ದೇಶದಲ್ಲಿ ತೀವ್ರ ಬದಲಾವಣೆ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌

7

ದೇಶದಲ್ಲಿ ತೀವ್ರ ಬದಲಾವಣೆ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌

Published:
Updated:
Deccan Herald

ಬೆಳಗಾವಿ: ‘ದೇಶದಲ್ಲಿ ಇಂದು ತೀವ್ರಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ನಾವು ತೆಗೆದುಕೊಳ್ಳುವ ತೀರ್ಮಾನಗಳು ಇಂದಿನ ಪೀಳಿಗೆ ಮೇಲೆ ಅಷ್ಟೇ ಅಲ್ಲ, ಶತಮಾನಗಳವರೆಗೂ ಪರಿಣಾಮ ಬೀರುವಂತಹದ್ದಾಗಿವೆ’ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಕರ್ನಾಟಕ ಲಾ ಸೊಸೈಟಿ ಹಾಗೂ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಅಮೃತ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮಲ್ಲಿ ಪ್ರತಿಭೆ ಹಾಗೂ ಯುವಶಕ್ತಿಯ ಆಗರವಿದೆ. ಇದಕ್ಕೆ ಪೂರಕವಾಗಿ ಹೊಸ ಆರ್ಥಿಕತೆಯು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಆಂತರಿಕ ಉತ್ಪನ್ನಗಳ ವೃದ್ಧಿ ದರವು (ಜಿಡಿಪಿ) ಶೇ 8.2ಕ್ಕೆ ತಲುಪಿದ್ದು, ದೇಶದ ಆರ್ಥಿಕತೆ ಸದೃಢವಾಗಿದೆ’ ಎಂದು ಹೇಳಿದರು.

‘ನಾವು ಈಗ ತಾಂತ್ರಿಕ ಹಾಗೂ ಉದ್ಯಮಶೀಲ ಯುಗದಲ್ಲಿದ್ದೇವೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಹೊಸ್ತಿಲಲ್ಲಿದ್ದೇವೆ. ನಮ್ಮ ಜೀವನದಲ್ಲಿ ಹಾಗೂ ನಾವು ಮಾಡುವ ಕೆಲಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಯುವಪೀಳಿಗೆಯ ಬೇಕು– ಬೇಡಗಳೂ ಬದಲಾಗಿವೆ. ಇದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ಬದಲಾಗಬೇಕಾಗಿದೆ’ ಎಂದು ಸಲಹೆ ನೀಡಿದರು.

ಪ್ರಸ್ತುತ ದಿನಗಳ ಅಗತ್ಯಗಳನ್ನು ಪೂರೈಸಲು ಉನ್ನತ ಶಿಕ್ಷಣವನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ದೇಶದ ಅತ್ಯುನ್ನತ 60 ವಿಶ್ವವಿದ್ಯಾಲಯಗಳಿಗೆ ಸ್ವಾಯತತ್ತೆ ನೀಡಲಾಗಿದೆ. 20 ಶಿಕ್ಷಣ ಸಂಸ್ಥೆಗಳಿಗೆ ನೇಮಕಾತಿ ಹಾಗೂ ಪಠ್ಯಕ್ರಮ ಆಯ್ಕೆ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ. ಕರ್ನಾಟಕ ಲಾ ಸೊಸೈಟಿ ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ನುಡಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮಾತನಾಡಿ, ‘ಬಾರ್‌ ಅಸೋಸಿಯೇಶನ್‌ಗಳ ಸದಸ್ಯರು ಕೂಡ ನ್ಯಾಯಾಲಯದ ಅಧಿಕಾರಿಗಳು ಇದ್ದಂತೆ. ಅವರು ಕೂಡ ನ್ಯಾಯಮೂರ್ತಿಗಳಿಗೆ ಮಾರ್ಗದರ್ಶನ ಮಾಡಬಹುದು’ ಎಂದು ಹೇಳಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ‘ಉತ್ತರ ಕರ್ನಾಟಕದ ಬೆಳಗಾವಿಗೆ ಹಲವು ಇಲಾಖೆಗಳ ಮುಖ್ಯ ಕಚೇರಿಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಬದ್ಧವಾಗಿದೆ. ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ’ ಎಂದರು.

ರಾಜ್ಯಪಾಲ ವಜೂಭಾಯಿ ವಾಲಾ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ, ಎಸ್‌. ಅಬ್ದುಲ್‌ ನಜೀರ್‌, ವಿನೀತ್‌ ಸರಣ್‌, ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಸಂಸದ ಸುರೇಶ ಅಂಗಡಿ, ಕೆಎಲ್‌ಎಸ್‌ ಅಧ್ಯಕ್ಷ ಅನಂತ ಮಂಡಗಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !