ಭಾನುವಾರ, ಮಾರ್ಚ್ 7, 2021
32 °C
ಜಿಂದಾಲ್‌ಗೆ ಭೂಮಿ ಮಾರಾಟ ಮಾಡದಿರಲು ಆಗ್ರಹ

ವಡ್ಡು ಗ್ರಾಮದಿಂದ ಪಾದಯಾತ್ರೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋರಣಗಲ್ಲು: ‘ಜಿಂದಾಲ್‌ಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಬಾರದು’ ಎಂದು ಆಗ್ರಹಿಸಿ ಜನಸಂಗ್ರಾಮ ಪರಿಷತ್‌ ನೇತೃತ್ವದಲ್ಲಿ ಸಮೀಪದ ವಡ್ಡು ಗ್ರಾಮದಿಂದ ಬಳ್ಳಾರಿಗೆ ಗುರುವಾರ ಪಾದಯಾತ್ರೆ ಆರಂಭವಾಯಿತು.

ಗ್ರಾಮದ ಹಳ್ಳದರಾಯ ದೇವಸ್ಥಾನದ ಮುಂಭಾಗ ಪರಿಷತ್ ಮುಖಂಡ ಎಸ್.ಆರ್.ಹಿರೇಮಠ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‌ ಚಳವಳಿಯ ಐತಿಹಾಸಿಕ ದಿನವಾದ ಆಗಸ್ಟ್‌ 9ರಂದೇ ಪಾದಯಾತ್ರೆ ಬಳ್ಳಾರಿ ನಗರದಲ್ಲಿ ಮುಕ್ತಾಯವಾಗಲಿದೆ. ಜಿಂದಾಲ್‌ ಬಳ್ಳಾರಿ ಬಿಟ್ಟು ತೊಲಗಬೇಕು ಎಂಬುದೇ ನಮ್ಮ ಆಗ್ರಹ. ಭೂಮಿ ಮಾರಾಟ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ಕುರೆಕುಪ್ಪ, ಮುಸಿನಾಯಕನಹಳ್ಳಿ, ತೋರಣಗಲ್ಲು, ಸುಲ್ತಾನಪುರ ಗ್ರಾಮದ 3,667 ಎಕರೆ ಜಮೀನನ್ನು ಮಾರಾಟ ಮಾಡದೆ, ಗುತ್ತಿಗೆ ಅವಧಿಯನ್ನು ವಿಸ್ತರಿಸಬೇಕು. ಜಿಂದಾಲ್‌ಗೆ ಇದುವರೆಗೆ ನೀಡಿರುವ ಭೂಮಿಯ ಕುರಿತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶರುಳ್ಳ ಸ್ವತಂತ್ರ ಸಮಿತಿಯಿಂದ ತನಿಖೆಗೆ‌ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ಜಿಂದಾಲ್‌ಗೆ ಭೂಮಿ ನೀಡಿದವರಿಗೆ ಉದ್ಯೋಗ ದೊರಕಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು. ಜೀವ ಸಂಕುಲಕ್ಕೆ ಮಾರಕವಾದ ಎಪ್ಸಿಲಾನ್ ಡಾಂಬರು ಮತ್ತು‌ ಪೇಂಟ್ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು. ಕುಮಾರಸ್ವಾಮಿ, ಪಾರ್ವತಿ‌ ದೇಗುಲದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕು. ತುಂಗಭದ್ರಾ ಮತ್ತು ಅಲಮಟ್ಟಿ ಜಲಾಶಯದ ನೀರನ್ನು ಜಿಂದಾಲ್ ಅಕ್ರಮವಾಗಿ ಬಳಸದಂತೆ ತಡೆಗಟ್ಟಬೇಕು’ ಎಂದು ಆಗ್ರಹಿಸಿದರು.

ಇಂದು ಬಳ್ಳಾರಿಗೆ: 9ರಂದು ಪಾದಯಾತ್ರಿಗಳು ಬಳ್ಳಾರಿಗೆ ಬರಲಿದ್ದು, ಅವರನ್ನು ಸುಧಾ ಸರ್ಕಲ್ ‌ಬಳಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಸ್ವಾಗತಿಸಿದ ನಂತರ ಸಂಕಲ್ಪಸಭೆ ನಡೆಯಲಿದೆ. ಮಧ್ಯಾಹ್ನದ ಬಳಿಕ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ‌ಪತ್ರ ಸಲ್ಲಿಸಲು ಮುಖಂಡರು ನಿರ್ಧರಿಸಿದ್ದಾರೆ. 

ರೈತ ಸಂಘ, ಮಹಾತ್ಮ ಗಾಂಧಿ ವಿವಿಧೋದ್ದೇಶ ಸಹಕಾರಿ ಸಂಘ, ರೈತ ಕೃಷಿ ಕಾರ್ಮಿಕರ ಸಂಘ, ಚಾಗನೂರು- ಸಿರಿವಾರ ನೀರಾವರಿ ಭೂ ಹೋರಾಟ ಸಮಿತಿ ಹಾಗೂ ಇಸಿಪಿಎಲ್ ಕಾರ್ಖಾನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟದ ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

 ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲ್ದಳ್ಳಿ, ಸೋಮಶೇಖರ ಗೌಡ ಮತ್ತು ಮಾಧವರೆಡ್ಡಿ, ಬಿ.ನಾರಾಯಣಸ್ವಾಮಿ, ಎ.ದೇವದಾಸ್‌, ನಾಗರತ್ನ, ಗೋವಿಂದ, ಮಂಜುಳಾ, ಆರ್‌.ಸೋಮಶೇಖರ್‌. ಈ.ಹನುಮಂತಪ್ಪ, ಶಿವಾನಂದಯ್ಯ, ಮಹಾರುದ್ರಗೌಡ, ಟಿ.ಎ.ಶಿವಕುಮಾರ್‌, ರುದ್ರಗೌಡ ಮತ್ತು ಚಂದ್ರಪ್ಪ ನೇತೃತ್ವ ವಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.