ವೈದ್ಯರ ಪ್ರತಿಭಟನೆ: ಸೇವೆ ಅಸ್ತವ್ಯಸ್ತ, ಒಬ್ಬ ಸಾವು, ಪರದಾಡಿದ ರೋಗಿಗಳು

ಶುಕ್ರವಾರ, ಜೂಲೈ 19, 2019
22 °C

ವೈದ್ಯರ ಪ್ರತಿಭಟನೆ: ಸೇವೆ ಅಸ್ತವ್ಯಸ್ತ, ಒಬ್ಬ ಸಾವು, ಪರದಾಡಿದ ರೋಗಿಗಳು

Published:
Updated:
Prajavani

ಬೆಂಗಳೂರು: ರಾಜ್ಯದಲ್ಲಿ ವೈದ್ಯರ ಪ್ರತಿಭಟನೆಯಿಂದಾಗಿ ಸಕಾಲಿಕವಾಗಿ ಚಿಕಿತ್ಸೆ ಸಿಗದೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ಬಾದಾಮಿ ತಾಲ್ಲೂಕು ಕೆರೂರಿನ ಜೆಡಿಎಸ್ ಕಾರ್ಯಕರ್ತ ದಾವಲಸಾಬ್ ಕೊಣ್ಣೂರ (55) ಮೃತಪಟ್ಟವರು.

ಜ್ವರ, ಅಸ್ತಮಾದಿಂದ ಬಳಲುತ್ತಿದ್ದ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ ಬಂದ್ ಮಾಡಿದ್ದರಿಂದ ಚಿಕಿತ್ಸೆ ದೊರೆಯಲಿಲ್ಲ. ಬಳಿಕ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಪ್ರತಿಭಟನೆಯ ಪರಿಣಾಮವಾಗಿ ವೈದ್ಯಕೀಯ ಸೇವೆ ಸಿಗದೆ ರೋಗಿಗಳು ಪರದಾಡಿದರು. ಬಹುತೇಕ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಲಿಲ್ಲ. ಸರ್ಕಾರಿ ಆಸ್ಪತ್ರೆಗಳು ತೆರೆದಿದ್ದರೂ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಬಹುತೇಕ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹೊರರೋಗಿಗಳ ವಿಭಾಗ ತೆರೆದಿದ್ದರೂ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಇತರ ಸಿಬ್ಬಂದಿ ಇರಲಿಲ್ಲ. ಚಿಕಿತ್ಸೆಗೆ ಬಂದವರು ಕೆಲ ಸಮಯದ ಕಾದು ನಂತರ ಮರಳಿದರು. ರಾಜ್ಯದ ಇತರೆಡೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸಿದರೆ, ಕೆಲವೆಡೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಬೆಂಬಲ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗಿತ್ತು. ಆಸ್ಪತ್ರೆಯಿಂದ ದೂರ ಉಳಿದಿದ್ದ ವೈದ್ಯರು ಪ್ರತಿಭಟನೆಯಲ್ಲಿ ತೊಡಗಿದ್ದರು. ಜತೆಗೆ ಅರೆವೈದ್ಯಕೀಯ ಸಿಬ್ಬಂದಿ ಕೈಜೋಡಿಸಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತ್ತು. ಪ್ರಯೋಗಾಲಯ, ರಕ್ತನಿಧಿ ಕೇಂದ್ರಗಳು, ಸ್ಕ್ಯಾನಿಂಗ್, ಎಕ್ಸ್‌ರೇ ಕೇಂದ್ರಗಳೂ ಸಹ ಬಂದ್ ಆಗಿದ್ದವು.

* ಇದನ್ನೂ ಓದಿ: ವೈದ್ಯರ ಹಟಕ್ಕೆ ಮಣಿದ ಮಮತಾ | ಭದ್ರತೆ ಸೇರಿ ಎಲ್ಲಾ ಬೇಡಿಕೆ ಈಡೇರಿಕೆ ಭರವಸೆ

ನಿಮ್ಹಾನ್ಸ್‌ನಲ್ಲಿ ಹೆಚ್ಚು: ನಿಮ್ಹಾನ್ಸ್‌ನಲ್ಲಿ ರೋಗಿಗಳು ಹೆಚ್ಚು ಪರದಾಡಿದರು. ವೈದ್ಯರ ಪ್ರತಿಭಟನೆಯ ವಿಷಯ ತಿಳಿಯದೇ ಬಂದಿದ್ದ ಗ್ರಾಮೀಣ ಭಾಗದ ಹಾಗೂ ಹೊರ ರಾಜ್ಯಗಳ ರೋಗಿಗಳು ವೈದ್ಯರಿಗಾಗಿ ಕಾದುನಿಂತು ಸುಸ್ತಾದರು. ಒಂದೆಡೆ ಚಿಕಿತ್ಸೆಗೆ ವೈದ್ಯರು ಸಿಗದಿದ್ದರೆ, ಮತ್ತೊಂದೆಡೆ ಕನಿಷ್ಠ ಪಕ್ಷ ಮಾಹಿತಿ ನೀಡಲು ಸಿಬ್ಬಂದಿ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆಲ ತಜ್ಞ ವೈದ್ಯರು ವಾರಕ್ಕೆ ಒಮ್ಮೆ ಮಾತ್ರ ಸಿಗುತ್ತಾರೆ. ಈವತ್ತು ಸಿಗಲಿಲ್ಲ, ಚಿಕಿತ್ಸೆಗಾಗಿ ಮತ್ತೆ ಒಂದು ವಾರ ಕಾಯಬೇಕಾಗಿದೆ’ ಎಂದು ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಯೊಬ್ಬರು ಅಳಲು ತೋಡಿಕೊಂಡರು.

ಜಿಲ್ಲೆಗಳಲ್ಲೂ ಮುಷ್ಕರ:  ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ ಬಂದ್ ಮಾಡಲಾಗಿತ್ತು. ವೈದ್ಯರು ಪ್ರತಿಭಟನೆ ನಡೆಸಿ, ಅಲ್ಲಿನ ಜಿಲ್ಲಾಧಿಕಾರಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸಿದರೆ, ಕೆಲವರು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ವೈದ್ಯರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದವರು ಸಹಜವಾಗಿ ಜಿಲ್ಲಾ, ತಾಲ್ಲೂಕು ಸಾರ್ವಜನಿಕರ ಆಸ್ಪತ್ರೆಗಳಿಗೆ ಬಂದಿದ್ದರಿಂದ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿತ್ತು. ಮೈಸೂರಿನ ಕೆ.ಆರ್.ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ರೋಗಿಗಳ ದಟ್ಟಣೆ ಕಂಡುಬಂದರೆ, ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಬೆಳಿಗ್ಗೆ 11.30ರ ವರೆಗೆ ತೆರೆದಿರಲಿಲ್ಲ. ಕಲಬುರ್ಗಿ, ದಾವಣಗೆರೆ, ತುಮಕೂರು ಹಾಗೂ ಇತರೆಡೆಗಳಲ್ಲೂ ಮುಷ್ಕರದ ಬಿಸಿ ಜೋರಾಗಿತ್ತು.

* ವೈದ್ಯರ ಮೇಲೆ ನಡೆದ ಹಲ್ಲೆ ಖಂಡನೀಯ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ರಾಜ್ಯ ಸರ್ಕಾರಗಳ ಮೇಲಿವೆ.

-ಶಿವಾನಂದ ಪಾಟೀಲ, ಆರೋಗ್ಯ ಸಚಿವ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !