ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬರ’ ಮರೆತ ಸರ್ಕಾರ! ಚುನಾವಣೆ ಗುಂಗಿನಿಂದ ಹೊರಬರದ ಆಡಳಿತಗಾರರು

ರೈತರ ಆತ್ಮಹತ್ಯೆ
Last Updated 11 ನವೆಂಬರ್ 2018, 20:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಮತ್ತೊಮ್ಮೆ ತೀವ್ರ ಬರದ ದವಡೆಗೆ ಸಿಲುಕಿದೆ. ಬರ ತಂದೊಡ್ಡಬಹುದಾದ ಸಂಕಷ್ಟಗಳನ್ನು ಮೊದಲೇ ಅಂದಾಜಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದ್ದ ಮೈತ್ರಿ ಸರ್ಕಾರ ಇನ್ನೂ ಮೈಕೊಡವಿ ನಿಂತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೆಲವು ರೈತರು ಆತ್ಮಹತ್ಯೆಗೆ ಮುಂದಾದರೆ, ಹಲವು ಕುಟುಂಬಗಳು ಕೂಲಿ ಅರಸಿ ಗುಳೆ ಹೋಗುವ ಮಾರ್ಗ ಕಂಡುಕೊಂಡಿವೆ. ‘ಚುನಾವಣೆ ಜ್ವರ’ದ ಮಧ್ಯೆ ಆ ಬಾಧೆಯ ತೀವ್ರತೆಯನ್ನು ಸರ್ಕಾರ ಅರ್ಥಮಾಡಿಕೊಂಡಿಲ್ಲ. ಉಪಚುನಾವಣೆಯ ತಂತ್ರಗಾರಿಕೆ ರೂಪಿಸುವಲ್ಲಿ ತಲ್ಲೀನವಾಗಿದ್ದ ಸರ್ಕಾರ ಫಲಿತಾಂಶ ಬಂದ ಬಳಿಕವೂ ಅದರ ಗುಂಗಿನಿಂದ ಹೊರಬಂದಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಇಂತಹ ಸಮಸ್ಯೆ ಎದುರಾದಾಗ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದು ಸಮಸ್ಯೆ ಆಲಿಸುತ್ತಿದ್ದರು. ತುರ್ತು ಪರಿಹಾರ ಕ್ರಮಗಳನ್ನು ಸೂಚಿಸುತ್ತಿದ್ದರು. ಆದರೆ, ಈ ವರ್ಷ ಈ ಸಭೆ ಆಗಿಲ್ಲ. ಕಂದಾಯ ಸಚಿವರು ನಿಯಮಿತವಾಗಿ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಸಿದ್ಧತೆಗಳ ಮಾಹಿತಿ ಪಡೆಯುತ್ತಿದ್ದರು. ಈ ಬಗ್ಗೆಯೂ ಸಚಿವರು ಗಮನ ಹರಿಸಿದಂತಿಲ್ಲ ಎಂಬ ಆರೋಪಗಳೂ ಇವೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರಪೀಡಿತವಾಗಿವೆ. ಮಂಡ್ಯ, ಮೈಸೂರು, ರಾಮನಗರ ಹಾಗೂ ಹಾಸನಕ್ಕೆ ಕುಮಾರಸ್ವಾಮಿ ಅವರು ಹತ್ತಾರು ಬಾರಿ ಭೇಟಿ ನೀಡಿದ್ದಾರೆ. ಕಳೆದ ತಿಂಗಳು ಕಲಬುರ್ಗಿ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಉಳಿದ ಜಿಲ್ಲೆಗಳ ಕಡೆಗೆ ಗಮನ ಹರಿಸಿಲ್ಲ ಎಂಬುದು ಆ ಭಾಗದ ಜನರು ಅಳಲು.

ಬರ ಪರಿಹಾರ ಮಾರ್ಗೋಪಾಯಗಳ ಯೋಜನೆ ಸಿದ್ಧಪಡಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆ ಗೋಜಿಗೆ ಹೋಗಿಲ್ಲ. ಕಾಮಗಾರಿಗಳ ತುರ್ತು ಅನುಷ್ಠಾನಕ್ಕಾಗಿ ತಾಲ್ಲೂಕುವಾರು ರಚಿಸಲಾಗಿರುವ ಶಾಸಕರ ನೇತೃತ್ವದ ಕಾರ್ಯಪಡೆಯ ಸಭೆಗಳು ಬಹುತೇಕ ಕಡೆ ನಡೆದಿಲ್ಲ.

ಜಿಲ್ಲಾಡಳಿತಗಳೂ ಆ ನಿಟ್ಟಿನಲ್ಲಿ ಸಿದ್ಧತೆ ನಡೆಸಿಲ್ಲ. ಹೆಚ್ಚಿನ ಉಸ್ತುವಾರಿ ಕಾರ್ಯದರ್ಶಿಗಳು ಚುನಾವಣಾ ವೀಕ್ಷಕರಾಗಿ ಪಂಚ ರಾಜ್ಯಗಳಿಗೆ ತೆರಳಿದ್ದಾರೆ. ಅವರು ಬರುವುದು ತಿಂಗಳ ಅಂತ್ಯಕ್ಕೆ. ಹೀಗಾದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ಈ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದರಿಂದ ರೈತರು ಖುಷಿಪಟ್ಟಿದ್ದರು. ಆದರೆ, ಅವರ ಸಂಭ್ರಮವನ್ನು ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಆವರಿಸಿದ ಬರದ ಛಾಯೆ ಕಿತ್ತುಕೊಂಡಿದೆ. ತೇವಾಂಶ ಕೊರತೆಯಿಂದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಹೆಸರು, ಜೋಳ, ಶೇಂಗಾ, ಮೆಣಸಿನ ಗಿಡ, ಗೋವಿನ ಜೋಳ, ಹತ್ತಿ, ತೊಗರಿ ಬೆಳೆಗಳು ಮೊಳಕೆ ಹಂತದಲ್ಲೇ ಒಣಗಿವೆ.

ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿಗೆ ಹೋಲಿಸಿದರೆ ಉತ್ತರಕರ್ನಾಟಕ ಭಾಗದಲ್ಲಿ ಮುಂಗಾರು ಕೊರತೆ ಅತಿಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಮಳೆ ಕೊರತೆಯಾಗಿರುವುದು 2001ರ ನಂತರ ಮೂರನೇ ಬಾರಿ. ಇದ್ದಕ್ಕಿದ್ದಂತೆ ಬಿಸಿಲು ಹೆಚ್ಚಾಗಿದ್ದರಿಂದ ಮಣ್ಣಿನಲ್ಲೂ, ವಾತಾವರಣದಲ್ಲೂ ತೇವಾಂಶ ಮಾಯವಾಗಿದೆ. ಬಿತ್ತಿದ್ದ ಬೆಳೆಗಳು ಬಾಡಿವೆ. ಕೆರೆಗಳ ಒಡಲು ಬತ್ತಿ ಬರಿದಾಗಿವೆ. ಹಿಂಗಾರು ಬಿತ್ತನೆಗೂ ಪೂರಕ ವಾತಾವರಣ ಇಲ್ಲ.

‘ಸಕಾಲಕ್ಕೆ ಮಳೆಯಾದರೆ ಮತ್ತೊಬ್ಬರಲ್ಲಿ ಕೈಚಾಚದೆ ದುಡಿದು ಜೀವನ ಮಾಡಬಹುದು. ಆದರೆ, ಬೆಳೆಯೂ ಒಣಗಿದ್ದರಿಂದ ಬದುಕಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಮಾಡಲು ಕೆಲಸವಿಲ್ಲ. ಉಣ್ಣಲು ಅಕ್ಕಿಯಿಲ್ಲ ಅಂದ ಮೇಲೆ ನಾವೇನು ಮಾಡಬೇಕು? ಕೃಷಿಗಾಗಿ ಮಾಡಿಕೊಂಡ ಕೈಗಡ ಸಾಲ ತೀರಿಸುವುದು ಹೇಗೆ’ ಎಂಬುದು ರೈತರ ಅಳಲು.

ಗುಳೆ ತಪ್ಪಿಸಲು ಕ್ರಮ ಅಗತ್ಯ: ಕೂಲಿ ಅರಸಿ ನಗರಗಳಿಗೆ ವಲಸೆ ಹೋಗುವ ಪದ್ಧತಿ ಇನ್ನೂ ನಿಂತಿಲ್ಲ. ಅದನ್ನು ತಪ್ಪಿಸಲು ಜಿಲ್ಲಾಡಳಿತ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಉದ್ಯೋಗ ಸೃಜನೆಗೆ ಒತ್ತು ನೀಡುವ ಅನಿವಾರ್ಯತೆ ಇದೆ. ಕಂದಾಯ ಇಲಾಖೆಯ ಮಾಹಿತಿ ಪ್ರಕಾರ ಬರಪೀಡಿತ ತಾಲ್ಲೂಕುಗಳಲ್ಲಿ ಈವರೆಗೆ ನರೇಗಾ ಯೋಜನೆಗೆ ₹ 1,042 ಕೋಟಿ ವಿನಿಯೋಗಿಸಲಾಗಿದೆ.

‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರದಿಂದ ಶೀಘ್ರ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ಕುಡಿಯುವ ನೀರು ಪೂರೈಕೆಗೆ, ಗೋಶಾಲೆಗಳನ್ನು ತೆರೆಯಲು ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ಹಣದ ಕೊರತೆ ಇಲ್ಲ. ಅಗತ್ಯ ಅನುದಾನಗಳನ್ನು ಬಿಡುಗಡೆ ಮಾಡಲಿದ್ದೇವೆ’ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಶಾಸಕರ ಕಾರ್ಯಪಡೆ ಸಭೆ ನಡೆದಿಲ್ಲ!

ಬರ‍ಪೀಡಿತ ತಾಲ್ಲೂಕುಗಳನ್ನು ಒಳಗೊಂಡ ಬಹುತೇಕ ಜಿಲ್ಲೆಗಳಲ್ಲಿ ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ಸಮಿತಿಯ ಸಭೆಯೇ ನಡೆದಿಲ್ಲ.

ರಾಜೀನಾಮೆ ನೀಡುವ ಮೊದಲು ಗದಗ ಜಿಲ್ಲೆಯ ಉಸ್ತುವಾರಿ ಸಚಿವ ಎನ್‌. ಮಹೇಶ್‌ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬರ ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ‘ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು’ ಎಂದು ಭರವಸೆ ನೀಡಿ ತೆರಳಿದ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಮರಳಿ ಬಂದಿಲ್ಲ’ ಎನ್ನುತ್ತಾರೆ ಹಾವೇರಿ ಜಿಲ್ಲೆಯ ರೈತರು. ಈ ಜಿಲ್ಲೆಯ ಬರಪೀಡಿತ ರಾಣೆಬೆನ್ನೂರು ತಾಲ್ಲೂಕನ್ನು ಪ್ರತಿನಿಧಿಸುವ ಅರಣ್ಯ ಸಚಿವ ಆರ್. ಶಂಕರ್, ಕಾರ್ಯಪಡೆಯ ಸಭೆ ನಡೆಸಿಲ್ಲ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರಿಂದ ಸಭೆ ನಡೆದಿಲ್ಲ. ವಿಜಯಪುರ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲೂ ಆಯಾ ತಾಲ್ಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆದಿಲ್ಲ. ತುಮಕೂರು ಜಿಲ್ಲೆಯ 10 ತಾಲ್ಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಲಾಗಿದ್ದು, ಏಳು ತಾಲ್ಲೂಕುಗಳಲ್ಲಿ ಟಾಸ್ಕ್‌ಪೋರ್ಸ್‌ ಸಭೆ ನಡೆದಿಲ್ಲ. ಜಿಲ್ಲೆಯ ‘ಉಸ್ತುವಾರಿ’ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ಕೂಡಾ ಬರ ಸಂಬಂಧಿಸಿದಂತೆ ಸಭೆ ಮಾಡಿಲ್ಲ.

ವಿರೋಧಪಕ್ಷವೂ ಮೌನ

ಬರದ ವಿಷಯದಲ್ಲಿ ವಿರೋಧ ಪಕ್ಷ ಬಿಜೆಪಿ ಕೂಡಾ ಮೌನ ತಾಳಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ‘ರಾಜ್ಯದ 12 ಜಿಲ್ಲೆಗಳಲ್ಲಿ ಭೀಕರ ಬರಗಾಲ ಇದೆ. ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದರು. ‘ಮೈತ್ರಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದನ್ನು ಖಂಡಿಸಿ ಜನಾಂದೋಲನ ರೂಪಿಸುತ್ತೇವೆ. ಬಿಜೆಪಿ ನಾಯಕರ ಮೂರು ತಂಡಗಳು ರಾಜ್ಯ ಪ್ರವಾಸ ಮಾಡಲಿವೆ’ ಎಂದು ಯಡಿಯೂರಪ್ಪ ಘೋಷಿಸಿದ್ದರು. ಯಡಿಯೂರಪ್ಪ ತಂಡವಷ್ಟೇ ರಾಜ್ಯ ಪ್ರವಾಸ ಮಾಡಿತ್ತು. ಬಳಿಕ ಕಮಲ ಪಾಳಯ ಈ ವಿಷಯವನ್ನು ಮರೆತೇಬಿಟ್ಟಿತು ಎಂಬ ಮಾತುಗಳು ಇವೆ.

ಸಮ್ಮಿಶ್ರ ಸರ್ಕಾರ ಬದುಕಿದೆಯೇ?’

ಕಲಬುರ್ಗಿ: ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬದುಕಿದೆಯೋ ಇಲ್ಲವೋ ಎಂಬುದನ್ನು ತೋರಿಸಬೇಕು ಮತ್ತು ಬರಗಾಲ ಕಾಮಗಾರಿಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

‘100ಕ್ಕೂ ಅಧಿಕ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಇದುವರೆಗೂ ಬರಗಾಲ ಕಾಮಗಾರಿ ಆರಂಭಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ನಡೆಸಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹಿಂದೆ ಯಾವ ಸರ್ಕಾರ
ಗಳಿಗೂ ಈ ರೀತಿ ಛೀಮಾರಿ ಹಾಕಿರಲಿಲ್ಲ’ ಎಂದರು.

‘ಅತಿಯಾದ ವಿಶ್ವಾಸ ಮತ್ತು ಸಂಘಟನೆಯಲ್ಲಿ ಎಚ್ಚರ ತಪ್ಪಿದ್ದಕ್ಕೆ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇವೆ’ ಎಂದರು.

ಮುಖ್ಯಾಂಶಗಳು

* ಹಿಂಗಾರು ಮಳೆಯೂ ಕೈಕೊಡುವ ಆತಂಕ

* ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ

* ಎಚ್ಚೆತ್ತುಕೊಳ್ಳದ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT