ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬರೆ; ಅನ್ನದಾತ ಹೊರಟ ಗುಳೆ

ಮುಂಗಾರು ಕೈಕೊಟ್ಟ ಬೆನ್ನಿಗೆ; ದೂರವಾದ ಹಿಂಗಾರು ಮಳೆ
Last Updated 11 ನವೆಂಬರ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 24 ಜಿಲ್ಲೆಗಳ 72 ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಮಳೆ ಪ್ರಮಾಣದ ಕೊರತೆ ಆಧಾರದಲ್ಲಿ 39 ಮತ್ತು ಬೆಳೆ ಹಾನಿ ಆಧಾರದಲ್ಲಿ 33 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಗುರುತಿಸಲಾಗಿದ್ದು, ಉಳಿದ 28 ತಾಲ್ಲೂಕುಗಳು ಭಾಗಶಃ ಬರ ಪೀಡಿತ ಎಂದು ಘೋಷಿಸಲಾಗಿದೆ. ಈ ತಾಲ್ಲೂಕುಗಳನ್ನು ಒಳಗೊಂಡ ಜಿಲ್ಲೆಗಳ ಚಿತ್ರಣ ಇಲ್ಲಿದೆ.

* ಗದಗ ಜಿಲ್ಲೆಯ ಗದಗ, ಮುಂಡರಗಿ, ಲಕ್ಷ್ಮೇಶ್ವರ, ರೋಣ, ನರಗುಂದ ತಾಲ್ಲೂಕುಗಳಲ್ಲಿ ಐದನೆಯ ವರ್ಷವೂ ಬರ ಕಾಣಿಸಿಕೊಂಡಿದೆ. ಈ ತಾಲ್ಲೂಕುಗಳಲ್ಲಿ ಶೇ 68.8ರಷ್ಟು ಮಾತ್ರ ಬಿತ್ತನೆಯಾಗಿದೆ.

* ಧಾರವಾಡ ಜಿಲ್ಲೆಯ ನವಲಗುಂದ ಮತ್ತು ಹುಬ್ಬಳ್ಳಿ ತಾಲ್ಲೂಕುಗಳು ಕೊಳವೆಬಾವಿ ಮತ್ತು ಕೆರೆಯ ನೀರನ್ನೇ ನೆಚ್ಚಿಕೊಂಡಿವೆ.

* ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ₹ 470 ಕೋಟಿಯ ಬೆಳೆ ನಷ್ಟ ಅಂದಾಜಿಸಲಾಗಿದೆ.

* ವಿಜಯಪುರದಲ್ಲಿ ಬಸವನಬಾಗೇವಾಡಿ ತಾಲ್ಲೂಕು ಹೊರತುಪಡಿಸಿದರೆ, ಉಳಿದ ತಾಲ್ಲೂಕುಗಳ 58 ಗ್ರಾಮಗಳ 3 ಲಕ್ಷಕ್ಕೂ ಹೆಚ್ಚಿನ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

* ಅತಿವೃಷ್ಟಿಯಿಂದ ತತ್ತರಿಸಿದ್ದ ಹಾಸನಕ್ಕೂ ಬರದ ಬಿಸಿ ತಟ್ಟಿದೆ. ಬೇಲೂರು, ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲೆಯ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಭರ್ತಿಯಾಗಿದ್ದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ಸಂಪೂರ್ಣ ನೀಗಿಲ್ಲ.

* ಚಿಕ್ಕಬಳ್ಳಾಪುರ ಜಿಲ್ಲೆಯ 64 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

* ತುಮಕೂರು ಜಿಲ್ಲೆಯ 10 ತಾಲ್ಲೂಕು ಬರ ಎದುರಿಸುತ್ತಿದ್ದು, ತಿಪಟೂರು, ಪಾವಗಡ ತಾಲ್ಲೂಕಿನ ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ.

* ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಕೋಲಾರ 2011–12ರಿಂದಲೂ ಸತತ ಬರಕ್ಕೆ ತುತ್ತಾಗುತ್ತಿದೆ. ಇಲ್ಲಿ ಕೊಳವೆ ಬಾವಿ, ಕೆರೆ ಕುಂಟೆಗಳೇ ನೀರಿಗೆ ಆಧಾರ. ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತುತ್ತಿವೆ.

* ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು, ಹರಪನಹಳ್ಳಿ ಹಾಗೂ ಹರಿಹರ ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಪರಿಗಣಿಸಲಾಗಿದೆ. ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿ ತಾಲ್ಲೂಕುಗಳಲ್ಲೂ ಮಳೆಯ ಕೊರತೆಯಾಗಿದ್ದರೂ ‘ಬರ’ ಪಟ್ಟಿಗೆ ಸೇರಿಲ್ಲ.

* ಕಲಬುರ್ಗಿ ಜಿಲ್ಲೆಯಲ್ಲಿ ಆಳಂದ ಬಿಟ್ಟು ಉಳಿದ ಆರು ತಾಲ್ಲೂಕುಗಳಲ್ಲಿ ಬರ ಇದ್ದರೂ, ‘ಬರ ಪರಿಹಾರ’ ಇನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಬಿತ್ತನೆ ಮಾಡಿದ್ದ ಬಹುತೇಕ ಬೆಳೆ ಹಾನಿಯಾಗಿದೆ.

* ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ ನಾಲ್ಕು ತಾಲ್ಲೂಕುಗಳನ್ನು ಬರ ಘೋಷಣೆ ಮಾಡಿದ್ದರೂ ನಯಾಪೈಸೆ ಅನುದಾನ ಬಂದಿಲ್ಲ ಎಂಬ ಆರೋಪವಿದೆ. ಮಳೆಯಾಶ್ರಿತ ಬಹುತೇಕ ಪ್ರದೇಶಗಳಲ್ಲಿ ‌ಮೇವಿನ ಕೊರತೆ ಇದೆ.

* ಬೀದರ್‌ ಜಿಲ್ಲೆಯ ಬೀದರ್, ಹುಮನಾಬಾದ್, ಔರಾದ್‌ ಹಾಗೂ ಬಸವಕಲ್ಯಾಣ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೊಡಗಳನ್ನು ಹಿಡಿದುಕೊಂಡು ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.

* ಚಿತ್ರದುರ್ಗ ಜಿಲ್ಲೆಯಲ್ಲಿ 2.87 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ.

* ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ತಾಲ್ಲೂಕನ್ನು ತೀವ್ರ ಬರಪೀಡಿತ ಮತ್ತು ಕೊಳ್ಳೇಗಾಲ ತಾಲ್ಲೂಕನ್ನು ಭಾಗಶಃ ಬರ ಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಇಲ್ಲಿ ಹೇಳಿಕೊಳ್ಳುವಂಥ ಸಮಸ್ಯೆ ಇಲ್ಲ.

* ಚಿಕ್ಕಮಗಳೂರಿನ ಕಡೂರು ತಾಲ್ಲೂಕಿನಲ್ಲಿ ಮೂರು ವರ್ಷಗಳಿಂದ ಮಳೆ ಕೊರತೆಯಿಂದಾಗಿ ತೆಂಗು, ಅಡಿಕೆ ತೋಟ ಒಣಗಿವೆ. ಬೆಳೆಗಳು ನೆಲಕಚ್ಚಿವೆ.

* ಮೈಸೂರು ಜಿಲ್ಲೆ ವರ್ಷದ ಹಿಂದೆಯಷ್ಟೇ ತೀವ್ರ ಬರಗಾಲದಿಂದ ತತ್ತರಿಸಿತ್ತು. ಆದರೆ, ಈ ವರ್ಷ ಜಿಲ್ಲೆಯ ಪರಿಸ್ಥಿತಿ ಬದಲಾಗಿದೆ. ಬಹುತೇಕ ಜಲಾಶಯಗಳು ತುಂಬಿವೆ. ಬರಪೀಡಿತ ಪ್ರದೇಶವೆಂದು ಈ ಹಿಂದೆ ಘೋಷಿಸಿದ್ದ ನಂಜನಗೂಡು ತಾಲ್ಲೂಕಿನಲ್ಲೂ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ, ಜಿಲ್ಲಾಡಳಿತಕ್ಕೆ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ.

* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕು ಸತತ ಬರಗಾಲ ಎದುರಿಸುತ್ತಿದ್ದು, ಫಸಲು ಕೈಸೇರುವ ಖಾತ್ರಿ ಇಲ್ಲವಾಗಿದೆ.

* ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಆರು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

* ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ ಚನ್ನಪಟ್ಟಣ ಮತ್ತು ಕನಕಪುರ ಈಗಾಗಲೇ ಬರಪೀಡಿತ ಎಂದು ಘೋಷಿಸಲ್ಪಟ್ಟಿವೆ. ಇವುಗಳ ಅರ್ಧದಷ್ಟು ಕೃಷಿ ಜಮೀನು ಖಾಲಿಯಾಗಿಯೇ ಉಳಿದುಹೋಗಿದೆ. ರಾಮನಗರ, ಮಾಗಡಿಯಲ್ಲಿ ಬಿತ್ತನೆಯಾದ ಬೆಳೆ ಒಣಗುತ್ತಿದೆ.

(ಮಾಹಿತಿ: ರಾಜೇಶ್‌ ರೈ ಚಟ್ಲ, ಜೋಮನ್ ವರ್ಗೀಸ್‌, ಪಿ.ಆರ್. ಹರ್ಷವರ್ಧನ, ಇ.ಎಸ್‌.ಸುಧೀಂದ್ರ ಪ್ರಸಾದ್‌, ಕೆ. ನರಸಿಂಹಮೂರ್ತಿ, ಕೆ.ಎಸ್‌.ಸುನೀಲ್, ಡಿ.ಬಿ. ನಾಗರಾಜ್, ಈರಪ್ಪ ಹಳಕಟ್ಟಿ, ಪ್ರಶಾಂತ್ ಡಿ.ಎಂ. ಕುರ್ಕೆ, ಜೆ.ಆರ್.ಗಿರೀಶ್, ವಿನಾಯಕ ಭಟ್, ಚಂದ್ರಕಾಂತ ಮಸಾನಿ, ಎಚ್.ಎಂ. ಸುಬ್ರಹ್ಮಣ್ಯ, ಜಿತೇಂದ್ರ, ಜಿ.ಬಿ.ನಾಗರಾಜ, ವಿ. ಸೂರ್ಯನಾರಾಯಣ, ಸಿದ್ದನಗೌಡ ಪಾಟೀಲ, ಕೆ. ಓಂಕಾರಮೂರ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT