ಸೋಮವಾರ, ನವೆಂಬರ್ 18, 2019
25 °C
ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ

ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ: ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್

Published:
Updated:

ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಶುಕ್ರವಾರ (ನ.8) ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್‌ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕರೆ ನೀಡಿದೆ. ಇದರಿಂದಾಗಿ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

‘ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ ವೈದ್ಯರು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನವಾದ ಗುರುವಾರವೂ ಮುಂದುವರೆಯಿತು.

ಪ್ರತಿಭಟನೆಗೆ ಐಎಂಎ, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಒಕ್ಕೂಟ (ಫಾನಾ) ಸೇರಿದಂತೆ ವಿವಿಧ ಸಂಘಟನೆ ಬೆಂಬಲ ಸೂಚಿಸಿವೆ. ಐಎಂಎ 24ಗಂಟೆ ಒಪಿಡಿ ಬಂದ್‌ಗೆ ಕರೆ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6ಗಂಟೆವರೆಗೆ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಮಾತ್ರ ಲಭ್ಯವಾಗಲಿದೆ. 

ಈ ನಡುವೆ ‘ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಆರೋಗ್ಯ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಏನಿದೆ, ಏನಿಲ್ಲ?
* ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಇರುವುದಿಲ್ಲ
* ಒಳರೋಗಿಗಳಿಗೆ ಚಿಕಿತ್ಸೆ, ತುರ್ತು ಚಿಕಿತ್ಸೆ ಎಂದಿನಂತೆ
* ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌, ಒಪಿಡಿ ಸೇರಿ ಎಲ್ಲವೂ ದೊರೆಯಲಿದೆ

**

ಒಂದು ದಿನ ಒಪಿಡಿ ಬಂದ್‌ಗೆ ಬೆಂಬಲ ಸೂಚಿಸಲಾಗಿದೆ. ಕರ್ತವ್ಯನಿರತ ವೈದ್ಯರಿಗೆ ಸರ್ಕಾರ ಸೂಕ್ತ ರಕ್ಷಣೆಯನ್ನು ಒದಗಿಸುವ ಜತೆಗೆ ಹಲ್ಲೆ ಮಾಡಿದವರ ವಿರುದ್ಧ ಕಾನೂನಿನ ಅಡಿ ಕ್ರಮಕೈಗೊಳ್ಳಬೇಕು.
-ಡಾ. ಯತೀಶ್ ಗೋವಿಂದಯ್ಯ, ಫಾನಾ ಕಾರ್ಯದರ್ಶಿ

ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಅದೇ ರೀತಿ, ಆಸ್ಪತ್ರೆಗಳಲ್ಲಿ ವೈದ್ಯರಿಗೆ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು.
-ಡಾ.ಎಸ್.ಶ್ರೀನಿವಾಸ್, ಐಎಂಎ ರಾಜ್ಯ ಶಾಖೆ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)