ಶುಕ್ರವಾರ, ನವೆಂಬರ್ 22, 2019
23 °C
ರೋಟರಿ ಸಂಸ್ಥೆ ವತಿಯಿಂದ ಐವರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

‘ರಾಜ್ಯಕ್ಕೆ ಮಾದರಿಯಾಗಿದ್ದು ರಾಜ್‌ ಕನ್ನಡ’

Published:
Updated:
Prajavani

ಬೆಂಗಳೂರು: ‘ರಾಜ್ಯದ ಏಕೀಕರಣ ಸಂದರ್ಭದಲ್ಲಿ ಹಲವು ಪ್ರಾಂತ್ಯಗಳಲ್ಲಿ ಬೇರೆ ಭಾಷೆಗಳ ಪ್ರಾಬಲ್ಯವಿತ್ತು. ಕನ್ನಡದಲ್ಲಿಯೂ ಅನೇಕ ಶೈಲಿಗಳಿದ್ದವು. ಆದರೆ, ರಾಜ್ಯಕ್ಕೆ ಶುದ್ಧ ಕನ್ನಡದ ಅವಶ್ಯಕತೆಯಿತ್ತು ಮತ್ತು ಅದನ್ನು ಎಲ್ಲರೂ ಒಪ್ಪಬೇಕಿತ್ತು. ಆಗಿನ ನೂರಾರು ಸಾಹಿತಿಗಳು ಚರ್ಚಿಸಿ, ವರನಟ ಡಾ.ರಾಜಕುಮಾರ್‌ ಮಾತನಾಡುತ್ತಿದ್ದ ಕನ್ನಡವನ್ನು ಮಾದರಿ ಕನ್ನಡವನ್ನಾಗಿ ಮಾಡಿದರು’ ಎಂದು ರಂಗಕರ್ಮಿ ಪ್ರಕಾಶ್‌ ಬೆಳವಾಡಿ ಹೇಳಿದರು.

ರೋಟರಿ ಸಂಸ್ಥೆಯು (3190 ಜಿಲ್ಲೆ) ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಒಂದು ನಾಡಿನ ಬಗ್ಗೆ, ಭಾಷೆಯ ಬಗ್ಗೆ ಹೆಮ್ಮೆ ಇರುವುದು ರಾಷ್ಟ್ರೀಯತೆಗೆ ವಿರುದ್ಧವಲ್ಲ ಎಂದು ತೋರಿಸುವುದು ನಮ್ಮ ಏಕೀಕರಣ ರೂವಾರಿಗಳ ಉದ್ದೇಶವಾಗಿತ್ತು. ಈ ಕಾರಣದಿಂದ ನೂರಾರು ವರ್ಷಗಳ ಹಿಂದೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ರಚಿಸಿದ್ದರು. ಕೆಪಿಸಿಸಿಯನ್ನು ರಾಜಕಾರಣಿಗಳು ರೂಪಿಸಿದ್ದಲ್ಲ. ನಂತರದಲ್ಲಿ, ರಾಜಕಾರಣಿಗಳು ಈ ಕೆಪಿಸಿಸಿಯನ್ನು ಪಡೆದುಕೊಂಡರು’ ಎಂದರು. 

ರೋಟರಿ ಕ್ಲಬ್‌ ಘಟಕ 3190 ಅಧ್ಯಕ್ಷ ಡಾ. ಸಮೀರ್‌ ಹರಿಯಾನಿ, ‘ಕನ್ನಡ ನನ್ನ ಮಾತೃಭಾಷೆಯಲ್ಲ. ಆದರೆ, ಹೃದಯದ ಭಾಷೆ. ಕನ್ನಡಿಗರ ಸೇವೆಯಲ್ಲಿ ರೋಟರಿ ಸಂಸ್ಥೆ ತೊಡಗಿಸಿಕೊಂಡಿದೆ. ಐದು ವರ್ಷಗಳಲ್ಲಿ ₹40 ಕೋಟಿಯನ್ನು ಜನೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸಿದ್ದೇವೆ. ‘ಕೋಟಿ ನಾಟಿ’ ಕಾರ್ಯಕ್ರಮದ ಮೂಲಕ ಪರಿಸರ ಉಳಿವಿಗೆ ಶ್ರಮಿಸುತ್ತಿದ್ದೇವೆ. ಅಂತರರಾಷ್ಟ್ರೀಯ ಮಟ್ಟದ ರೋಟರಿ ಸಂಸ್ಥೆಗಳಲ್ಲಿಯೇ ನಮ್ಮ ಘಟಕ ಅಗ್ರಸ್ಥಾನದಲ್ಲಿದೆ’ ಎಂದರು.

ಐವರು ಗಣ್ಯರಿಗೆ ‘ರೋಟರಿ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಪ್ರತಿಕ್ರಿಯಿಸಿ (+)