ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಮಾಟ ಕಥಾ ನಾಟಕೋತ್ಸವ

Drama fest
Last Updated 8 ಮಾರ್ಚ್ 2019, 19:32 IST
ಅಕ್ಷರ ಗಾತ್ರ

ಧಾರವಾಡದ ಆಟಮಾಟ ತಂಡ ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ಮಾರ್ಚ್ 10ರಂದು ಎರಡು ನಾಟಕಗಳನ್ನು ‍ಪ್ರದರ್ಶಿಸಲಿದೆ. ಕಲಾವಿಲಾಸಿ ತಂಡ ಈ ನಾಟಕಗಳನ್ನು ಆಯೋಜಿಸಿದೆ.

ಕಲಾವಿಲಾಸಿ ಕಳೆದ ವರ್ಷ ಪ್ರಾರಂಭವಾದ ಹವ್ಯಾಸಿ ರಂಗತಂಡ. ಬೀಚಿಯವರ ಜೀವನ ಚರಿತ್ರೆ ಆಧಾರಿತ ‘ಮಾನಸ ಪುತ್ರ’ ನಾಟಕವನ್ನು ರಂಗಭೂಮಿಗೆ ತಂದು ಸಾಕಷ್ಟು ಮನ್ನಣೆ ಗಳಿಸಿದೆ. ಇದೀಗ ಆಟಮಾಟ ಧಾರವಾಡ ತಂಡದ ಜೊತೆ ಒಂದು ದಿನದ ‘ಕಥಾ ನಾಟಕೋತ್ಸವ’ವನ್ನು ಆಯೋಜಿಸಿದೆ.

ಈ ನಾಟಕೋತ್ಸವದಲ್ಲಿ ಎರಡು ನಾಟಕಗಳು ಪ್ರದರ್ಶನ ಕಾಣಲಿದ್ದು, ಎರಡೂ ನಾಟಕಗಳು ಸೂಕ್ಷ್ಮ ವಿಷಯವುಳ್ಳ ಕತೆಯನ್ನು ಆಧರಿಸಿದ ನಾಟಕಗಳಾಗಿರುತ್ತವೆ. ಈ ನಾಟಕಗಳ ವಿಶೇಷತೆ ಎಂದರೆ ಪಾತ್ರಧಾರಿಗಳು ಕತೆಯನ್ನು ಹೇಳುತ್ತಾ ಹೇಳುತ್ತಾ ತಾವೇ ಪಾತ್ರವಾಗುವುದು ವಿಶೇಷ.

ಮತ್ತೊಬ್ಬ ಮಾಯಿ: ಸಾಹಿತ್ಯ ಮತ್ತು ಜೀವನ ತತ್ವ ಹೊಂದಿರುವ ಇಬ್ಬರು ವ್ಯಕ್ತಿಗಳು ಕಾಲೇಜಿನ ಸ್ಟಾಫ್‌ರೂಮಿನಲ್ಲಿ ಕುಳಿತು ಒಬ್ಬರನ್ನೊಬ್ಬರು ಕೆಣಕುತ್ತಾ ಗೇಲಿ ಮಾಡಿಕೊಳ್ಳುತ್ತ ಟೀಕಿಸುತ್ತಾರೆ. ಹಾಗೆ ಪ್ರೀತಿಸುತ್ತಾ ಹಂಚಿಕೊಳ್ಳುವ ಕತೆ ರಂಗದ ಮೇಲೆ ಗಾಢವಾದ ಅನುಭವವನ್ನು ಕಟ್ಟಿ ಕೊಡುತ್ತದೆ. ಇಂಗ್ಲಿಷ್ ಪ್ರಾಧ್ಯಾಪಕ ಮೂರ್ತಿ ಇಲ್ಲಿ ಕತೆಗಾರ, ಕನ್ನಡ ಪ್ರಾಧ್ಯಾಪಕ ಪಾಂಡುರಂಗ ಡಿಗಸ್ಕರ್ ನಾನು ಹೇಳುವುದು ಕತೆಯಲ್ಲ ಅದು ಜೀವನ ಎಂದು ವಾದಿಸುವನು. ಕುಣಕಾಲ ಹುಡುಗಿಯ ಜೀವಂತ ಸಂಗತಿಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ಡಿಗಸ್ಕರ್ ಜವಾರಿ ಭಾಷೆಯಲ್ಲಿ ಜೀವನದ ಸಂಗತಿಯೊಂದನ್ನು ಮನಮುಟ್ಟುವಂತೆ ಕಟ್ಟಿಕೊಡುತ್ತಾರೆ. ಇದು ಹಿಂದೂಸ್ತಾನಿ ಭಾಷೆಯ ದಾಸ್ತಾನ್ಗೋಯಿ ಎಂಬ ಮಾದರಿಯಲ್ಲಿ ಹೇಳುವ ಕತೆಯಾಗಿದೆ. ಅಲ್ಲಿ ವಾಚಿಕಾಭಿನಯಕ್ಕೆ ವಿಶೇಷ ಒತ್ತು ಇರುವುದರಿಂದ ಮತ್ತೊಬ್ಬ ಮಾಯಿ ನಾಟಕದ ಪಾತ್ರಗಳು ಆ ಮಾದರಿಯ ಕಥನ ಕೌಶಲವನ್ನು ನೆನಪಿಸುತ್ತವೆ.

ಪ್ರಸ್ತುತಿ: ಆಟಮಾಟ ಧಾರವಾಡ, ರಚನೆ–ರಾಘವೇಂದ್ರ ಪಾಟೀಲ, ನಿರ್ದೇಶನ–ಮಹಾದೇವ ಹಡಪದ. ಅವಧಿ–70 ನಿಮಿಷ. ಸಂಜೆ 4.30. ಟಿಕೆಟ್ ದರ ₹ 100

ಮೋಹನಸ್ವಾಮಿ: ಕನ್ನಡದ ಸೂಕ್ಷ್ಮ ಬರಹಗಾರ ವಸುಧೇಂದ್ರ ಅವರ ಸಣ್ಣ ಕತೆ ‘ಮೋಹನಸ್ವಾಮಿ’ ಆಧಾರಿತ ನಾಟಕವಿದು. ಇಲ್ಲಿ ಸಲಿಂಗಕಾಮಿ ಮೋಹನಸ್ವಾಮಿಯ ವಸ್ತುಸ್ಥಿತಿ ಭಾವನಾತ್ಮಕವಾಗಿಯೂ ಪ್ರಾಯೋಗಿಕವಾಗಿಯೂ ಅತ್ಯಂತ ಸಂಕೀರ್ಣ. ಸಮಾಜಕ್ಕೆ ಒಪ್ಪಿತವಾಗಲೇಬೇಕಾದ ನಿಸರ್ಗ ಸಹಜ ಸಲಿಂಗ ಸಂಬಂಧದೊಳಗೆ ಇರುವ ಹಲವಾರು ಭಾವಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ನಾಟಕವು ಆಂತರಿಕ ಬಲವನ್ನು ಹೆಚ್ಚಿಸುವಂತಿದೆ. ಕೀಳರಿಮೆಯ ಮುಖವಾಡವನ್ನು ಕಿತ್ತೊಗೆದಂತೆ ಮೋಹನಸ್ವಾಮಿ ಕಟ್ಟಕಡೆಯಲ್ಲಿ ತನ್ನೊಳಗೆ ತಾನು ಕಂಡುಕೊಳ್ಳುವ ಬೆಳಕು ಅಖಂಡ ಸಲಿಂಗ ಪ್ರೇಮಿಗಳ ಅಸ್ಮಿತೆಗೆ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಮೋಹನಸ್ವಾಮಿ ನಾಟಕವು ಪ್ರಸ್ತುತ ಸಂದರ್ಭದ ಅಗತ್ಯವಾಗಿದೆ. ಪ್ರಸ್ತುತಿ, ನಿರ್ದೇಶನ: ಆಟಮಾಟ ಧಾರವಾಡ, ರಚನೆ–ವಸುಧೇಂದ್ರ. ಅವಧಿ–80 ನಿಮಿಷ. ರಾತ್ರಿ 7.30. ಟಿಕೆಟ್ ದರ ₹ 100

ನಿರ್ದೇಶಕರ ಪರಿಚಯ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರದವರಾದ ಮಹಾದೇವ ಹಡಪದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ತಂತ್ರಜ್ಞರಾಗಿ ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ನೀನಾಸಂ ಪದವೀಧರರಾದ ಇವರು ತಿರುಗಾಟ, ಜನಮನದಾಟ, ರಂಗಾಯಣದ ರಂಗ ಕಿಶೋರ ರೆಪರ್ಟಿಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ.

ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಎರಡು ವರ್ಷ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಇವರು ನಿರ್ದೇಶಿಸಿರುವ ನಾಟಕಗಳು ಹಲವು. ಸದ್ಯ ಹೊಲದಲ್ಲಿ ಕೃಷಿ ಮಾಡುತ್ತಾ ಧಾರವಾಡದ ಆಟಮಾಟ ರೆಪರ್ಟಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT