಗೆಟ್ಟ ಆರೋಗ್ಯ
* ಪ್ರತಿ ಬಾರಿಯೂ ಆರೋಪಿಗೆ ಹೊಸ ವಿಷಯ ಕೇಳಿದ್ದರಿಂದ ಗೊಂದಲ
* ಡಿಕೆಶಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಾಣಕ್ಕೆ ಸಮಸ್ಯೆ ಸಾಧ್ಯತೆ
* ವಿಚಾರಣೆ ಎದುರಿಸಿದವರಿಂದ ಪಡೆದ ಹೇಳಿಕೆ ಬಹಿರಂಗಪಡಿಸಿ
* ಸಂಬಂಧವೇ ಇಲ್ಲದ ನಾಲ್ವರನ್ನೂ ವಿಚಾರಣೆಗೆ ಒಳಪಡಿಸಿದ ಇ.ಡಿ
* ಮರದಿಂದ ಹಣ್ಣು ದೊರೆತಂತೆ ಹಣ ದೊರೆತಿದೆ ಎಂದು ಬಿಂಬಿಸಲಾಗಿದೆ

Post Comments (+)