ಸ್ಟ್ರಾಟೆಜಿಗಳಿಲ್ಲದೇ ರಾಜಕಾರಣ ಅಸಾಧ್ಯ, ಗೆದ್ದ ಮೇಲೆ ಗುಟ್ಟು ಹೇಳುವೆ: ಡಿಕೆಶಿ

ಶುಕ್ರವಾರ, ಏಪ್ರಿಲ್ 19, 2019
23 °C
ಜಲಸಂಪನ್ಮೂಲ ಸಚಿವ

ಸ್ಟ್ರಾಟೆಜಿಗಳಿಲ್ಲದೇ ರಾಜಕಾರಣ ಅಸಾಧ್ಯ, ಗೆದ್ದ ಮೇಲೆ ಗುಟ್ಟು ಹೇಳುವೆ: ಡಿಕೆಶಿ

Published:
Updated:
Prajavani

ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರು. ವಿಧಾನಸಭೆ ಹಾಗೂ ಲೋಕಸಭೆ ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ತಮ್ಮದೇ ಆದ ‘ಕಾರ್ಯತಂತ್ರ’ ಹೆಣೆದವರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು.

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಅಹ್ಮದ್‌ ಪಟೇಲ್‌ ಅವರನ್ನು ಗೆಲ್ಲಿಸಿಕೊಳ್ಳಲು ತಂತ್ರಗಾರಿಕೆಯ ನೇತೃತ್ವ ವಹಿಸಿದವರು. ಗುಜರಾತ್‌ನ ಕಾಂಗ್ರೆಸ್‌ ಶಾಸಕರನ್ನು ‘ಆಪರೇಷನ್‌ ಕಮಲ’ ದ ಬಲೆಯಿಂದ ಪಾರು ಮಾಡಲು ಅವರನ್ನು ಬೆಂಗಳೂರಿಗೆ ಕರೆತಂದು ‘ರಕ್ಷಣೆ’ ಕೊಟ್ಟವರು. ಅದರಿಂದಾಗಿ ಕಾಂಗ್ರೆಸ್‌ ಹೈಕಮಾಂಡ್‌ನಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡವರು.

**

* ಗೆಲುವಿನ ಕಾರ್ಯತಂತ್ರ ರೂಪಿಸುವುದರಲ್ಲಿ ಶಿವಕುಮಾರ್ ನಿಪುಣರು ಎಂಬ ಮಾತುಗಳಿವೆ. ಈ ಬಾರಿ ನಿಮ್ಮ ಸ್ಟ್ರಾಟೆಜಿ ಎಲ್ಲೆಲ್ಲಿ ಕೆಲಸ ಮಾಡುತ್ತದೆ?
ಸ್ಟ್ರಾಟೆಜಿಗಳಲ್ಲದೇ ರಾಜಕಾರಣ ಮಾಡುವುದು ಅಸಾಧ್ಯ. ಆದರೆ, ಯಾವುದೇ ರಾಜಕಾರಣಿಯೂ ತನ್ನ ಗುಟ್ಟನ್ನು ಇನ್ನೊಬ್ಬರಿಗೆ ಬಿಟ್ಟುಕೊಡುವುದಿಲ್ಲ. ಗೆದ್ದ ಮೇಲೆ ಸ್ಟ್ರಾಟೆಜಿಗಳನ್ನು ಹೇಳುವೆ.

* ನಿಮಗೆ ಶಿವಮೊಗ್ಗ ಪೂರ್ಣ ಉಸ್ತುವಾರಿ, ಮಂಡ್ಯ ಭಾಗಶಃ ಉಸ್ತುವಾರಿ ಇದೆ; ಎರಡೂ ಕಡೆ ಮೈತ್ರಿ ಅಭ್ಯರ್ಥಿ ಗೆಲ್ಲಿಸ್ತೀರಾ?
ಅಲ್ಲಿ ಇಲ್ಲಿ ಅಂತಲ್ಲ; ಪಕ್ಷ ಎಲ್ಲೆಲ್ಲಿ ಹೋಗುವಂತೆ ಸೂಚಿಸುತ್ತದೋ ಅಲ್ಲೆಲ್ಲ ಹೋಗುತ್ತೇನೆ. ನಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಫಲಿತಾಂಶ ಬಂದ ಮೇಲೆ ನೀವು ಮಾತನಾಡಿ.

* ಹಿಂದೆ ಉಗ್ರಪ್ಪನವರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಈ ಬಾರಿ?
ಉಗ್ರಪ್ಪನವರು ಗೆಲ್ಲದೇ ಅಲ್ಲಿ ಇನ್ಯಾರು ಗೆಲ್ಲುತ್ತಾರೆ? ಬಿಜೆಪಿಯವರಿಗೆ ಅಭ್ಯರ್ಥಿ ಇಲ್ಲದೇ ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಶ್ರೀರಾಮುಲು ಅಸಹಾಯಕತೆ ಏನು ಎಂಬುದು ಇದರಿಂದ ಗೊತ್ತಾಗುತ್ತದೆ. ಕಾಂಗ್ರೆಸ್ ಇತಿಹಾಸ ಇರುವ ಬಳ್ಳಾರಿಯಲ್ಲಿ ಮೊನ್ನೆ ನಡೆದ ಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದಿಂದ ಉಗ್ರಪ್ಪ ಗೆದ್ದಿದ್ದರು.  ಈ ಚುನಾವಣೆಯಲ್ಲೂ ಅದೇ ಫಲಿತಾಂಶ ನಿಶ್ಚಿತ. ಮೋದಿ ಪ್ರಭಾವ ಅಲ್ಲಿ ನಡೆಯಲ್ಲ. ಸೋನಿಯಾಗಾಂಧಿ ಅವರು ಅಲ್ಲಿ ಗೆದ್ದ ಮೇಲೆ ಯಾವ ರೀತಿ ಜಿಲ್ಲೆ ಅಭಿವೃದ್ಧಿಯಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಉಗ್ರಪ್ಪನವರು ಗೆದ್ದ ಮೇಲೆ ನೀರಾವರಿ, ವಿದ್ಯುತ್‌, ಉದ್ಯೋಗ ಸೃಷ್ಟಿ ವಿಷಯದಲ್ಲಿ ನಮ್ಮ ಸರ್ಕಾರ ಎಷ್ಟೆಲ್ಲ ಯೋಜನೆಗಳನ್ನು ರೂಪಿಸಿದೆ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ.

* ಮೈತ್ರಿಕೂಟದ ಅಭ್ಯರ್ಥಿಗಳನ್ನು ಯಾಕೆ ಗೆಲ್ಲಿಸಬೇಕು?
ಪ್ರಜಾಪ್ರಭುತ್ವ ಉಳಿಯಬೇಕಾದರೆ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ಮೋದಿಯವರು ನುಡಿದಂತೆ ನಡೆಯಲಿಲ್ಲ. ಅಚ್ಛೇದಿನ್‌ ಬರಲಿಲ್ಲ. ವರ್ತಕರು, ಬಡವರು, ಮಧ್ಯಮವರ್ಗದವರು, ರೈತರು, ಯುವಜನರ ಪಾಲಿಗೆ ಅಚ್ಛೇದಿನ್ ಬರಲೇ ಇಲ್ಲ. ನಿಮ್ಮ ಅಕೌಂಟ್‌ಗೆ ಏನಾದರೂ ದುಡ್ಡು ಹಾಕಿದ್ರಾ? ಸುಳ್ಳಿನ ಭರವಸೆಯ ಮೇಲೆ ಕೇಂದ್ರ ಸರ್ಕಾರ ನಡೆಯುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಜನರಿಗೆ ಸುಳ್ಳು ಪಳ್ಳು ಹೇಳಿ ಬಿಜೆಪಿ ಗೆಲ್ಲಿಸಿ ಎಂದು ಕೆ.ಎಸ್‌. ಈಶ್ವರಪ್ಪ ಕರೆಕೊಟ್ಟಿದ್ದರು. ನೀತಿ, ಜನರ ಸೇವೆ, ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಾಮಾಣಿಕತೆ ಆಧಾರದಲ್ಲಿ ರಾಜಕಾರಣ ನಡೆಯಬೇಕು.

* ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ‍ಕಾಂಗ್ರೆಸ್‌ನ ಸಂಘಟನೆಗೆ ಹೊಡೆತ ಬಿದ್ದು, ಬಲ ಕಳೆದುಕೊಳ್ಳುತ್ತದೆ ಎಂಬ ಭಾವನೆ ಸ್ಥಳೀಯ ಮಟ್ಟದಲ್ಲಿ ಇದೆಯಲ್ಲ?
50 ಕ್ಷೇತ್ರಗಳಲ್ಲಿ ಸಮಸ್ಯೆಗಳಿವೆ. ಆದರೆ, 174 ಕ್ಷೇತ್ರಗಳಲ್ಲಿ ಪಕ್ಷಕ್ಕೆ ಖಂಡಿತಾ ಲಾಭ ಇದೆ. ಲಾಭ ಆಗಬೇಕು ಎಂದಾದರೆ ಕೆಲವು ಕಡೆಗಳಲ್ಲಿ ನಷ್ಟ ಮಾಡಿಕೊಳ್ಳಲೇಬೇಕು.

* ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಶಿವಕುಮಾರ್?
ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಅಂತ ಹೇಳಿದ್ದೇವೆ. ಇನ್ನೂ ನಾಲ್ಕು ವರ್ಷ ಅವರೇ ಮುಖ್ಯಮಂತ್ರಿ. ಆಮೇಲಿನ ಮಾತು ಬೇರೆ.

* ನೀವು ಆಕಾಂಕ್ಷಿಯಲ್ಲವೇ?
ಮುಖ್ಯಮಂತ್ರಿ ಹುದ್ದೆ ಖರೀದಿ ಮಾಡಲು ಅದು ಅಂಗಡಿಯಲ್ಲಿ, ಸಂತೆಯಲ್ಲಿ ಸಿಗುವುದಿಲ್ಲ. ಪಕ್ಷದ ನಾಯಕರು ತೀರ್ಮಾನ ಮಾಡಬೇಕು. ಅದರ ಜತೆಗೇ ಜನರು ಮತ ಹಾಕಿ ಗೆಲ್ಲಿಸಬೇಕಲ್ವಾ?

* 22 ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ.
ಬಿಜೆಪಿಯವರು ಎರಡಂಕಿ ದಾಟುವುದಿಲ್ಲ. ಅವರಿಗೆ ಸಿಂಗಲ್ ಡಿಜಿಟ್‌ ಪಕ್ಕಾ (10ರೊಳಗೆ)

* ಶತ್ರುಗಳಂತೆ ಇದ್ದ ನೀವು ಮತ್ತು ಕುಮಾರಸ್ವಾಮಿ ಈಗ ಅಣ್ತಮ್ಮ ಆಗಿದ್ದೀರಿ; ಅದರ ಗುಟ್ಟೇನು?
ಗುಟ್ಟೇನೂ ಇಲ್ಲ. ಪಕ್ಷದ ನಾಯಕರು ಹೇಳಿದ್ದನ್ನು ಕೇಳಿದ್ದೇನೆ. ಆ ಕಾರಣಕ್ಕೆ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ವೈಯಕ್ತಿಕ ಭಿನ್ನಾಭಿಪ್ರಾಯ ಬೇರೆ.

* ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರುತ್ತಾ?
2023ರವರೆಗೂ ಮೈತ್ರಿ ಸರ್ಕಾರ ಇರುತ್ತದೆ.

* ರಾಹುಲ್ ಗಾಂಧಿ ದೌರ್ಬಲ್ಯಗಳೇನು?
ಪ್ರಧಾನಿ, ಕೇಂದ್ರ ಸಚಿವರಾಗುವ ಅವಕಾಶವನ್ನು ತ್ಯಾಗ ಮಾಡಿದ ಮನೋಭಾವವೇ ಅವರ ದೌರ್ಬಲ್ಯ.

* ಯಡಿಯೂರಪ್ಪನವರ ಬಗ್ಗೆ ಏನು ಹೇಳುತ್ತೀರಿ?
ಅವರನ್ನು ಈ ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾರೆ. ಆಮೇಲೆ ಅವರನ್ನು ವಿಶ್ರಾಂತಿಗೆ ಕಳುಹಿಸುತ್ತಾರೆ. . ಪಾಪ!

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !