ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: 12 ಗ್ರಾಮಗಳಲ್ಲಿ ನೀರಿಗೆ ತತ್ವಾರ!

ಜೈನಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲ: ಆರೋಪ
Last Updated 23 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಕಳೆದೆರೆಡು ತಿಂಗಳುಗಳಿಂದ ಈ ಯೋಜನೆ ಮೂಲಕ ನೀರು ಸರಬರಾಜು ಸ್ಥಗಿತಗೊಂಡಿದ್ದು, ತಾಲ್ಲೂಕಿನ ಜೈನಾಪುರ ಸೇರಿದಂತೆ 12 ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಕೃಷ್ಣಾ ನದಿಯಿಂದ ಪೈಪ್‌ಲೈನ್‌ ಮೂಲಕ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು 2015ರ ಫೆಬ್ರುವರಿಯಿಂದ ಆರಂಭಿಲಾಗಿತ್ತು. ಬಹುತೇಕ ಬರಪೀಡಿತ ಗ್ರಾಮಗಳನ್ನೇ ಒಳಗೊಂಡಿರುವ ಈ ಯೋಜನೆಯು ಆರಂಭದಿಂದಲೂ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿದೆ. ಎರಡು ತಿಂಗಳಿನಿಂದ ಸಂಪೂರ್ಣ ನೀರು ಸರಬರಾಜು ವ್ಯವಸ್ಥೆಯೇ ಸ್ಥಗಿತಗೊಂಡಿದೆ! ಇದರಿಂದಾಗಿ ಅಲ್ಲಿನ ಜನರಿಗೆ ಮಾರ್ಚ್‌ ಮುನ್ನವೇ ನೀರಿಗಾಗಿ ತತ್ವಾರ ಎದುರಾಗಿದೆ.

ನೀರಿಗಾಗಿ ಅಲೆದಾಟ

ತಾಲ್ಲೂಕಿನ ತೋರಣಹಳ್ಳಿ, ಕರೋಶಿ, ಮುಗಳಿ, ವಡ್ರಾಳ, ಬಂಬಲವಾಡ, ಕಮತೆನಟ್ಟಿ, ಮುಗಳಿ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ನಿತ್ಯವೂ ಅಲೆದಾಡುತ್ತಿದ್ದಾರೆ. ಆಯಾ ಗ್ರಾಮ ಪಂಚಾಯಿತಿವರು ಸ್ಥಳೀಯ ಜಲಮೂಲಗಳನ್ನು ಬಳಸಿಕೊಂಡು ಜನರಿಗೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸುತ್ತಿದ್ದರೂ ಅಗತ್ಯವಿರುವಷ್ಟು ನೀರು ದೊರಕದೇ ಸಾರ್ವಜನಿಕರು ತೋಟಪಟ್ಟಿಗಳಿಗೆ ತೆರಳಿ ಬಾವಿ, ಬೋರ್‌ವೆಲ್‌ಗಳಿಂದ ನೀರು ತರುತ್ತಿರುವ ದೃಶ್ಯ ಕಂಡುಬರುತ್ತಿದೆ.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಡ್ರಾಳ ಗ್ರಾಮಕ್ಕೆ ಎರಡು ತಿಂಗಳಿನಿಂದ ನೀರು ಪೂರೈಕೆ ಆಗುತ್ತಿಲ್ಲ. ಗ್ರಾಮದಲ್ಲಿರುವ ಬೋರ್‌ವೆಲ್ ಮತ್ತು ತೆರೆದ ಬಾವಿಯೊಂದೇ ಜೀವ ಜಲಕ್ಕೆ ಆಧಾರವಾಗಿದೆ. ನೇಜಕರ ಮಡ್ಡಿ, ಶಿರಗಣ್ಣವರ ಮಡ್ಡಿ, ಮಾಳಮಡ್ಡಿ ನಿವಾಸಿಗಳಂತೂ ತೀವ್ರ ದರೆ ಅನುಭವಿಸುತ್ತಿದ್ದಾರೆ’ ಎಂದು ವಡ್ರಾಳದ ನಿವಾಸಿ ಮಾರುತಿ ನೇಜಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಭಟನೆಯ ಎಚ್ಚರಿಕೆ

‘ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಸಮಸ್ಯೆ ಎದುರಾಗಿದೆ. ಸಂಬಂಧಿತ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತ್ವರಿತವಾಗಿ ನೀರು ಪೂರೈಕೆ ಆರಂಭಿಸದಿದ್ದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಕರೋಶಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜು ಕಾಂಬಳೆ ತಿಳಿಸಿದರು.

‘ಕೃಷ್ಣಾ ನದಿಯಿಂದ ಚಿಕ್ಕೋಡಿ ಉಪಕಾಲುವೆಗೆ ನೀರು ಹರಿಸುವ ಯೋಜನೆ ಕಾಮಗಾರಿ ನಿರ್ವಹಿಸುವಾಗ ಜೈನಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ನಲ್ಲಿ ಸೋರಿಕೆ ಕಂಡುಬಂದಿದೆ. ಹೀಗಾಗಿ, 20 ದಿನಗಳ ಕಾಲ ನೀರು ಪೂರೈಕೆ ವ್ಯವಸ್ಥೆ ಸ್ಥಗಿತಗೊಂಡಿದೆ. ನೀರಾವರಿ ಇಲಾಖೆಯಿಂದ ದುರಸ್ತಿ ನಡೆದಿದೆ. ನೀರು ಪೂರೈಕೆ ಆರಂಭಗೊಳ್ಳಲಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಆನಂದ ಬಣಗಾರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT