ಮಂಗಳವಾರ, ನವೆಂಬರ್ 12, 2019
25 °C

ಡಾ.ವಿಷ್ಣುವರ್ಧನ್‌ ನಾಟಕೋತ್ಸವ, ಸಾಧಕರಿಗೆ ಪುರಸ್ಕಾರ

Published:
Updated:
Prajavani

ಕನ್ನಡದ ಕಲಾವಿದರೊಬ್ಬರ ಹೆಸರಿನಲ್ಲಿ ರಾಷ್ಟ್ರೀಯ ಪುರಸ್ಕಾರ ನೀಡಿ ನಾಡಿನ ಕಲಾ ಪರಂಪರೆ ಮತ್ತು ಸಂಸ್ಕೃತಿ ಇಮ್ಮಡಿಗೊಳಿಸುವ ಕೈಂಕರ್ಯವನ್ನು ಡಾ.ವಿಷ್ಣು ಸೇನಾ ಸಮಿತಿ ಕಳೆದ ಮೂರು ವರ್ಷದಿಂದ ಮಾಡುತ್ತಾ ಬಂದಿದೆ. ಕಲಾಸೇವೆಗೆ ಅರ್ಪಿಸಿಕೊಂಡ ಅರ್ಹ ಕಲಾವಿದರೊಬ್ಬರನ್ನು ಗುರುತಿಸಿ ಪ್ರತಿವರ್ಷ ವಿಷ್ಣುವರ್ಧನ್‌ ಅವರ ಜನ್ಮದಿನದಂದು ಪ್ರಶಸ್ತಿ ನೀಡುತ್ತಾ ಬಂದಿರುವುದು ಸಮಿತಿಯ ಹೆಗ್ಗಳಿಕೆ.

ಕನ್ನಡ ಮತ್ತು ವಿಷ್ಣುವರ್ಧನ್‌ ಅವರನ್ನು ಆರಾಧಿಸುವ ಅಭಿಮಾನಿಗಳಿಗೆ ಸಮಿತಿಯಿಂದ ಸೆಪ್ಟೆಂಬರ್‌ 18ರಿಂದ 20ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ 69ನೇ ಜನ್ಮದಿನದ ಅಂಗವಾಗಿ ನಾಟಕೋತ್ಸವ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ10ರವರಗೆ ನಾಟಕ ಪ್ರದರ್ಶನ ನಡೆಯಲಿದೆ. ಅವರು ನಟಿಸಿರುವ ಚಿತ್ರಗೀತೆಗಳ ಸಂಗೀತ ಸಂಜೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಕನ್ನಡ ರತ್ನ ಪ್ರಶಸ್ತಿ ‍ಪ್ರದಾನ, ಛಾಯಾಚಿತ್ರ ಪ್ರದರ್ಶನ ಇರಲಿದೆ. 

ಸೆ.18ರಂದು ಸಂಜೆ 4.30ಕ್ಕೆ ನಿರ್ದೇಶಕ, ನಟ ಎಸ್‌.ನಾರಾಯಣ್‌ ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ನಿರ್ದೇಶಕ ನಾಗಾಭರಣ ಅವರು ನಟ ರಮೇಶ್‌ ಅರವಿಂದ್‌ ಅವರಿಗೆ 2019ನೇ ಸಾಲಿನ ಡಾ.ವಿಷ್ಣುವರ್ಧನ್‌ ರಾಷ್ಟ್ರೀಯ ಪ್ರಶಸ್ತಿ, ₹25ಸಾವಿರ ನಗದು ಪ್ರದಾನ ಮಾಡಲಿದ್ದಾರೆ. ನಟ ಮಂಡ್ಯ ರಮೇಶ್‌, ಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ್, ನಿರ್ದೇಶಕ ರವಿ ಶ್ರೀವತ್ಸ, ರಂಗಕರ್ಮಿ ರಾಜಗುರು ಹೊಸಕೋಟೆ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ನಟನ ತಂಡದಿಂದ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಳ್ಳಲಿದೆ. 

ಸೆ.19ರಂದು ಸಂಜೆ 4.30ಕ್ಕೆ ಐಎಎಸ್‌, ಕೆಎಎಸ್‌ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮತ್ತು ರಂಗಭೂಮಿ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ರಂಗಭೂಮಿ ಸಾಧಕರನ್ನು ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ್ ಸನ್ಮಾನಿಸಲಿದ್ದಾರೆ. ಪತ್ರಕರ್ತರಾದ ವಿಶ್ವೇಶ್ವರ ಭಟ್‌, ಜೋಗಿ, ನಟ ಶರತ್‌ ಲೋಹಿತಾಶ್ವ, ರಂಗಕರ್ಮಿಗಳಾದ ಹನುಮಕ್ಕ, ಮುರುಡಯ್ಯ, ಆನಂದ್‌ ಡಿ.ಕಳಸ, ಬೇಲೂರು ರಘುನಂದನ್‌, ಡಾ.ರುದ್ರೇಶ್‌ ಬಿ.ಅದರಂಗಿ ಭಾಗವಹಿಸಲಿದ್ದಾರೆ.

ಸಂಜೆ 5.30ಕ್ಕೆ ವಿಶ್ವಪಥ ಕಲಾಸಂಗಮ ತಂಡದಿಂದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಹಾಗೂ ಸಾತ್ವಿಕ ತಂಡದಿಂದ ‘ಶರೀ‍ಫ್‌’ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.20ರಂದು ಸಮಾರೋಪ ಸಮಾರಂಭ ಹಾಗೂ ಕನ್ನಡ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್ ಉದ್ಘಾಟಿಸಲಿದ್ದಾರೆ. ಕವಿ ಡಾ.ಎಚ್‌.ಎಸ್ ವೆಂಕಟೇಶಮೂರ್ತಿ, ನಟರಾದ ಎಚ್‌.ಜಿ ದತ್ತಣ್ಣ, ಸುಚೇಂದ್ರ ಪ್ರಸಾದ್‌, ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5.30ಕ್ಕೆ ರಂಗವರ್ತುಲ ತಂಡದಿಂದ ‘ವೇಷ’ ಹಾಗೂ ರಂಗಪಯಣ ತಂಡದವರಿಂದ ‘ಗುಲಾಬಿ ಗ್ಯಾಂಗ್‌’ ನಾಟಕ ಪ್ರದರ್ಶನ ಇರಲಿದೆ.

2017ರಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟ ಎಸ್‌.ಶಿವರಾಂ ಅವರಿಗೆ ವಿಷ್ಣುವರ್ಧನ್‌ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. 2018ರಲ್ಲಿ ಪಂಚಭಾಷಾ ತಾರೆ ವಿನಯಾ ಪ್ರಕಾಶ್‌ ಅವರಿಗೆ ಎರಡನೇ ವರ್ಷದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಅಭಿಮಾನಿಗಳ ಅಬ್ಬರ ಹೊರತಾದ ಸೃಜನಾತ್ಮಕ ಕಾರ್ಯಕ್ರಮ ಇದಾಗಿದೆ ಎನ್ನುತ್ತಾರೆ ವಿಷ್ಣುಸೇನಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌.

ಪ್ರತಿಕ್ರಿಯಿಸಿ (+)