ಬುಧವಾರ, ನವೆಂಬರ್ 20, 2019
22 °C

ಡಿಕೆಶಿ ಆಪ್ತರ ಮೇಲ್ಮನವಿ: ಇದೇ 5ಕ್ಕೆ ವಿಚಾರಣೆ

Published:
Updated:

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರ ನವದೆಹಲಿಯ ಮನೆಗಳಲ್ಲಿ ದೊರೆತ ₹ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದ ಆರೋಪದಲ್ಲಿ ಶಿವಕುಮಾರ್ ಆಪ್ತರ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್‌ ಇದೇ 5ಕ್ಕೆ ನಿಗದಿಗೊಳಿಸಿದೆ.

ಪ್ರಕರಣದ ಆರೋಪಿಗಳಾದ ಸುನಿಲ್‌ ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ಸಚಿನ್‌ ನಾರಾಯಣ ಅವರ ಮೇಲ್ಮನವಿಗಳನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಅವರ ಪರ ವಕೀಲರು, ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ‘ತುರ್ತು ವಿಚಾರಣೆಗೆ ಕಾರಣವೇನು, ಇ.ಡಿ ಮುಂದೆ ಹಾಜರಾಗಲು ಏನು ತೊಂದರೆ’ ಎಂದು ಪ್ರಶ್ನಿಸಿತು.

ಇದಕ್ಕೆ ವಕೀಲರು, ‘ಇ.ಡಿ.ಮುಂದೆ ಹಾಜರಾದರೆ ಅರ್ಜಿದಾರರನ್ನು ಬಂಧಿಸುವ ಸಾಧ್ಯತೆ ಹೆಚ್ಚಿದೆ. ಬುಧವಾರವೇ (ಸೆ.4) ಇ.ಡಿ ಎದುರು ವಿಚಾರಣೆಗೆ ಹಾಜರಾಗಬೇಕಿದೆ’ ಎಂದರು. ಇದನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿದರು.

‘ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್‌ ರದ್ದುಗೊಳಿಸಬೇಕು’ ಎಂದು ಕೋರಿದ್ದ ರಿಟ್ ಅರ್ಜಿಗಳನ್ನು ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಕಳೆದ ತಿಂಗಳು ವಜಾ ಮಾಡಿತ್ತು.

ಪ್ರತಿಕ್ರಿಯಿಸಿ (+)