ನೀರು ಕೊಡದಿದ್ದರೆ ನೇಣಿಗೆ ಹಾಕ್ತೀನಿ

7
ಪಾವಗಡ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ,

ನೀರು ಕೊಡದಿದ್ದರೆ ನೇಣಿಗೆ ಹಾಕ್ತೀನಿ

Published:
Updated:
Prajavani

ತುಮಕೂರು: ‘ಶುದ್ಧ ಕುಡಿಯುವ ನೀರಿಲ್ಲ ಎಂದು ಆ ಊರಿನವರು ನನಗೆ ದೂರವಾಣಿ ಮಾಡಿ ಕೇಳುತ್ತಾರೆ. ಎರಡು ತಿಂಗಳಿಂದ ನಿಮಗೆ ಹತ್ತಾರು ಬಾರಿ ಆದೇಶಿಸಿದ್ದರೂ ನೀರು ಕೊಡಲು ಆಗಿಲ್ಲ. ತಕ್ಷಣ ಶುದ್ಧ ನೀರು ಕೊಡುವ ವ್ಯವಸ್ಥೆ ಮಾಡದೇ ಇದ್ದರೆ ನಿಮ್ಮನ್ನು ನೇಣಿಗೆ ಹಾಕಿ ಬಿಡ್ತೀನಿ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯ ಬರಪರಿಹಾರ ಕಾರ್ಯ ಕುರಿತು ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಡೆಸಿದ ಬಳಿಕ ಸುದ್ದಿಗಾರರೊಬ್ಬರು ಪಾವಗಡ ತಾಲ್ಲೂಕಿನ ನೀರಿನ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಒಂದು ಕಡೆ ಸರಿ ಮಾಡಿ ಇನ್ನೊಂದು ಕಡೆ ನೀರು ಕೊಡದೇ ಇದ್ದರೆ ಹೇಗೆ. ನೀರಿಗಾಗಿ ಜನರು ದೂರ ದೂರ ಅಲೆದಾಡಬೇಕೇ? ನೀರು ಪೂರೈಕೆ ಮಾಡುವುದು ಪಂಚಾಯಿತಿಯದ್ದೇ ಆದ್ಯತೆಯ ಕೆಲಸ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ನೀವೇನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ತಕ್ಷಣ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಟ್ಯಾಂಕರ್‌ಗಳಿಂದಲಾದರೂ ನೀರು ಪೂರೈಸಲಿ. ನೀರಿನ ಸಮಸ್ಯೆ ಜನ ಎದುರಿಸಬಾರದು. ಈ ಕುರಿತು ಏನೇನು ಕ್ರಮ ಕೈಗೊಂಡಿದ್ದಾರೆ ಎಂಬುದು ಪಿಡಿಒಗಳೇ ವಾಟ್ಸ್ ಅಪ್ ಮೂಲಕ ವರದಿ ಕೊಡಬೇಕು’ ಎಂದು ಸೂಚಿಸಿದರು.

‘ಜನ ನೀರಿನ ಸಮಸ್ಯೆಯಿಂದ ತೊಂದರೆ ಪಡುವಾಗ ಸ್ವಲ್ಪ ಪ್ರಜ್ಞೆಯಿಂದ ಕೆಲಸ ಮಾಡುವುದನ್ನು ಕಲಿಯಿರಿ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !