ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ: ಟೆಂಡರ್‌ನಿಂದ ವಿನಾಯಿತಿ

ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆ * ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ
Last Updated 30 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಲು ಟೆಂಡರ್‌ನಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು.

ಬರ ಪರಿಸ್ಥಿತಿ ಹಾಗೂ ಪರಿಹಾರ ಕಾಮಗಾರಿಅಧಿಕಾರಿಗಳ ಸಭೆ ನಡೆಸಿ ಅವಲೋಕಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. 26 ಜಿಲ್ಲೆಗಳ 1,205 ಗ್ರಾಮಗಳಿಗೆ 1,893 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಅದಲ್ಲದೆ, 1,064 ಗ್ರಾಮಗಳಿಗೆ 1,392 ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ಪ್ರದೇಶದ 303 ವಾರ್ಡ್‌ಗಳಲ್ಲಿ 214 ಟ್ಯಾಂಕರ್‌ಗಳು ನೀರು ಪೂರೈಕೆ ಮಾಡುತ್ತಿವೆ’ ಎಂದರು.

ನೀರಿನ ಸಮಸ್ಯೆಯನ್ನು ತಕ್ಷಣ ಇತ್ಯರ್ಥಪಡಿಸಲು ನಿಯಂತ್ರಣ ಕೊಠಡಿಗಳನ್ನು ತೆರೆದು 24 ಗಂಟೆಗಳಲ್ಲೂ ಕುಂದು ಕೊರತೆಗಳನ್ನು ಆಲಿಸಬೇಕು ಎಂದು ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯದ ಮಟ್ಟದ ನಿಯಂತ್ರಣ ಕೊಠಡಿಗೂ (1070) ಸಮಸ್ಯೆ ಬಗ್ಗೆ ಜನರು ಮಾಹಿತಿ ನೀಡಬಹುದು. ಪ್ರತಿ ಹೋಬಳಿಗೆ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಕುಡಿಯುವ ನೀರಿನ ವ್ಯವಸ್ಥೆ, ಉದ್ಯೋಗ ಸೃಜನೆ, ಮೇವು ಪೂರೈಕೆ ಬಗ್ಗೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

‘ಉದ್ಯೋಗ ಸೃಜನೆ ಕಾಮಗಾರಿಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಮುದಾಯ ಮಟ್ಟದ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ. ಮಾರ್ಚ್‌ 31ರ ಅಂತ್ಯಕ್ಕೆ 10 ಕೋಟಿ ಮಾನವ ದಿನಗಳ ಗುರಿಗೆ ಎದುರಾಗಿ 10.47 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 21.11 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸಿ ₹3821 ಕೋಟಿ ವೆಚ್ಚ ಮಾಡಲಾಗಿದೆ’ ಎಂದರು.

ಪ್ರಕೃತಿ ವಿಕೋಪ ಪರಿಹಾರ ಕಾಮಗಾರಿಗಳಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ₹682 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹726 ಕೋಟಿ ಅನುದಾನ ಲಭ್ಯ ಇದೆ ಎಂದು ಅವರು ಮಾಹಿತಿ ನೀಡಿದರು.

‘ರಾಜ್ಯದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಹೀಗಾಗಿ, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಮಾರ್ಚ್‌ ತಿಂಗಳಲ್ಲಿ ಶೇ 25, ಏಪ್ರಿಲ್‌ನಲ್ಲಿ ಶೇ 30, ಮೇ ತಿಂಗಳಲ್ಲಿ ಶೇ 30 ಹಾಗು ಜೂನ್‌ನಲ್ಲಿ ಶೇ 20ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ‘ರಾಜ್ಯದಲ್ಲಿ ಇಲ್ಲಿಯವರೆಗೆ 16,56 ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದ್ದು, 16,037 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 530 ಘಟಕಗಳು ಕೆಟ್ಟು ಹೋಗಿವೆ’ ಎಂದರು.

ಪ್ರವಾಹಪೀಡಿತ ಜಿಲ್ಲೆಗಳಿಗೆ ಅಧಿಕಾರಿಗಳ ತಂಡ

ಕೊಡಗು, ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಹದಿಂದ ಅಪಾರ ಹಾನಿಯಾಗಿತ್ತು. ಈ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಲು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ವಿಜಯಭಾಸ್ಕರ್‌ ತಿಳಿಸಿದರು.

ಈ ತಂಡದಲ್ಲಿ ಪೊಲೀಸ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಕೆಎಸ್‌ಎನ್‌ಡಿಎಂಸಿ ನಿರ್ದೇಶಕರು ಇದ್ದಾರೆ. ಈ ತಂಡ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಈ ವಾರ ಮೂರು ದಿನ ಹಾಗೂ ಹಾಸನ, ಚಿಕ್ಕಮಗಳೂರು ಜಿಲ್ಲೆಗೆ ಮುಂದಿನ ವಾರ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ ಎಂದರು.

ಮುಖ್ಯಮಂತ್ರಿ ಸಭೆಗೆ ಅವಕಾಶ ಕೋರಿ ಆಯೋಗಕ್ಕೆ ಪತ್ರ

ಬರಗಾಲದ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆಗಳನ್ನು ನಡೆಸಲು ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಿಗೆ ಅವಕಾಶ ನೀಡಬೇಕು ಎಂದು ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ವಿಜಯಭಾಸ್ಕರ್‌ ತಿಳಿಸಿದರು.

‘ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿ ಹಾಗೂ ಸಚಿವರು ಸಭೆ ನಡೆಸುವಂತಿಲ್ಲ. ಹೀಗಾಗಿ, ಸಭೆ ನಡೆಸಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಅದಕ್ಕೆ ಆಯೋಗದಿಂದ ಉತ್ತರ ಬಂದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT