ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು– ಪ್ರತಿದೂರು ಸಲ್ಲಿಕೆ: ಕಾವೇರಿ ನದಿಯಲ್ಲಿ ಹೂಳೆತ್ತುವ ಕಾಮಗಾರಿ ಸ್ಥಗಿತ

ಒಂದು ದಿನ ಮಾತ್ರ ನಡೆದ ಕೆಲಸ
Last Updated 16 ಮೇ 2020, 14:07 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ರಸೂಲ್ ಬಡಾವಣೆ ಬಳಿ ಕಾವೇರಿ ನದಿಯಲ್ಲಿ ಕೈಗೊಂಡಿದ್ದ ಹೂಳೆತ್ತುವ ಹಾಗೂ ನಿರ್ವಹಣೆ ಕಾಮಗಾರಿ ನಿಯಮ ಬಾಹಿರವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸೇರಿದಂತೆ ನಾಲ್ವರ ವಿರುದ್ಧ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್ ಪದಾಧಿಕಾರಿಗಳು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತವಾಗಿದೆ.

ಕಳೆದ ಎರಡು ವರ್ಷಗಳಿಂದ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಕುಶಾಲನಗರ ಪಟ್ಟಣ ಭಾಗಶಃ ಮುಳುಗಡೆಯಾಗಿ ಜನರು ತೊಂದರೆಗೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಹ ಸಂತ್ರಸ್ತರ ವೇದಿಕೆ ಹಾಗೂ ನದಿಯಂಚಿನ ಬಡಾವಣೆಗಳ ಜನರು ಕಾವೇರಿ ನದಿಯಲ್ಲಿ ತುಂಬಿರುವ ಹೂಳು ತೆಗೆಯುವ ಮೂಲಕ ನದಿ ಪ್ರವಾಹದಿಂದ ರಕ್ಷಣೆ ಮಾಡಬೇಕು ಎಂದು ಅಪ್ಪಚ್ಚುರಂಜನ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಮಳೆಗಾಲದಲ್ಲಿ ಕಾವೇರಿ ನದಿಯಿಂದ ಉಂಟಾಗುತ್ತಿದ್ದ ಪ್ರವಾಹವನ್ನು ತಗ್ಗಿಸಬೇಕು ಎಂಬ ಉದ್ದೇಶದಿಂದ ಮೇ 11ರಂದು ₹ 88 ಲಕ್ಷ ವೆಚ್ಚದಲ್ಲಿ ನದಿ ಹೂಳೆತ್ತುವ ಹಾಗೂ ನಿರ್ವಹಣೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ನದಿಯಲ್ಲಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ ಹಾಗೂ ಪರಿಸರಕ್ಕೆ ಧಕ್ಕೆ ಉಂಟಾಗುವುದರೊಂದಿಗೆ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಲಾಗಿದೆ ಎಂದು ಬಸವಣ್ಣ ದೇವರ ಬನದ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಮುತ್ತಣ್ಣ ಹಾಗೂ ಕಾರ್ಯದರ್ಶಿ ಬಿ.ಸಿ.ನಂಜಪ್ಪ ಅವರು ಶಾಸಕ ರಂಜನ್, ಪ್ರವಾಹ ಸಂತ್ರಸ್ತರ ವೇದಿಕೆ ಅಧ್ಯಕ್ಷ ಚಂದ್ರಮೋಹನ್, ಕಾರ್ಯಾಧ್ಯಕ್ಷ ಎಂ.ಎಂ.ಚರಣ್, ಗುತ್ತಿಗೆದಾರ ಪುರುಷೋತ್ತಮ ರೈ, ಕಾವೇರಿ ನೀರಾವರಿ ನಿಗದ ಅಧಿಕಾರಿ ರಾಜುಗೌಡ ವಿರುದ್ಧ ದೂರು ನೀಡಿದ್ದಾರೆ.

ಪ್ರತಿದೂರು:ನೀರಾವರಿ ಇಲಾಖೆ ವತಿಯಿಂದ ಕಾವೇರಿ‌ ನದಿಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಗೆ ಅಡ್ಡಿ ವ್ಯಕ್ತಪಡಿಸಿ, ಪೊಲೀಸರಿಗೆ ದೂರು ನೀಡಿರುವ ಸಿ.ಪಿ.ಮುತ್ತಣ್ಣ ಹಾಗೂ ಬಿ.ಸಿ.ನಂಜಪ್ಪ ಅವರು ವಿರುದ್ಧ ಪ್ರವಾಹ ಸಂತ್ರಸ್ತರ ವೇದಿಕೆ ಪದಾಧಿಕಾರಿಗಳಾದ ಚಂದ್ರಮೋಹನ್, ಚರಣ್, ಉದಯಕುಮಾರ್, ಕೊಡಗನ ‌ಹರ್ಷ ಅವರು ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ.

ಕಾಮಗಾರಿ ಸ್ಥಗಿತ:ನದಿಯಲ್ಲಿ ಹೂಳೆತ್ತುವ ಕಾಮಗಾರಿಯ ವಿರುದ್ಧ ಹಾಗೂ ಕಾಮಗಾರಿ ಪರವಾಗಿ ದೂರು ಪ್ರತಿದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ.ಒಂದೇ ನಡೆದ ಕಾಮಗಾರಿಯಲ್ಲಿ ಅಪಾರ ಪ್ರಮಾಣದ ಮರಳನ್ನು ತೆಗೆದು ರಸೂಲ್ ಬಡಾವಣೆಯಲ್ಲಿ ದಾಸ್ತಾನು ಮಾಡಲಾಗಿದೆ.

ಕಾಮಗಾರಿ ಆರಂಭಕ್ಕೆ ಒತ್ತಾಯ:ನದಿ ಅಂಚಿನ ಬಡಾವಣೆಗಳ ಜನರು ಹೂಳೆತ್ತುವ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾರೆ. ಕಾಮಗಾರಿಯನ್ನು ಆರಂಭಿಸುವ ಮೂಲಕ ಶೀಘ್ರವಾಗಿ ಪೂರ್ಣಗೊಳಿಸುವುದರೊಂದಿಗೆ ನದಿ ಅಂಚಿನ ಬಡಾವಣೆಗಳ ನಿವಾಸಿಗಳನ್ನು ರಕ್ಷಣೆ ಮಾಡಬೇಕು ಎಂದು ಶೈಲಜಾ ಬಡಾವಣೆ ನಿವಾಸಿಗಳಾದ ವನಜಾಕ್ಷಿ, ತಿರುಮಲಯ್ಯ, ಜಯರಾಮ್, ಉತ್ತಪ್ಪ, ಶಿವಪ್ಪ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT