ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ‘ಪಟ್ಟಾಭಿಷೇಕ’: ಕೆಪಿಸಿಸಿಯಲ್ಲಿ ಭರದ ಸಿದ್ಧತೆ

ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸೇರಿ ಹೊರರಾಜ್ಯದ ಏಳು ನಾಯಕರು ಭಾಗಿ
Last Updated 1 ಜುಲೈ 2020, 10:03 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಘಟಕದ ನೂತನ ಅಧ್ಯಕ್ಷರಾಗಿ ಗುರುವಾರ ಬೆಳಿಗ್ಗೆ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕರಿಸುವ ಹಿನ್ನೆಲೆಯಲ್ಲಿ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ನೂತನ ಕಚೇರಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ಪದಗ್ರಹಣ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆರಂಭಗೊಂಡು ಮಧ್ಯಾಹ್ನ ಒಂದು ಗಂಟೆಯವರೆಗೆ ಸುಮಾರು ಎರಡೂವರೆ ಗಂಟೆ ಕಾಲ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳ ಪರಿಶೀಲನೆ ನಡೆಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸೇವಾದಳ ಕಾರ್ಯಕರ್ತರಿಂದ ಗೌರವ ರಕ್ಷೆ ನಡೆಯಲಿದೆ. ಬಳಿಕ ಬಳಿಕ ವಂದೇ ಮಾತರಂ, ಸ್ವಾಗತ ಭಾಷಣ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಾರ್ಯಕ್ರಮ ಉದ್ಘಾಟಿಸುವರು.

ನಂತರ ವಿವಿಧ ತಂಡಗಳಿಂದ ಜ್ಯೋತಿ ಬೆಳಗಿಸುವುದು, ಹಿರಿಯ ನಾಯಕರಿಂದ ಸಂವಿಧಾನ ಪೀಠಿಕೆ ಪಠಣ, ಉದ್ಘಾಟನಾ ಭಾಷಣ, 11.30ಕ್ಕೆ ಶಿವಕುಮಾರ್‌ ಅವರಿಂದ ಸಾಮೂಹಿಕ ಪ್ರತಿಜ್ಞೆ ನಡೆಯಲಿದೆ. ಈ ಎಲ್ಲ ಕಾರ್ಯಕ್ರಮಗಳ ನಂತರ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಿದ್ದಾರೆ. ನಂತರ ದಿನೇಶ್ ಗುಂಡೂರಾವ್ ಮಾತನಾಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ ಭಾಷಣ ಮಾಡಲಿದ್ದು, ಕೊನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಮಾತನಾಡಲಿದ್ದಾರೆ. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.

ಕಾರ್ಯಕ್ರಮಕ್ಕೆ 150 ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೊರರಾಜ್ಯಗಳಿಂದ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಪಾಲ್, ಕೇರಳದ ವಿರೋಧ ಪಕ್ಷದ ನಾಯಕ ನಾಯಕ ರಮೇಶ್ ಚೆನ್ನಿತಾಲ್, ಕೇರಳ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಸೀಮಾಂದ್ರದ ಸಾಕೆ ಶೈಲಜನಾಥ್, ಉತ್ತಮ ಕುಮಾರ್ ರೆಡ್ಡಿ ಭಾಗವಹಿಸಲಿದ್ದಾರೆ. ಉಳಿದಂತೆ, ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಹೆಚ್ಚು ಜನ ಸೇರುವ ಆತಂಕ: ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದೆಂಬ ಕಾರಣಕ್ಕೆ, ಅವರನ್ನು ನಿಯಂತ್ರಿಸುವ ಬಗ್ಗೆ ಕೈ ನಾಯಕರಿಗೆ ಚಿಂತೆಯಾಗಿದೆ. ನಿಗದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುವ ಸಾಧ್ಯತೆ ಇದೆ. ಹೆಚ್ಚು ಜನ ಸೇರಿದರೆ ಏನು ಮಾಡುವುದೆಂಬ ಚಿಂತೆ ನಾಯಕರನ್ನು ಕಾಡತೊಡಗಿದೆ.

ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುತ್ತಿದೆ. ಹೀಗಾಗಿ ಹೆಚ್ಚು ಜನರು ಸೇರಿ‌ ನೂಕು ನುಗ್ಗಲು ಉಂಟಾದರೆ ಏನು ಮಾಡಬೇಕು ಎಂಬ ಬಗ್ಗೆ ನಾಯಕರ ಮಧ್ಯೆ ಚರ್ಚೆ ನಡೆದಿದೆ. ಹಾಲಿ, ಮಾಜಿ ಶಾಸಕರು, ಸಂಸದರು, ನಾಯಕರು ಸೇರಿ ಆಹ್ವಾನಿತರಿಗೆ ಮಾತ್ರ ಭಾಗವಹಿಸಲು ಅನುಮತಿ ನೀಡಲಾಗಿದೆ. ಅನುಮತಿ ಹೊರತಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಂದರೆ, ಅಂತರ ಪಾಲಿಸದೆ ನೂಕುನುಗ್ಗಲು ಉಂಟಾದರೆ ತಪ್ಪು ಸಂದೇಶ ರವಾನೆಯಾಗಬಹುದು ಎಂಬ ಆತಂಕ ನಾಯಕರನ್ನು ಚಿಂತೆಗೀಡು ಮಾಡಿದೆ.

ಜಾತ್ರೆ ಮಾಡಬೇಡಿ– ಕಿವಿಮಾತು: ಪ್ರತಿಜ್ಞಾ ಕಾರ್ಯಕ್ರಮವನ್ನು ಜಾತ್ರೆ ಮಾಡುವುದು ಬೇಡ ಎಂದು ಹಿರಿಯ ನಾಯಕರು ಶಿವಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಕಾರ್ಯಕರ್ತರ ನಡುವೆ ಅಂತರ ಇಲ್ಲದ ಕಾರಣ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ರತಿಜ್ಞಾವಿಧಿ ಕಾರ್ಯಕ್ರಮವೂ ಕಪ್ಪು ಚುಕ್ಕೆ ಆಗಬಾರದೆಂದು ಕೆಲವು ಮುಖಂಡರು ಕಿವಿಮಾತು ಹೇಳಿದ್ದಾರೆ.

ಕನಕಪುರ ಸೇರಿದಂತೆ ಯಾವುದೇ ರಾಜ್ಯದ ಯಾವುದೇ ಭಾಗದಿಂದ ಅಭಿಮಾನಿಗಳು, ಕಾರ್ಯಕರ್ತರು ಬರುವುದು ಬೇಡ ಎಂದು ಈಗಾಗಲೇ ಶಿವಕುಮಾರ್ ಮನವಿ ಮಾಡಿದ್ದಾರೆ.

‘ಪಾಸ್ ಇದ್ದವರಿಗೆ ಮಾತ್ರ ಅವಕಾಶ ಕೊಡಿ. ಉಳಿದಂತೆ ಯಾರಿಗೂ, ಯಾವುದೇ ಕಾರಣಕ್ಕೆ ಒಳಗೆ ಪ್ರವೇಶ ನೀಡಬೇಡಿ. ಪಕ್ಷದ ಕಚೇರಿಯ ದೂರದಲ್ಲೇ ತಡೆದು ವಾಪಸ್ ಕಳುಹಿಸಿ’ ಎಂದು ಪೋಲಿಸ್ ಇಲಾಖೆಗೆ ಶಿವಕುಮಾರ್ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT