ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಪಡೆದವರಿಗೆ ನೋಟಿಸ್ ಏಕಿಲ್ಲ? ಕೇಂದ್ರದ ಬಿಜೆಪಿ ಸಚಿವರಿಗೆ ಡಿಕೆಶಿ ಕುಟುಕು

ಆಮಿಷ ಒಡ್ಡಿದರೂ ಪಕ್ಷ ಬಿಟ್ಟಿಲ್ಲ ಎಂದ ನಾಯಕ
Last Updated 26 ಅಕ್ಟೋಬರ್ 2019, 21:03 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಜತೆ ಇದ್ದವರನ್ನೆಲ್ಲ ಕರೆದು ವಿಚಾರಣೆ ನಡೆಸಿದ್ದಾರೆ. ನನ್ನಿಂದ ದುಬಾರಿ ಮೊತ್ತದ ಮೊಬೈಲ್ ಉಡುಗೊರೆ ಪಡೆದ ಬಿಜೆಪಿ ನಾಯಕರಿಗೆ ಈವರೆಗೂ ಆದಾಯ ತೆರಿಗೆ ಇಲಾಖೆ ಏಕೆ ನೋಟಿಸ್ ನೀಡಿಲ್ಲ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಶನಿವಾರ ಬೆಂಗಳೂರಿಗೆ ಬಂದ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಜತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅನೇಕ ಪ್ರಶ್ನೆಗಳನ್ನು ಎತ್ತಿದರು.

‘ಜಲಸಂಪನ್ಮೂಲ ಸಚಿವನಾಗಿದ್ದಾಗ ದೆಹಲಿಯಲ್ಲಿ ಸಂಸರ ಸಭೆ ಕರೆದಿದ್ದೆ. ಆಗ, ಅವರಿಗೆಲ್ಲ ದುಬಾರಿ ಬೆಲೆಯ ಮೊಬೈಲ್ ಉಡುಗೊರೆಯಾಗಿ ನೀಡಿದ್ದೆ. ಈಗಿನ ಕೇಂದ್ರ ಸಚಿವರೂ ಸೇರಿದಂತೆ ಬಿಜೆಪಿ ಹಲವು ಸಂಸದರು ಪಡೆದುಕೊಂಡಿದ್ದರು. ₹50 ಸಾವಿರಕ್ಕಿಂತ ಹೆಚ್ಚು ಮೊತ್ತದ ಉಡುಗೊರೆ ತೆಗೆದುಕೊಂಡರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬೇಕು. ಆದರೆ ಈವರೆಗೂ ಏಕೆ ಕೊಟ್ಟಿಲ್ಲ. ಬಿಜೆಪಿಯವರಿಗೆ ಒಂದು ನ್ಯಾಯ, ನನಗೊಂದು ನ್ಯಾಯವೇ’ ಎಂದು ಕೇಳಿದರು.

‘ಸಾಕಷ್ಟು ಆಸೆ, ಆಮಿಷ ಒಡ್ಡಿದ್ದರೂ ಪಕ್ಷ, ಕಾರ್ಯಕರ್ತರನ್ನು ಬಿಟ್ಟು ಹೋಗಿಲ್ಲ. ಪಕ್ಷವೇ ದೇವಾಲಯ. ಅದಕ್ಕಾಗಿ ಮೊದಲು ಇಲ್ಲಿಗೆ ಬಂದಿರುವೆ’ ಎಂದು ಹೇಳಿದರು.

‘ಇ.ಡಿ ಅಧಿಕಾರಿಗಳು ನನ್ನನ್ನು ಬಂಧಿಸಿದ ಸಮಯದಲ್ಲಿ ಬಿಜೆಪಿಯ ಕೆಲ ಮುಖಂಡರು ಸಹಾಯಮಾಡಿದ್ದು, ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಸಮಯದಲ್ಲಿ ಅವರ ಹೆಸರು ಹೇಳುವುದಿಲ್ಲ. ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಅಧಿಕಾರಿಗಳು ಹೇಳಿಕೊಳ್ಳಲಾಗದಷ್ಟು ಕಿರುಕುಳ ಕೊಟ್ಟಿದ್ದು, ಮುಂದೆ ಉತ್ತರ ಕೊಡುತ್ತೇನೆ’ ಎಂದರು.

‘ಜೈಲಿಗೆ ಹೋಗಿ ಮೆತ್ತಗಾಗಿದ್ದೇನೆ ಎಂಬುದು ಸುಳ್ಳು. ಈ ಬಂಡೆ ಇನ್ನೂ ಚೂರಾಗಿಲ್ಲ. ಮತ್ತಷ್ಟು ಗಟ್ಟಿಯಾಗಿದೆ. ಕಲ್ಲು ಕೆತ್ತಿದರೆ ಆಕೃತಿಯಾಗಿ ಕೊನೆಗೆ ಪೂಜೆ ಸಲ್ಲುತ್ತದೆ’ ಎಂದು ಹೇಳಿದರು.

ರಸ್ತೆಯುದ್ದಕ್ಕೂ ಹೂಮಳೆ, ಸೇಬಿನ ಹಾರ
ಬೆಂಗಳೂರು/ದೇವನಹಳ್ಳಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ 55 ದಿನಗಳ ನಂತರ ಜಾಮೀನಿನ ಮೇಲೆ ಶನಿವಾರ ನಗರಕ್ಕೆ ಬಂದಿಳಿದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್‌ ಅವರಿಗೆ ಸಾವಿರಾರು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳು ಡಿಕೆಶಿ ಅವರನ್ನು ಹೆಗಲಲ್ಲಿ ಹೊತ್ತುಕೊಂಡೇ ಟರ್ಮಿನಲ್‌ನಿಂದ ಹೊರಗೆ ಕರೆತಂದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಶಾಸಕ ಕೃಷ್ಣ ಬೈರೇಗೌಡ ಡಿಕೆಶಿ ಅವರನ್ನು ಎದುರುಗೊಂಡರು. ಡಿಕೆಶಿ ಅವರನ್ನು ಕರೆತರುವ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಜತೆಗೆ ಅಷ್ಟೇ ಪ್ರಮಾಣದಲ್ಲಿ ಜೆಡಿಎಸ್‌ ಬಾವುಟಗಳೂ ರಾರಾಜಿಸಿದವು. ಆದರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೈರಾಗಿದ್ದರು.

ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿದ ಅವರಿಗೆ ರಸ್ತೆಯುದ್ದಕ್ಕೂ ಹೂವಿನ ಹಾರಗಳು ಅವರನ್ನು ಅಲಂಕರಿಸಿದವು. ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಸಾದಹಳ್ಳಿ ಟೋಲ್‌ಗೇಟ್‌ ಬಳಿಕ ಸೇರಿದ್ದ ಸಾವಿರಾರು ಮಂದಿ 600 ಕೆ.ಜಿ. ತೂಕದ 20 ಅಡಿ
ಉದ್ದದ ಸೇಬಿನ ಹಾರವನ್ನು ಕ್ರೇನ್‌ ಸಹಾಯದಿಂದ ಹಾಕಿದರು. ಹಾರದ ಸೇಬು ಕಿತ್ತುಕೊಳ್ಳಲು ಬಳಿಕ
ಅಭಿಮಾನಿಗಳಲ್ಲಿ ನೂಕುನುಗ್ಗಲು ನಡೆಯಿತು.

ಅಂತ್ಯವಲ್ಲ, ಆರಂಭ:ಸಾದಹಳ್ಳಿ ಟೋಲ್‌ ಗೇಟ್‌ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್‌, ‘ನನ್ನ 40 ವರ್ಷಗಳ ರಾಜಕಾರಣಕ್ಕೆ ಕೊನೆ ಹಾಡಬೇಕು ಎಂಬ ಷಡ್ಯಂತ್ರದಿಂದನನ್ನ ಮೇಲೆ ಆರೋಪ ಹೊರಿಸಲಾಗಿದೆ. ಇದು ನನ್ನ ಅಂತ್ಯವಲ್ಲ, ನನ್ನ ಹೋರಾಟದ ಆರಂಭ’ ಎಂದರು.

ದೊಡ್ಡಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ವಿಮಾನನಿಲ್ದಾಣದಲ್ಲಿ ಭಾರಿ ವಾಹನ ದಟ್ಟಣೆ ಉಂಟಾಯಿತು. ಹೀಗಾಗಿ ಶಿವಕುಮಾರ್‌ ಅವರು ಸಾದಹಳ್ಳಿ ಗೇಟ್‌ನಿಂದ ತೆರೆದ ವಾಹನದ ಬದಲಿಗೆ ಕಾರಿನಲ್ಲಿ ಕುಳಿತು ನಗರದತ್ತ ಬಂದರು. ಎಸ್ಟೀಮ್‌ ಮಾಲ್‌ ಸಮೀಪವೂ ದೊಡ್ಡ ಸಂಖ್ಯೆಯಲ್ಲಿ ಜನರಿದ್ದರು. ಹೆಬ್ಬಾಳದಲ್ಲಿ ಕಾಯುತ್ತಿದ್ದ ಕಾರ್ಯಕರ್ತರು ಮತ್ತೊಂದು ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತಿಸಿದರು.ಕೆಪಿಸಿಸಿ ಕಚೇರಿಯ ಸಮೀಪ ಸೇರಿದ್ದ ಸಾವಿರಾರು ಅಭಿಮಾನಿಗಳು ತಮ್ಮ ನಾಯಕನ್ನು ಬರ ಮಾಡಿಕೊಂಡರು. ದಾರಿಯುದ್ದಕ್ಕೂ ಕಾರ್ಯಕರ್ತರು, ಡಿಕೆ, ಡಿಕೆ, ಡಿಕೆಶಿ ಎಂದು ಘೋಷಣೆ ಕೂಗುತ್ತಲೇ ಇದ್ದರು.

ಟರ್ಮಿನಲ್‌ ಭರ್ತಿ: ವಿಮಾನನಿಲ್ದಾಣಕ್ಕೆ ಬರುವವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಸಾದಹಳ್ಳಿ ಟೋಲ್‌ಗೇಟ್‌ನಲ್ಲೇ ಅಭಿಮಾನಿಗಳನ್ನು ಪೊಲೀಸರು ತಡೆದಿದ್ದರು. ಆದರೂ ಟರ್ಮಿನಲ್‌ನಲ್ಲಿ ಜನಜಾತ್ರೆಯೇ ನೆರೆದಿತ್ತು.

ವೈದ್ಯ ರೂಪಿ ಪರಮೇಶ್ವರ!
ಜೈಲು ಆಸ್ಪತ್ರೆಯಲ್ಲಿದ್ದ ಶಿವಕುಮಾರ್ ಭೇಟಿಯಾಗಲು ಶಾಸಕ ಜಿ.ಪರಮೇಶ್ವರ ವೈದ್ಯರಾಗಬೇಕಾಯಿತು! ‘ಯಾರ ಭೇಟಿಗೆ ಅವಕಾಶ ಇರಲಿಲ್ಲ. ಅಂತಹ ಹೊತ್ತಿನಲ್ಲಿ ವೈದ್ಯರ ರೀತಿ ಬನ್ನಿ ಎಂದು ಸೂಚಿಸಿದ್ದೆ. ಬಿಳಿ ಬಣ್ಣದ ಕೋಟ್, ಹೆಗಲ ಮೇಲೆ ಸ್ಟೆತಸ್ಕೋಪ್ ಹಾಕಿಕೊಂಡು ಬಂದಿದ್ದರು’ ಎಂದುಡಿಕೆಶಿ ಹೇಳಿದರು.

ಶಿವಕುಮಾರ್‌ಗೆ ಮಹತ್ವದ ಹೊಣೆ: ಚಿಂತನೆ
ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ಬಂಧನಕ್ಕೆ ಒಳಗಾಗುವ ಮುನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಮಹತ್ವದ ಹೊಣೆ ವಹಿಸುವ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಾದ್ಯಂತ ತೀವ್ರ ಹಿನ್ನಡೆ ಅನುಭವಿಸಿರುವ ಪಕ್ಷಕ್ಕೆ ಕಸುವು ನೀಡುವ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯದ ಶಿವಕುಮಾರ್‌ಗೆ ಸೂಕ್ತ ಸ್ಥಾನ ನೀಡಲು ವರಿಷ್ಠರು ಬಯಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

**
ಬ್ಲೇಡ್‌ನಲ್ಲಿ ಕೈ ಕೊಯ್ದುಕೊಂಡ ಅಭಿಮಾನಿ
ತುಮಕೂರು:
ಶಾಸಕ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಕುಣಿಗಲ್ ತಾಲ್ಲೂಕಿನ ಜೋಡಿಹೊಸಹಳ್ಳಿಯ ಬೋರೇಗೌಡ ಅವರು ಬ್ಲೇಡ್‌ನಿಂದ ಕೈ ಮೇಲೆ ‘ಡಿ.ಕೆ.ಎಸ್’ ಎಂದು ಕೊಯ್ದುಕೊಂಡು ಅಭಿಮಾನ ಮೆರೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಡಿಕೆಶಿ ಯುದ್ಧ ಗೆದ್ದು ಬಂದಿಲ್ಲ’
ಹುಬ್ಬಳ್ಳಿ:
‘ಶಾಸಕ ಡಿ.ಕೆ.ಶಿವಕುಮಾರ ಅವರಿಗೆ ಅದ್ದೂರಿ ಸ್ವಾಗತ ನೀಡಿರುವುದು ಸರಿ ಅಲ್ಲ. ಅವರೇನೂ ಯುದ್ಧ ಗೆದ್ದು ಬಂದಿಲ್ಲ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗ ಈ ರೀತಿಯ ವರ್ತನೆ ಸರಿ ಅಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

‘ಹಿಂದೆ ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಿಡುಗಡೆಯಾದಾಗ, ಹಾರ ಹಾಕಿ ಸ್ವಾಗತಿಸಲಾಗಿತ್ತು. ಆಗ ಕಾಂಗ್ರೆಸ್‌ನವರು ಟೀಕೆ ಮಾಡಿದ್ದರು. ಈಗ ಅವರು ಮಾಡುತ್ತಿರುವುದು ಏನು’ ಎಂದು ಪ್ರಶ್ನಿಸಿದರು.

ನವದೆಹಲಿಯ ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಬಂದಿಳಿದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್‌ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಸ್ವಾಗತಿಸಿದರು.
ನವದೆಹಲಿಯ ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಬಂದಿಳಿದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್‌ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT