‘ಅಧಿಕಾರ ಲಾಲಸೆ ಸಲ್ಲ; ಪಕ್ಷಕ್ಕಾಗಿ ದುಡಿಯಿರಿ‘

7
ಕಾಂಗ್ರೆಸ್ ಕಾರ್ಯಕರ್ತರ ಸ್ಫೂರ್ತಿ ಸಮಾವೇಶ

‘ಅಧಿಕಾರ ಲಾಲಸೆ ಸಲ್ಲ; ಪಕ್ಷಕ್ಕಾಗಿ ದುಡಿಯಿರಿ‘

Published:
Updated:

ಬೆಂಗಳೂರು: ‘ಪಕ್ಷಕ್ಕೆ ಸೇರಿದ ತಕ್ಷಣ ಪದಾಧಿಕಾರಿ ಆಗಬೇಕು, ಶಾಸಕರಾಗಬೇಕು, ಸಚಿವ ಆಗಬೇಕು ಎಂದು ಬಯಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಬೆಳವಣಿಗೆ ನಿಲ್ಲಬೇಕು’ ಎಂದು ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷರನ್ನು ಒತ್ತಾಯಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಸ್ಫೂರ್ತಿ ಸಮಾವೇಶದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ವಿಧಾನಪರಿಷತ್‌ ಸದಸ್ಯ ರಿಜ್ವಾನ್ ಅರ್ಷದ್‌, ಶಾಸಕ ಎಚ್.ಟಿ. ಸೋಮಶೇಖರ್ ಮತ್ತಿತರರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಮಶೇಖರ್ ಮಾತನಾಡಿ, ‘ಹೋರಾಟ ಮಾಡಿ ಲಾಠಿ ಏಟು ತಿನ್ನುವವರು ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಕಾರ್ಯಕರ್ತರು. ಆದರೆ, ಕಾಂಗ್ರೆಸ್‌ ಸೇರಿದ ತಕ್ಷಣ ಪದಾಧಿಕಾರಿಯಾಗಿ, ಮಂತ್ರಿ ಆಗಬೇಕೆಂದು ಬಯಸುವವರು ಹೆಚ್ಚಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಂತ್ರಿಗಳಾಗುವವರೆಗೆ ಮುತ್ತು ಸುರಿಸಿದವರಿದ್ದಾರೆ. ಮಂತ್ರಿಗಳಾದ ಬಳಿಕ ಶಾಸಕರನ್ನು ತಿರುಗಿಯೂ ನೋಡದವರಿದ್ದಾರೆ. ಅವರ ಚೇಂಬರ್‌ನಲ್ಲಿ ಕುಳಿತಿದ್ದರೂ ಮುಖ ತಿರುಗಿಸಿ ಹೋದವರ ಅನುಭವ ನನಗಾಗಿದೆ’ ಎಂದು ತಮ್ಮ ಪಕ್ಷದ ಸಚಿವರೊಬ್ಬರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನಲ್ಲಿ ದಿನೇಶ್, ನಾನು ಸೇರಿದಂತೆ ಹಂತಹಂತವಾಗಿ ಬೆಳೆದು ಬಂದ ಅನೇಕರಿದ್ದೇವೆ. ಬಿಜೆಪಿಯಲ್ಲೂ ರಾಮಚಂದ್ರಗೌಡ, ಸುರೇಶ್ ಕುಮಾರ್‌ ಅವರಂಥವರೂ ಕೆಳಹಂತದಿಂದ ಬೆಳೆದು ಬಂದವರು. ಕೆಳಹಂತದಿಂದ ಬೆಳೆದು ಬಂದವರು ಹತಾಶರಾಗಬೇಕಿಲ್ಲ’ ಎಂದರು.

‘ಎನ್‌ಎಸ್‌ಯುಐಗೆ ಯುವಕರನ್ನು ಸದಸ್ಯರನ್ನಾಗಿ ಮಾಡುವವರಿಗೆ ಪದಾಧಿಕಾರಿ ಸ್ಥಾನ ನೀಡಬೇಕು. ಇಲ್ಲವಾದರೆ ಪಕ್ಷಕ್ಕೆ ಭವಿಷ್ಯ ಇಲ್ಲ’ ಎಂದರು.

‘ನಾನು ಪಕ್ಷದಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿದ್ದೇನೆ, ಪೆಟ್ಟು ತಿಂದಿದ್ದೇನೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತು ಧರಂ ಸಿಂಗ್ ಸರ್ಕಾರದ ಆರಂಭದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ’ ಎಂದ ಅವರು, ‘ನನ್ನ ಮೇಲೆ ಐಟಿ ದಾಳಿ ನಡೆದಾಗ ಖುಷಿ ಪಟ್ಟವರೂ ಇದ್ದಾರೆ. ಹೋರಾಟ ಮಾಡಿದವರೂ ಇದ್ದಾರೆ’ ಎಂದರು.

‘ಕೆಪಿಸಿಸಿ ಅಧ್ಯಕ್ಷರಾಗಿದ್ದ ಜನಾರ್ದನ ಪೂಜಾರಿ ಎಂದೂ ಮುಖ್ಯಮಂತ್ರಿಯ ಮನೆಗೆ ಹೋಗಲಿಲ್ಲ. ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರೇ ಪೂಜಾರಿ ಅವರ ಭೇಟಿಗೆ ಬರುತ್ತಿದ್ದರು. ಮುಖ್ಯಮಂತ್ರಿ, ಮಂತ್ರಿ ಸ್ಥಾನಕ್ಕಿಂತಲೂ ಪಕ್ಷದ ಅಧ್ಯಕ್ಷ ಸ್ಥಾನದ ಮಹತ್ವ ದೊಡ್ಡದು. ಈಗಲೂ ಇದೇ ನೀತಿ ಅನುಸರಿಸಬೇಕು. ನಾನೂ ಅನುಸರಿಸುತ್ತೇನೆ’ ಎಂದು ಪಕ್ಷದ ನಾಯಕರಿಗೆ ಶಿವಕುಮಾರ್ ಸಲಹೆ ನೀಡಿದರು.

ಅದಕ್ಕೆ ಪೂರಕವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಬಲಪಡಿಸಬೇಕು. ಯಾರಾದರೂ ಸರ್ಕಾರ ಮತ್ತು ಪಕ್ಷದ ವಿಚಾರದಲ್ಲಿ ಅಶಿಸ್ತು ತೋರಿಸಿದರೆ ಶಿಸ್ತು ಕ್ರಮಕೈಗೊಳ್ಳುವುದು ಖಚಿತ’ ಎಂದು ಎಚ್ಚರಿಕೆ ನೀಡಿದರು.

‘ಸರ್ಕಾರ ಅಥವಾ ಜೆಡಿಎಸ್‌ನಿಂದ ತಪ್ಪುಗಳಾದರೆ ಬಹಿರಂಗ ಟೀಕೆ ಸರಿಯಲ್ಲ. ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು’ ಎಂದು ಪಕ್ಷದ ನಾಯಕರಿಗೆ ದಿನೇಶ್‌ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !