ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯ ಪ್ರವೇಶಕ್ಕೆ ಲಿಂಗ ತಾರತಮ್ಯ ಬೇಡ: ಸಿರಿಗೆರೆ ಶ್ರೀ

Last Updated 18 ನವೆಂಬರ್ 2018, 20:01 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಹಿಳೆಯರು ಹೋಗದಂತೆ ತಡೆಯುತ್ತಿರುವುದು ಸರಿಯಲ್ಲ. ಸಂಪ್ರದಾಯಗಳನ್ನು ನಾವು ವೈಚಾರಿಕ ನೆಲೆಗಟ್ಟಿನಲ್ಲಿ ನೋಡಬೇಕು’ ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಗೌಡಿಹಳ್ಳಿಯಲ್ಲಿ ಭಾನುವಾರ ನಡೆದ ಬಸವೇಶ್ವರ ಸ್ವಾಮಿ ಹಾಗೂ ವಿಘ್ನೇಶ್ವರ ದೇವಾಲಯಗಳ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಶಬರಿಮಲೆ ಪ್ರವೇಶ ಬೇಕೇ ಬೇಡವೇ ಎಂದು ನೆರೆದಿದ್ದ ಮಹಿಳೆಯರನ್ನು ಪ್ರಶ್ನಿಸಿ ಕೈ ಎತ್ತಿಸುವುದರ ಮೂಲಕ ಅಭಿಪ್ರಾಯ ಪಡೆದ ಶ್ರೀಗಳು, ‘ಇಂತಹ ಆಧುನಿಕ ಯುಗದಲ್ಲೂ ಲಿಂಗ ತಾರತಮ್ಯ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸುಪ್ರೀಂ ಕೋರ್ಟ್ ತೀರ್ಪಿಗೂ ಮನ್ನಣೆ ಸಿಗದಿರುವುದು ದುರಂತ. ಸುಪ್ರೀಂ ಕೋರ್ಟ್ ಈಗ ನೀಡಿರುವ ತೀರ್ಪನ್ನು ವಚನಕಾರರು 12ನೇ ಶತಮಾನದಲ್ಲೇ ನೀಡಿದ್ದರು. ಈ ತೀರ್ಪು ದೇವರ ದಾಸಿಮಯ್ಯನ ‘ಮೊಲೆ-ಮುಡಿ ಬಂದಡೆ ಹೆಣ್ಣೆಂಬರು..’ ಎಂಬ ವಚನದ ಸಾರವಷ್ಟೆ’ ಎಂದರು.

ಶಬರಿಮಲೆಯ ವಿಚಾರ ಸಾಮಾಜಿಕ ಹೋರಾಟವೇ ಹೊರತು ಧಾರ್ಮಿಕ ಸಂಘರ್ಷವಲ್ಲ. ದೇವಾಲಯ ಪ್ರವೇಶಕ್ಕೆ ಹಠ ಮಾಡುತ್ತಿರುವ ಮಹಿಳೆಯರ ಹಿನ್ನೆಲೆಯನ್ನೂ ನೋಡಬೇಕಾಗುತ್ತದೆ. ಅವರಿಗೆ ದೇವರ ದರ್ಶನದಿಂದ ಸಿಗುವ ಧನ್ಯತಾ ಭಾವಕ್ಕಿಂತ ಹೋರಾಟದಲ್ಲಿ ಗೆಲುವು ಸಾಧಿಸಿದ ಅಹಂಕಾರವೇ ಹೆಚ್ಚಾಗುತ್ತದೆ. ಅಯ್ಯಪ್ಪ ಭಕ್ತರು ತಿಂಗಳವರೆಗೆ ವ್ರತಾಚರಣೆ ಮಾಡುತ್ತಾರೆ. ದರ್ಶನ ಮುಗಿದ ನಂತರ ಮತ್ತೆ ದುಶ್ಚಟಗಳನ್ನು ಆರಂಭಿಸುತ್ತಾರೆ. ಮನುಷ್ಯನ ಮನಸ್ಸು ಪರಿವರ್ತನೆ ಆಗದ ಹೊರತು ಧಾರ್ಮಿಕ ವ್ರತಾಚರಣೆಯಿಂದ ಬದಲಾವಣೆ ಅಸಾಧ್ಯ ಎಂದು ಹೇಳಿದರು.

ಮಹೇಶ್ವರ ಜಾತ್ರೆಯಲ್ಲಿ ಸ್ತ್ರೀಯರಿಗೆ ಪ್ರವೇಶ:‘ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುವ ಮಹೇಶ್ವರ ಜಾತ್ರೆಯಲ್ಲಿ ಸ್ತ್ರೀಯರಿಗೆ ಪ್ರವೇಶ ನಿಷಿದ್ಧ. ಒಮ್ಮೆ ಜಗಳೂರು ತಾಲ್ಲೂಕಿನ ಬಸವನಾಳ್ ಗ್ರಾಮದ ಜನ ಮಹೇಶ್ವರ ಜಾತ್ರೆಗೆ ಬರುವಂತೆ ಆಹ್ವಾನ ನೀಡಿದ್ದರು. ಜಾತ್ರೆಯಲ್ಲಿ ಮಹಿಳೆಯರಿಗೂ ಪ್ರವೇಶ ಕೊಟ್ಟರೆ ಮಾತ್ರ ಭಾಗವಹಿಸುತ್ತೇನೆ ಎಂದು ಬಂದವರಿಗೆ ಸೂಚಿಸಿದೆ. ಗ್ರಾಮಸ್ಥರು ಗೊಂದಲಕ್ಕೆ ಬಿದ್ದರು. ಕೊನೆಗೆ ಗುರುಗಳ ಇಚ್ಛೆಯಂತೆ ಮಹಿಳೆಯರಿಗೆ ಪ್ರವೇಶ ನೀಡಿದರು. ಈಗಲೂ ಅಲ್ಲಿ ಮಹಿಳೆಯರು, ಪುರುಷರು ಒಟ್ಟಾಗಿ ಜಾತ್ರೆ ನಡೆಸುತ್ತಾರೆ. ಗ್ರಾಮಕ್ಕೆ ಯಾವುದೇ ಕಂಟಕ ಬಂದಿಲ್ಲ' ಎಂದು ಉದಾಹರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT