ಸೋಮವಾರ, ನವೆಂಬರ್ 18, 2019
25 °C
ಶಿವಕುಮಾರ್‌ ತಾಯಿ ವಿಚಾರಣೆಗೆ ಗೈರು

ಡಿಕೆಶಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

Published:
Updated:
Prajavani

ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್‌ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ.

ಆರೋಪಿಯು ಜಾಮೀನು ಕೋರಿರುವ ಮೇಲ್ಮನವಿಯ ವಿಚಾರಣೆ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂದು ಇ.ಡಿ. ಪರ ವಕೀಲ ಅಮಿತ್‌ ಮಹಾಜನ್‌ ತಿಳಿಸಿದ ಕೂಡಲೇ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹಾರ್‌ ಆದೇಶ ನೀಡಿದರು.

‘ಕಾರಾಗೃಹ ಸಿಬ್ಬಂದಿಯು ತಾರತಮ್ಯ ನೀತಿ ಅನುಸರಿಸದೆ ಬೇರೆ ಕೈದಿಗಳಿಗೆ ನೀಡಿರುವಂತೆಯೇ ಸೌಲಭ್ಯ ನೀಡಬೇಕು. ಬೆನ್ನು ನೋವು ಇರುವುದರಿಂದ ಕುಳಿತುಕೊಳ್ಳಲು ಆರಾಮ ಕುರ್ಚಿ ನೀಡಬೇಕು, ಪುಸ್ತಕ ಓದಲು ಅವಕಾಶ ಕಲ್ಪಿಸಬೇಕು’ ಎಂಬ ಶಿವಕುಮಾರ್‌ ಅವರ ಮನವಿಯನ್ನು ಪುರಸ್ಕರಿಸಿರುವ ಪೀಠ ಟಿ.ವಿ. ನೋಡುವುದಕ್ಕೂ ಅವಕಾಶ ಕಲ್ಪಿಸಿದೆ.

ಕಳೆದ ಸೆಪ್ಟೆಂಬರ್‌ 3ರಂದು ಬಂಧನಕ್ಕೆ ಒಳಗಾಗಿ ಇಲ್ಲಿನ ತಿಹಾರ್‌ ಕೇಂದ್ರ ಕಾರಾಗೃಹದಲ್ಲಿರುವ ಶಿವಕುಮಾರ್‌ ಅವರನ್ನು ಇ.ಡಿ. ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರುಪಡಿಸಲಾಯಿತು. ಅವರನ್ನು ನೋಡಲು ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್‌, ಕಂಪ್ಲಿ ಗಣೇಶ, ಈ.ತುಕಾರಾಂ ಹಾಗೂ ಬೆಂಬಲಿಗರು ಬಂದಿದ್ದರು.

ವಿಚಾರಣೆ ಮುಂದೂಡಿಕೆ: ಜಾಮೀನು ಅರ್ಜಿ ತಿರಸ್ಕರಿಸಿ ಇ.ಡಿ. ವಿಶೇಷ ನ್ಯಾಯಾಲಯ ನೀಡಿರುವ ಆದೇಶ ಪ್ರಶ್ನಿಸಿ ಡಿ.ಕೆ. ಶಿವಕುಮಾರ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಮಂಗಳವಾರ ದೆಹಲಿ ಹೈಕೋರ್ಟ್‌ನಲ್ಲಿ ನಡೆಯಿತು. ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಶಿವಕುಮಾರ್‌ ಪರ ವಾದ ಮಂಡಿಸಿದರು.

ಸಾಕ್ಷ್ಯ ನಾಶಪಡಿಸುವ ಸಂಶಯದೊಂದಿಗೆ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ಅನೇಕ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಆರೋಪಿಯು ಸಾಕ್ಷ್ಯ ನಾಶಪಡಿಸುವ ಹಾಗೂ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.

ಪ್ರತಿ ವಾದ ಮಂಡಿಸಲು ಇ.ಡಿ. ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ಅಕ್ಟೋಬರ್‌ 17ಕ್ಕೆ ಮುಂದೂಡಿತು.

ಶಿವಕುಮಾರ್‌ ಅವರ ತಾಯಿ ಗೌರಮ್ಮ ಅವರು ಅನಾರೋಗ್ಯದ ಕಾರಣ ಮಂಗಳವಾರ ಇ.ಡಿ. ವಿಚಾರಣೆಗೆ ಹಾಜರಾಗಲಿಲ್ಲ.

ಹಣದ ವ್ಯವಹಾರ ಹಾಗೂ ವರ್ಗಾವಣೆ ಕುರಿತ ಹೇಳಿಕೆ ಪಡೆಯಲು ಇ.ಡಿ. ಅಧಿಕಾರಿಗಳು ಸೋಮವಾರ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.

ವಿಚಾರಣೆ ರದ್ದತಿ ಕೋರಿ ಹೈಕೋರ್ಟ್‌ಗೆ ಅರ್ಜಿ

ನವದೆಹಲಿ: ಇ.ಡಿ. ವಿಚಾರಣೆಯ ರದ್ದತಿ ಕೋರಿ ಡಿ.ಕೆ. ಶಿವಕುಮಾರ್‌ ಅವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರು ಮಂಗಳವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇವರಿಬ್ಬರೂ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ.

‘ಸುಪ್ರೀಂ’ ಅಭಯ: ಡಿ.ಕೆ. ಶಿವಕುಮಾರ್‌ ಅವರ ಆಪ್ತ ಸಹಾಯಕ, ಕರ್ನಾಟಕ ಭವನದ ನೌಕರ ಆಂಜನೇಯ ಹನುಮಂತಯ್ಯ ಹಾಗೂ ಎನ್‌.ರಾಜೇಂದ್ರ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಕುಮಾರ್‌ ಅವರೊಂದಿಗೆ ಆರೋಪಿಗಳಾಗಿರುವ ಈ ಇಬ್ಬರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಳೆದ ವರ್ಷ ಪ್ರಕರಣ ದಾಖಲಿಸಿತ್ತು.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್ ನೇತೃತ್ವದ ಪೀಠ, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶಿಸಿದೆ.

ಪ್ರತಿಕ್ರಿಯಿಸಿ (+)