ಡಿಕೆಶಿ ಅವರ ಜಿಲ್ಲೆಯಲ್ಲಷ್ಟೇ ನೋಡಿಕೊಳ್ಳಲಿ: ಸಚಿವ ರಮೇಶ ಜಾರಕಿಹೊಳಿ ತಿರುಗೇಟು

7

ಡಿಕೆಶಿ ಅವರ ಜಿಲ್ಲೆಯಲ್ಲಷ್ಟೇ ನೋಡಿಕೊಳ್ಳಲಿ: ಸಚಿವ ರಮೇಶ ಜಾರಕಿಹೊಳಿ ತಿರುಗೇಟು

Published:
Updated:

ಬೆಳಗಾವಿ: ‘ಸಚಿವ ಡಿ.ಕೆ. ಶಿವಕುಮಾರ್‌ ಬೆಳಗಾವಿಯ ರಾಜಕೀಯ ಬೆಳವಣಿಗೆಗಳಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು’ ಎಂದು ‍‍ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ತಿರುಗೇಟು ನೀಡಿದರು.

‘ಅಂತೆಯೇ ನಾನು ಬೆಂಗಳೂರಿನ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿದರೆ ತಪ್ಪಾಗುತ್ತದೆ. ನಮ್ಮ ಜಿಲ್ಲೆ ನಾವು ನೋಡಿಕೊಳ್ಳಬೇಕು’ ಎಂದು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಸಮಸ್ಯೆಗಳನ್ನು ಪರಿಹರಿಸಿಕೊಡಿ ಎಂದು ನಾವು ಕರೆದಾಗ ಬೇಕಿದ್ದರೆ ಬರಲಿ. ಅವರಾಗಿಯೇ ಮಧ್ಯಪ್ರವೇಶಿಸುವುದು ಸರಿಯಲ್ಲ. ಅವರೂ ಸೇರಿದಂತೆ ಯಾರೇ ಆಗಲಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ’ ಎಂದು ವರಿಷ್ಠರಿಗೆ ಖಡಕ್ ಸಂದೇಶ ರವಾನಿಸಿದರು.

‘ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಇರುವ ಕುರಿತು ಈಗಾಗಲೇ ಚರ್ಚಿಸಿದ್ದೇವೆ. ಎಲ್ಲವೂ ಸರಿಯಾಗಿದೆ. ಮಾಧ್ಯಮದವರು ಅದನ್ನು ಮುಂದುವರಿಸಬೇಡಿ. ರಾಜಕಾರಣದಲ್ಲಿ ವಾಗ್ವಾದ ನಡೆಯುವುದು ಸಹಜ ಹಾಗೂ ಸಾಮಾನ್ಯ. ಅದನ್ನೇ ವೈರತ್ವ ಎಂದುಕೊಂಡರೆ ಮುರ್ಖತನ’ ಎಂದು ಹೇಳಿದರು.

‘ಸಹೋದರ ಸತೀಶ ಜಾರಕಿಹೊಳಿ ಮೃದುವಾಗಿ ಹೇಳುತ್ತಾರೆ. ನಾನು ಸಿಟ್ಟಿನಿಂದ ಹೇಳುತ್ತೇನೆ. ಅದು ನನ್ನ ಸ್ವಭಾವ. ಮಾಧ್ಯಮದವರು ಊಹೆ ಮಾಡಿಕೊಂಡು ತೋರಿಸಿದರೆ ಏನು ಮಾಡುವುದು?’ ಎಂದು ಕೇಳಿದರು.

‘ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯ ಸಮಸ್ಯೆಯನ್ನು ಸಂಬಂಧಿಸಿದ ಶಾಸಕರೇ ಪರಿಹರಿಸಿಕೊಳ್ಳುತ್ತಾರೆ. ಈ ವಿಷಯದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನನ್ನೊಂದಿಗೆ ಮಾತನಾಡಿಲ್ಲ. ಸತೀಶ ಜಾರಕಿಹೊಳಿ ಬಂದರೆ, ಕರೆ ಮಾಡಿದರೆ ಚರ್ಚಿಸಲು ಸಿದ್ಧವಿದ್ದೇನೆ’ ಎಂದರು.

‘ಭಿನ್ನಮತ ಇದ್ದರೇನೇ ಅದು ಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆ. ನಾವು ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸುವವರು ಇದ್ದರೆ ಹಿಟ್ಲರ್ ಆಡಳಿತವಾಗುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆ ಉತ್ತಮವಾಗಿದೆ. ಷೋ ಪೀಸ್‌ಗಳ ಮಾತು ಕೇಳಿದರೆ ಕಾಂಗ್ರೆಸ್ ಹಾಳಾಗುತ್ತದೆ. ಬೆಂಗಳೂರಿಗೆ ಹೋಗಿ ಷೋ ಮಾಡಿದರೆ ಪಕ್ಷ ಬೆಳೆಯುವುದಿಲ್ಲ’ ಎಂದು ಪರೋಕ್ಷವಾಗಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 1

  Sad
 • 2

  Frustrated
 • 5

  Angry

Comments:

0 comments

Write the first review for this !