ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಾಲಮನ್ನಾ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಆಯ್ಕೆ

ರೈತರ ಸಾಲಮನ್ನಾ ಮಾಹಿತಿ ಸಂಗ್ರಹಣೆ ಮುಕ್ತಾಯದ ಹಂತಕ್ಕೆ: ಜಿಲ್ಲಾಧಿಕಾರಿ ಕರೀಗೌಡ
Last Updated 8 ನವೆಂಬರ್ 2018, 20:12 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ರೈತರ ಸಾಲಮನ್ನಾ ಯೋಜನೆಯಲ್ಲಿ ಅರ್ಹ ರೈತರ ಪಟ್ಟಿ ತಯಾರಿಸಿ ಜಾರಿಗೆ ತರಲು ಪ್ರಾಯೋಗಿಕವಾಗಿ ಕ್ಷೇತ್ರವನ್ನಾಗಿ ರಾಜ್ಯದ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಆಯ್ಕೆ ಮಾಡಿಕೊಂಡಿದೆ.

ಇದಕ್ಕೆ ಅಗತ್ಯ ಇರುವ ಎಲ್ಲ ಮಾಹಿತಿಯನ್ನು ‘ಬೆಳೆ ಸಾಲಮನ್ನಾ ವ್ಯವಸ್ಥೆ’ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಮಾಹಿತಿ ನೀಡಿದರು.

ಅವರು ಗುರುವಾರ ನಗರದ ಡಿಸಿಸಿ ಬ್ಯಾಂಕಿನಲ್ಲಿ ತಾಲ್ಲೂಕಿನಲ್ಲಿ ಇರುವ ಎಲ್ಲ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಸಾಲ ಪಡೆದಿರುವ ರೈತರ ಮಾಹಿತಿಯನ್ನು ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡುತ್ತಿರುವ ಪ್ರಗತಿ ಪರಿಶೀಲನೆ ನಡೆಸಿದರು.

ಈಗಾಗಲೇ ರಾಷ್ಟ್ರೀಕೃತ ಬ್ಯಾಂಕ್ ಗಳು ತಮ್ಮ ವಹಿವಾಟನ್ನು ಕಂಪ್ಯೂಟರ್ ಮೂಲಕವೇ ನಡೆಸುತ್ತಿದ್ದರಿಂದ ಸಾಲ ಪಡೆದಿದ್ದ ರೈತರ ಮಾಹಿತಿ ಸುಲಭವಾಗಿ ವೆಬ್ ಸೈಟ್‌ಗೆ ಅಪ್ ಲೋಡ್ ಮಾಡಲಾಗುತ್ತಿದೆ. ವಿಎಸ್ಎಸ್ಎನ್ ಗಳಲ್ಲಿ ಕೃಷಿ ಸಾಲ ಪಡೆದಿದ್ದ ರೈತರ ಸಂಪೂರ್ಣ ಮಾಹಿತಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಶೇ 90ರಷ್ಟು ಮುಕ್ತಾಯವಾಗಿದೆ. ಶುಕ್ರವಾರ ಅಥವಾ ಸೋಮವಾರದಿಂದ ಸಾಲ ಪಡೆದಿರುವ ಪ್ರತಿಯೊಬ್ಬ ರೈತರಿಗೂ ಸ್ವಯಂ ಘೋಷಣ ಪ್ರಮಾಣ ಪತ್ರವನ್ನು ನಾವೇ ನೀಡಿ ಸಹಿ ಪಡೆಯುತ್ತೇವೆ ಎಂದರು.

**

ಯೋಜನೆಯ ಮಾಹಿತಿ ಸಂಗ್ರಹಣೆ ಹೇಗೆ ನಡೆಯುತ್ತದೆ?

ರಾಜ್ಯದಲ್ಲಿ ಸಾಲ‌ಮನ್ನಾ ಘೋಷಣೆಯಾದ ದಿನದಿಂದಲೂ ಸಹ ಎಲ್ಲರನ್ನು ಕಾಡುತ್ತಿದ್ದ ಒಂದೇ ಪ್ರಶ್ನೆ ಕೃಷಿಯನ್ನೆ ನಂಬಿ ಬದುಕುತ್ತಿರುವ ರೈತರು ಅಲ್ಲದವರಿಗೂ ಸಾಲಮನ್ನಾ ಮಾಡಬಾರದು. ನಿಜವಾದ ರೈತರಿಗೆ ಈ ಯೋಜನೆ ಪ್ರಯೋಜನ ಸಿಗಬೇಕು ಎನ್ನುವುದು.

ಇದಕ್ಕಾಗಿ ರಾಜ್ಯ ಸರ್ಕಾರದ ಭೂಮಿ ಉಸ್ತುವಾರಿ ಕೋಶ ವತಿಯಿಂದ ’ಬೆಳೆಸಾಲ ಮನ್ನಾ ವ್ಯವಸ್ಥೆ’ ವೆಬ್ ಸೈಟ್ ಸಿದ್ಧಗೊಳಿಸಲಾಗಿದೆ. ಇದರಲ್ಲಿ ರೈತರು ಸಾಲ ಪಡೆದಿರುವ ಬ್ಯಾಂಕ್ ಖಾತೆ ಸಂಖ್ಯೆಯಿಂದ ಪ್ರಾರಂಭವಾಗಿ ಆಧಾರ್, ಪಡಿತರ ಚೀಟಿ, ಪಹಣಿ ಸಂಖ್ಯೆ ಎಲ್ಲಾ ಮಾಹಿತಿ ಸೇರಿಸಲಾಗುತ್ತಿದೆ. ಹೀಗಾಗಿ ಪಡಿತರ ಚೀಟಿಯಲ್ಲಿ ಹೆಸರಿರುವ ಯಾರಾದರೂ ಒಬ್ಬರು ಸರ್ಕಾರಿ ನೌಕರರಾಗಿದ್ದರೆ ಅಥವಾ ಸರ್ಕಾರಿ ನೌಕರರಾಗಿದ್ದು ನಿವೃತ್ತಿ ವೇತನ ಪಡೆಯುತ್ತಿದ್ದರೆ, ಆದಾಯ ತೆರಿಗೆ ಇಲಾಖೆ ಪಾವತಿದಾರರಾಗಿದ್ದರೆ ಅಂತಹವರು ಸಾಲ ಮನ್ನಾ ವ್ಯಾಪ್ತಿಗೆ ಬರುವುದಿಲ್ಲ.

ಕೆಲವು ಸಂದರ್ಭಗಳಲ್ಲಿ ಪಡಿತರ ಚೀಟಿ ಇಲ್ಲದಿದ್ದರೆ, ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರಿಗೂ ಪಹಣಿಯಲ್ಲಿನ ಹೆಸರಿಗೂ, ಬ್ಯಾಂಕ್ ಖಾತೆಯಲ್ಲಿನ ಹೆಸರಿನ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳು ಇದ್ದರೆ ಅವುಗಳನ್ನು ವೆಬ್ ಸೈಟ್ ಸ್ವೀಕರಿಸುವುದಿಲ್ಲ. ಇಂತಹ ರೈತರ ದಾಖಲಾತಿಗಳನ್ನು ತಾಲ್ಲೂಕು ಮಟ್ಟದ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಿದ ನಂತರ ಸಾಲಮನ್ನಾ ಆಗಲಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಶೀಘ್ರವಾಗಿ ಮುಗಿಸಿ ರೈತರ ಮನೆ ಬಾಗಿಲಿಗೆ ‘ಋಣಮುಕ್ತ’ ಪತ್ರ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT