ಶನಿವಾರ, ಡಿಸೆಂಬರ್ 14, 2019
24 °C

ಪುತ್ತೂರಿನ ಜೋಡಿ ಕೊಲೆ ಪ್ರಕರಣ: 24 ಗಂಟೆಯಲ್ಲಿ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು(ದ.ಕ.): ಕುರಿಯ ಬಳಿ ಮಂಗಳವಾರ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು 24ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ.

ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್‌ ಬಂಧಿತ ಆರೋಪಿ. ಭಾನುವಾರ ರಾತ್ರಿ 11 ಗಂಟೆಗೆ ಆರೋಪಿಯು, ಕಳ್ಳತನದ ಉದ್ದೇಶದಿಂದ ಮನೆಯ ಗೋಡೆ ಮತ್ತು ಹಂಚಿನ ನಡುವೆ ನುಸುಳಿ ಒಳ ಪ್ರವೇಶಿಸಿದ್ದ. ಕಳ್ಳತನ ನಡೆಸುವ ವೇಳೆ ಮನೆಯ ಸದಸ್ಯರು ಎಚ್ಚರಗೊಂಡಿದ್ದರು. ಆರೋಪಿಯು ಮನೆಯ ಸದಸ್ಯರಿಗೆ ಪರಿಚಿತನಾಗಿದ್ದು, ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯಭೀತನಾಗಿದ್ದ. ಅಲ್ಲದೇ ಈ ಹಿಂದೆ ಕೊಲೆಯಾದ ಶೇಕ್ ಕೊಗ್ಗು ಸಾಹೇಬ್ ಅವರೊಂದಿಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮನಸ್ತಾಪದ ನಡೆದಿತ್ತು. ಹೀಗಾಗಿ ಆರೋಪಿ ಕರೀಂ, ಅಡುಗೆ ಕೋಣೆಯಲ್ಲಿದ್ದ ಕೊಕ್ಕೆ ಕತ್ತಿಯಿಂದ  ಮನೆಯಲ್ಲಿದ್ದ ಶೇಕ್ ಕೊಗ್ಗು ಸಾಹೇಬ್ (70), ಮೊಮ್ಮಗಳು ಶಾಮಿಯಾ ಭಾನು (16) ಅವರನ್ನು ಕೊಲೆ‌ ಮಾಡಿದ್ದ. ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಾಬಿ  (65) ಎಂಬವರಿಗೆ ಗಂಭೀರ ಹಲ್ಲೆ ನಡೆಸಿದ್ದ.

ಇದನ್ನೂ ಓದಿ... ಪುತ್ತೂರು: ಅಜ್ಜ, ಮೊಮ್ಮಗಳ ಕೊಲೆ, ಹಂತಕರು ಪರಾರಿ

ಆ ಬಳಿಕ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ  ಚಿನ್ನಾಭರಣ  ಹಾಗೂ ₹6,000 ನಗದನ್ನು ಕಳವು ಮಾಡಿ, ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸರು ಠಾಣಾ ವ್ಯಾಪ್ತಿಯ ಕುರಿಯ ಗ್ರಾಮದ ಬೀಟ್ ಸಿಬ್ಬಂದಿ ಭೀಮ್ ಶೇನ್ ಅವರು ನೀಡಿದ ಸುಳಿವಿನ ಅಧಾರದಲ್ಲಿ  ಸದರಿ ಆರೋಪಿಯನ್ನು  ಮಂಗಳವಾರ ಸಂಜೆ  ಬಂಧಿಸಿದ್ದಾರೆ.

ಕೊಲೆ ಮಾಡುವ‌ ಸಂದರ್ಭದಲ್ಲಿ ಉಂಟಾದ ‌ಘರ್ಷಣೆಯಿಂದ ಆರೋಪಿಯ ಕೈಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು‌ ಜಿಲ್ಲಾ‌ ಪೊಲೀಸ್‌‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು