ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಅಂಗನವಾಡಿಗಳಿಗೆ ವಿಶೇಷ ಕಿಟ್‌ಗಳನ್ನು ಪರಿಚಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಕಾರವಾರ: ಮಕ್ಕಳ ಬೋಧನೆಗೆ ‘ಡಾಲ್ಫಿನ್’ ನೆರವು!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಈ ‘ಡಾಲ್ಫಿನ್‌’ಗಳು 12 ಭಾಷೆಗಳಲ್ಲಿ ಮಾತನಾಡುತ್ತವೆ. ರಾಷ್ಟ್ರಗೀತೆ ಹಾಡುತ್ತವೆ. ಪ್ರಾಣಿ, ಪಕ್ಷಿಗಳ ಹೆಸರು ಹೇಳುತ್ತವೆ. ಈ ಮೂಲಕ ಪುಟಾಣಿಗಳು ಅಂಗನವಾಡಿಗಳಿಗೆ ಬರುವಂತೆ ಮಾಡುತ್ತಿವೆ!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಹೊನ್ನಾವರ ತಾಲ್ಲೂಕಿನ 20 ಅಂಗನವಾಡಿಗಳಿಗೆ ಸದ್ಯ ನೀಡಿರುವ ವಿಶಿಷ್ಟ ‘ಡಾಲ್ಫಿನ್‌ ಕಿಟ್’ಗಳ ಕಿರು ಪರಿಚಯವಿದು. ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಹೆಚ್ಚು ಮಕ್ಕಳನ್ನು ಆಕರ್ಷಿಸಲು ಇವುಗಳನ್ನು ನೀಡಲಾಗುತ್ತಿದೆ. ಪ್ರತಿ ಕಿಟ್‌ಗೆ ₹ 6 ಸಾವಿರ ದರವಿದ್ದು, 20 ಮಂದಿ ದಾನಿಗಳು ನೀಡಿದ್ದಾರೆ.

ವಿಶೇಷತೆಯೇನು?: ‘ಡಾಲ್ಫಿನ್ ಕಿಟ್’ಗಳ ಜೊತೆಗೆ ನೀಡಲಾದ ವಿಶೇಷ ಪುಸ್ತಕದಲ್ಲಿ ಪ್ರಾಣಿ ಪಕ್ಷಿಗಳು, ವರ್ಣಮಾಲೆ, ರಾಷ್ಟ್ರಗೀತೆ ಹೀಗೆ ವಿವಿಧ ಕಲಿಕಾ ಅಂಶಗಳಿವೆ. ಅವುಗಳ ಕೆಳಗೆ ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಬರೆಯಲಾಗಿದೆ. ಮಕ್ಕಳು ಕಿಟ್ ಅನ್ನು ತಮ್ಮ ಆಯ್ಕೆಯ ಭಾಷೆಯ ಮೇಲೆ ಸರಿಸಿದಾಗ ಅದರಲ್ಲಿರುವ ಸೆನ್ಸಾರ್ ಚಾಲನೆಯಾಗಿ ಆಯಾ ಭಾಷೆಯಲ್ಲೇ ವಿವರಣೆ ಕೇಳಿಸುತ್ತದೆ.

ಉದಾಹರಣೆಗೆ, ನಾಯಿಯ ಚಿತ್ರವಾದರೆ ಕನ್ನಡದಲ್ಲಿ ‘ನಾಯಿ’ ಎಂದು, ಇಂಗ್ಲಿಷ್‌ನಲ್ಲಿ ‘ಡಾಗ್’ ಎಂದೂ ಹೇಳುತ್ತದೆ. ಈ ಕಿಟ್‌ಗಳ ಮೂಲಕ, ಮೊದಲೇ ಅಪ್‌ಲೋಡ್ ಮಾಡಲಾಗಿರುವ ಕತೆ, ಕವನ, ಗಣಿತದ ಪಾಠಗಳನ್ನೂ ಕೇಳಬಹುದಾಗಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್, ‘ಚಿಕ್ಕ ಮಕ್ಕಳಿಗೆ ಕೇವಲ ಬಾಯಿಮಾತಿನಲ್ಲಿ ಹೇಳಿದ ಯಾವುದೇ ಬೋಧನೆಯೂ ಅಷ್ಟಾಗಿ ಮನನವಾಗುವುದಿಲ್ಲ. ಅದರ ಬದಲು ಅವರು ನೋಡಿದ, ಅನುಭವಿಸಿದ ವಿಚಾರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಹಾಗಾಗಿ ಕಿಟ್‌ಗಳು ಸಮರ್ಥ ಕಲಿಕೆಗೆ ಸಹಕಾರಿ. ಜೊತೆಗೆ ಕಿಟ್‌ಗಳು ಆಟಿಕೆಯಂತೆ ಕಾಣುವ ಕಾರಣ ಮಕ್ಕಳು ಅಂಗನವಾಡಿಗೆ ತಪ್ಪದೇ ಬರುತ್ತಾರೆ’ ಎಂದು ವಿವರಿಸಿದರು. 

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಈ ಕಿಟ್‌ಗಳನ್ನು ನೋಡಿ ಸಂತಸಗೊಂಡಿದ್ದಾರೆ. ರಾಜ್ಯದ ಎಲ್ಲ ಅಂಗನವಾಡಿಗಳಿಗೆ ಇಂತಹ ವಿದ್ಯುನ್ಮಾನ ಸಾಧನಗಳನ್ನು ನೀಡಲು ಚಿಂತಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೊಬೈಲ್ ಫೋನ್‌ಗಿಂತ ಸ್ವಲ್ಪ ದೊಡ್ಡ ಇರುವ ಕಿಟ್‌ಗಳ ಬ್ಯಾಟರಿ ಪೂರ್ಣ ಚಾರ್ಜ್ ಆದರೆ ಮೂರು ದಿನ ಬಳಬಹುದು ಎಂದೂ ತಿಳಿಸಿದರು.

ಅಂಗನವಾಡಿಗೆ ‘ಸ್ಮಾರ್ಟ್ ಬೋರ್ಡ್’

ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಇರುವಂತೆ ‘ಸ್ಮಾರ್ಟ್ ಬೋರ್ಡ್’ಗಳನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಅಂಗನವಾಡಿಗಳಲ್ಲಿ ಅಳವಡಿಸಲಾಗುತ್ತಿದೆ. 

ಕೈಗಾ ಅಣು ವಿದ್ಯುತ್ ಸ್ಥಾವರವು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ತಲಾ ₹ 1 ಲಕ್ಷಕ್ಕೂ ಅಧಿಕ ವೆಚ್ಚದ 35 ಸ್ಮಾರ್ಟ್ ಬೋರ್ಡ್‌ಗಳನ್ನು ನೀಡುತ್ತಿದೆ. ಈಗಾಗಲೇ ಯಲ್ಲಾಪುರದಲ್ಲಿ ಒಂದು ಅಂಗನವಾಡಿಯಲ್ಲಿ ಅಳವಡಿಸಲಾಗಿದೆ ಎಂದು ರಾಜೇಂದ್ರ ಬೇಕಲ್ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು