ರಾಜ್ಯದಲ್ಲೂ ವೈದ್ಯರ ಮುಷ್ಕರ: ಕರ್ತವ್ಯಕ್ಕೆ ಹಾಜರಾಗಲು ಸಿಎಂ ಕುಮಾರಸ್ವಾಮಿ ಸೂಚನೆ

ಗುರುವಾರ , ಜೂಲೈ 18, 2019
23 °C
ವೈದ್ಯಕೀಯ ಸೇವೆ ಸಿಗದೆ ರೋಗಿಗಳ ಪರದಾಟ

ರಾಜ್ಯದಲ್ಲೂ ವೈದ್ಯರ ಮುಷ್ಕರ: ಕರ್ತವ್ಯಕ್ಕೆ ಹಾಜರಾಗಲು ಸಿಎಂ ಕುಮಾರಸ್ವಾಮಿ ಸೂಚನೆ

Published:
Updated:

ಬೆಂಗಳೂರು: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ ಮುಷ್ಕರಕ್ಕೆ ರಾಜ್ಯದಲ್ಲಿಯೂ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ವಿವಿಧ ಭಾಗಗಳ ಆಸ್ಪತ್ರೆಗಳ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದು, ರೋಗಿಗಳು ಪರದಾಡುವಂತಾಗಿದೆ.

ಇದನ್ನೂ ಓದಿ: ವೈದ್ಯರ ಸುರಕ್ಷತೆ, ಭದ್ರತೆ ಕುರಿತ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು​

ಇದರ ಬೆನ್ನಲ್ಲೇ, ಮುಷ್ಕರನಿರತ ವೈದ್ಯರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಇದನ್ನೂ ಓದಿ: ಬೀದಿಗಿಳಿದರೇಕೆ ವೈದ್ಯರು | ಕೊಲ್ಕತ್ತಾದಲ್ಲಿ ಅಂದು ಏನಾಯ್ತು? ಮುಂದೇನಾಗುತ್ತೆ?​

‘ವೈದರ ಮೇಲೆ ಹಲ್ಲೆ ಖಂಡನೀಯ. ಆದರೆ, ವೈದ್ಯರು ಮುಷ್ಕರನಿರತರಾದರೆ ಸಹಸ್ರಾರು ರೋಗಿಗಳಿಗೆ ತೊಂದರೆಯಾಗುತ್ತದೆ. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತೊಂದರೆಯಾಗಿದೆ. ಮುಷ್ಕರವನ್ನು ನಿರ್ಬಂಧಿಸಿ ರಾಜ್ಯ ಸರ್ಕಾರ ಮೂರು ದಿನಗಳ ಹಿಂದೆಯೇ ಸುತ್ತೋಲೆ ಹೊರಡಿಸಿದೆ. ಕೂಡಲೇ ವೈದ್ಯರು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಸೂಚನೆ ನೀಡಿದ್ದಾರೆ.

‘ಯಾರ ಮೇಲಿನ ಹಲ್ಲೆಯನ್ನೂ ಒಪ್ಪಲಾಗದು. ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ. ಪ್ರತಿಭಟನೆ ಶಾಂತಿಯುತವಾಗಿರಲಿ ಮತ್ತು ರೋಗಿಗಳಿಗೆ ತೊಂದರೆಯಾಗದಂತಿರಲಿ ಎಂದು ಮುಷ್ಕರನಿರತ ವೈದ್ಯರಲ್ಲಿ ಮನವಿ ಮಾಡುತ್ತೇನೆ’ ಎಂದು ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ಬೆಳಗಾವಿಯಲ್ಲಿ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ಬಂದ್ ಮಾಡಿರುವ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು ಕೂಡ ಪ್ರತಿಭಟನೆ ನಡೆಸಿದ್ದಾರೆ.

ಹೊಸಪೇಟೆಯಲ್ಲಿಯೂ ಪ್ರತಿಭಟನೆ ನಡೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ರ್‍ಯಾಲಿ ನಡೆಸಿದ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.


ಹೊಸಪೇಟೆಯಲ್ಲಿ ವೈದ್ಯರ ಪ್ರತಿಭಟನಾ ರ್‍ಯಾಲಿ

ತುಮಕೂರಿನಲ್ಲಿ ಸೋಮವಾರ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ‌ಯನ್ನು ಖಂಡಿಸಿದರು.

ಭಾರತೀಯ ವೈದ್ಯರ ಸಂಘ ಹಾವೇರಿ ಶಾಖೆ ವತಿಯಿಂದ ಹಾವೇರಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಮೈಸೂರಿನಲ್ಲಿ ರೋಗಿಗಳ ಪರದಾಟ


ಮೈಸೂರಿನ ವಾತ್ಸಲ್ಯ ಆಸ್ಪತ್ರೆಯ ಆವರಣ

ದೇಶಾದ್ಯಂತ ಸೋಮವಾರ ನಡೆಯುತ್ತಿರುವ ವೈದ್ಯರ ಮುಷ್ಕರ ಕ್ಕೆ ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಗಿದೆ. ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಜೆಎಎಸ್‌ಎಸ್, ಅನಘ, ವಾತ್ಸಲ್ಯ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಹೊರರೋಗಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ‌. ಚಿಕಿತ್ಸೆಗಾಗಿ ಬರುವ ರೋಗಿಗಳು ಪರದಾಡುವಂತಾಗಿದೆ.

ಹಾವೇರಿಯಲ್ಲೂ ಮುಂದುವರೆದ ಪ್ರತಿಭಟನೆ

ಪಶ್ಚಿಮ ಬಂಗಾಳದ ವೈದ್ಯರ ಮೇಲೆ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯರ ಸಂಘ ಹಾವೇರಿ ಶಾಖೆಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮೃತ್ಯುಂಜಯ ತುರಕಾಣಿ ಮಾತನಾಡಿ, ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ಖಂಡನೀಯ. ಈ ಹಿಂದೆಯೂ ಹಲವುಬಾರಿ ಇಂತಹ ಘಟನೆಗಳು ನಡೆದಿವೆ. ಇದು ಹೀಗೆ ಮುಂದುವರಿದರೆ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗುತ್ತದೆ. ಚಿಕಿತ್ಸೆ ನೀಡುವಾಗ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೇಟು ಹಾಕಬೇಕಾಗುತ್ತದೆ ಎಂದರು.

ಜಿಲ್ಲೆಯಲ್ಲಿಯೂ ಇಂತಹ ಘಟನೆ ನಡೆದಿದೆ. ಇದು ಮುಂದುವರಿಯುವ ಸಂಭವ ಇದೆ. ಅದಕ್ಕಾಗಿ ವೈದ್ಯರ ಮೇಲೆ ಹಲ್ಲೆ ಮಾಡವರಿಗೆ ಜಾಮೀನು ರಹಿತ ಶಿಕ್ಷೆಯಾಗಬೇಕು. ವೈದ್ಯರಿಗಾಗಿ ವಿಶೇಷ ಕಾನೂನನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಕಾಲ್ನಾಡಿಗೆ ಜಾಥ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿಜಯಪುರ: ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳಲ್ಲಿ ಸೇವೆ ಸ್ಥಗಿತ: ಜಿಲ್ಲಾ ಆಸ್ಪತ್ರೆಯಲ್ಲಿ ನೂಕು ನುಗ್ಗಲು

ಭಾರತೀಯ ವೈದ್ಯರ ಸಂಘ (ಐಎಂಎ) ನೀಡಿರುವ ಬಂದ್ ಕರೆಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ ಗಳು ಸೇವೆ ಸ್ಥಗಿತಗೊಳಿಸಿವೆ.

ಬೆಳಿಗ್ಗೆ 6 ಗಂಟೆಯಿಂದಲೇ ಖಾಸಗಿ ಆಸ್ಪತ್ರೆಗಳ ಒಪಿಡಿ ಸೇವೆ ಬಂದ್ ಆಗಿದೆ. ಮುಷ್ಕರಕ್ಕೆ ವಿವಿಧ ವೈದ್ಯಕೀಯ ಸಂಘಟನೆಗಳು, ವೈದ್ಯಕೀಯ ಪ್ರಯೋಗಾಲಯಗಳೂ ಕೂಡ ಬೆಂಬಲ ಸೂಚಿಸಿವೆ.

ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆಗೆ ಸನ್ನದ್ಧರಾಗಿದ್ದು, ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ನಾಮುಂದು ತಾಮುಂದು ಎಂದು ಚಿಕಿತ್ಸೆಗೆ ಮುಗಿ ಬೀಳುತ್ತಿದ್ದಾರೆ.

ವೈದ್ಯರಿಗೆ ನೀಡಲಾಗಿದ್ದ ರಜೆಯನ್ನು ರದ್ದು ಪಡಿಸಲಾಗಿದ್ದು, ರಜೆಯ ಮೇಲೆ ತೆರಳಿದ್ದ ವೈದ್ಯರನ್ನು ವಾಪಸ್ ಕರಸಲಾಗಿದೆ.
ಬಂದ್ ಗೆ ಜಿಲ್ಲೆಯ ಒಟ್ಟು‌ 140 ಖಾಸಗಿ ಆಸ್ಪತ್ರೆ ಹಾಗೂ 800 ಕ್ಲಿನಿಕ್ ಗಳು ಬೆಂಬಲ ಸೂಚಿಸಿವೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಮಧ್ಯಾಹ್ನ ಊಟದ ಅವಧಿಯಯಲ್ಲಿ ಪಾಳಿಯ ಮೇಲೆ ವೈದ್ಯರನ್ನು ಊಟಕ್ಕೆ ತೆರಳು ಸೂಚಿಸಲಾಗಿದೆ.

ಇನ್ನಷ್ಟು...

ಮಮತಾ ಮನವಿ- ಬೇಡಿಕೆ ಈಡೇರಿಸುತ್ತೇವೆ, ಕೆಲಸಕ್ಕೆ ಬನ್ನಿ

ವೈದ್ಯರ ಮುಷ್ಕರ: ದೆಹಲಿ, ಹೈದರಾಬಾದ್‌ನಲ್ಲೂ ಚಿಕಿತ್ಸೆ ಇಲ್ಲದೇ ರೋಗಿಗಳ ಪರದಾಟ 

17ರಂದು ದೇಶವ್ಯಾಪಿ ವೈದ್ಯರ ಮುಷ್ಕರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !