ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಹತ್ಯೆಗೆ ಸನಾತನ ಸಂಸ್ಥೆ ಪ್ರಕಟಣೆಯೇ ಪ್ರೇರಣೆ!

ದೋಷಾರೋಪ ಪಟ್ಟಿ ಸಲ್ಲಿಸಿದ ವಿಶೇಷ ತನಿಖಾ ತಂಡ
Last Updated 18 ಆಗಸ್ಟ್ 2019, 1:13 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಹಂತಕರಿಗೆ ಸನಾತನ ಸಂಸ್ಥೆ ಪ್ರಕಟಿಸಿದ ಪುಸ್ತಕವೇ ಪ್ರೇರಣೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಅನಾಮಧೇಯ ಸಂಘಟನೆಯ ಸಕ್ರಿಯ ಕಾರ್ಯಕರ್ತರಾದ ಆರು ಮಂದಿ ಆರೋಪಿಗಳು, ಸನಾತನ ಸಂಸ್ಥೆ ಪ್ರಕಟಿಸಿರುವ ‘ಕ್ಷಾತ್ರ ಧರ್ಮ ಸಾಧನೆ’ ಎಂಬ ಪುಸ್ತಕದ ತತ್ವಗಳನ್ನು ಪಾಲಿಸುತ್ತಿದ್ದರು. ತಮ್ಮ ನಂಬಿಕೆ ಹಾಗೂ ಸಿದ್ಧಾಂತದ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ‘ದುರ್ಜನ’ ಎಂದು ಪರಿಗಣಿಸಿ ಹತ್ಯೆ ಮಾಡುತ್ತಿದ್ದರು.ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗೋಪ್ಯವಾಗಿ ಸಭೆ ಸೇರುತ್ತಿದ್ದ ಸಂಘಟನೆಯ ಸದಸ್ಯರು, ದೈಹಿಕ ಹಾಗೂ ಶಸ್ತ್ರಾಸ್ತ್ರ ತರಬೇತಿ ಪಡೆಯುತ್ತಿದ್ದರು. ಜತೆಗೆ ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದರು ಎಂಬುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಳೆ, ಮಿಸ್ಕಿನ್‌, ಚತುರ– ಈ ಮೂವರೂ 2015ರ ಜನವರಿಯಿಂದ ಮೇ ತಿಂಗಳವರೆಗೆ ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಮನೆ ಬಳಿ ಹಲವು ಬಾರಿ ಸಭೆ ಸೇರಿ, ಡಾ.ಕಲಬುರ್ಗಿ ಹತ್ಯೆ ಕುರಿತು ಚರ್ಚಿಸಿದ್ದರು. ಅವರ ಚಲನವಲನದ ಮೇಲೆ ನಿಗಾ ಇಡಲು ಮಿಸ್ಕಿನ್‌ಗೆ ಮತ್ತು ಬೈಕ್ ಕಳುವು ಮಾಡುವಂತೆ ವಾಸುದೇವ ಸೂರ್ಯವಂಶಿಗೆ ಕಾಳೆ ಸೂಚಿಸಿದ್ದ ಎನ್ನುವ ಅಂಶವೂ ವರದಿಯಲ್ಲಿ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಿಲಾತಬೆಟ್ಟು ಗ್ರಾಮದ ರಬ್ಬರ್ ತೋಟದಲ್ಲಿ ಮಿಸ್ಕಿನ್ ಮತ್ತು ಚತುರನಿಗೆ ನಾಡಪಿಸ್ತೂಲಿನಿಂದ ಗುಂಡು ಹಾರಿಸುವ ತರಬೇತಿಯನ್ನು ಕಾಳೆ ನೀಡಿದ್ದ. ಆಗಸ್ಟ್ 2ನೇ ವಾರ ಡಾ.ಕಲಬುರ್ಗಿ ಹತ್ಯೆಗೆ ಅಂತಿಮ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ 7.65 ಎಂಎಂ ನಾಡ ಪಿಸ್ತೂಲನ್ನು ಈ ಇಬ್ಬರಿಗೆ ಕೊಟ್ಟಿದ್ದ ಎಂದು ಹೇಳಲಾಗಿದೆ.

ಆ.30ರಂದು ಬೆಳಿಗ್ಗೆ 7ಕ್ಕೆ ಇಂದಿರಾ ಗಾಜಿನ ಮನೆ ಬಳಿ ಕಾಳೆ, ಮಿಸ್ಕಿನ್ ಮತ್ತು ಚತುರ ಸೇರಿ ಕೊನೆಹಂತದ ಸಿದ್ಧತೆ ಮಾಡಿಕೊಂಡರು. ಬೈಕ್‌ ಅನ್ನು ಚತುರನಿಗೆ ಕಾಳೆ ನೀಡಿದ.8.30ರ ಸುಮಾರಿಗೆ ಧಾರವಾಡದ ಕಲ್ಯಾಣ ನಗರದಲ್ಲಿರುವ ಡಾ. ಕಲಬುರ್ಗಿ ಮನೆಗೆ ಹೋಗಿ, ಅವರ ಹಣೆಗೆ ಮಿಸ್ಕನ್ ಎರಡು ಬಾರಿ ಗುಂಡು ಹಾರಿಸಿ, ಚತುರ ಓಡಿಸುತ್ತಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆ.31ರಂದು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಆದರೆ ತನಿಖೆ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದಡಾ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಪುತ್ರ ಶ್ರೀವಿಜಯ ಅವರು 2019ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್ ಆದೇಶದಂತೆ 2019ರ ಮಾರ್ಚ್‌ನಲ್ಲಿ ಎಸ್‌ಐಟಿಗೆ ತನಿಖೆ ವಹಿಸಲಾಯಿತು. ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದ ತಂಡ ತನಿಖೆ ಮಾಡಿತ್ತು.

***

ಸುಪ್ರೀಂ ಕೋರ್ಟ್‌ ಆದೇಶದಂತೆ ವಿಶೇಷ ತನಿಖಾ ತಂಡ ತನ್ನ ಕಾರ್ಯನಿರ್ವಹಿಸಿದೆ. ಈ ಬಗ್ಗೆ ಮತ್ತೇನನ್ನೂ ಹೇಳಲಾರೆ

-ಉಮಾದೇವಿ ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT