ಭಾನುವಾರ, ಸೆಪ್ಟೆಂಬರ್ 20, 2020
22 °C
ಕುಡಿಯುವ ನೀರಿನ ಸಂಕಷ್ಟ ಕೇಳುವವರಿಲ್ಲ; ಸಾರ್ವಜನಿಕರ ತೀವ್ರ ಆಕ್ರೋಶ

ಜನಪ್ರತಿನಿಧಿಗಳ ರಾಜೀನಾಮೆ ಪರ್ವ | ಸುಡುವ ಬರ, ಶಾಸಕರಿಗೆ ಅಧಿಕಾರದ ‘ದಾಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ’ ಎಂಬ ಸ್ಥಿತಿಯಲ್ಲಿದ್ದಾರೆ ರಾಜ್ಯದ ಜನರು. ಮಳೆಯ ತೀವ್ರ ಕೊರತೆ, ತುಂಬದ ಜಲಾಶಯ ಮತ್ತು ಬರದ ಛಾಯೆಯಿಂದ ರಾಜ್ಯದ ಜನತೆ ಹೈರಾಣಾಗಿದ್ದರೆ, ನೀರು ಮತ್ತು ಮೇವು ಇಲ್ಲದೇ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ.

ಮತ ಹಾಕಿದವರ ಗೋಳು ಕೇಳಲು ಜನಪ್ರತಿನಿಧಿಗಳು ಮಾತ್ರ ಸಿದ್ಧರಿಲ್ಲ. ತಮ್ಮ ಕುರ್ಚಿಗಳನ್ನು ಭದ್ರಪಡಿಸಿಕೊಳ್ಳುವ ಆಟದಲ್ಲಿ ನಿರತರಾಗಿದ್ದಾರೆ ಎಂಬ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ.

ರಾಜಕೀಯ ಅಸ್ಥಿರತೆಯಿಂದಾಗಿ ಮುಂಬೈನಲ್ಲಿ 10, ದೇವನಹಳ್ಳಿಯಲ್ಲಿ25 ಕ್ಕೂ ಹೆಚ್ಚು ಶಾಸಕರು ಮತ್ತು ಮೂರು ರಾಜಕೀಯ ಪಕ್ಷಗಳ ಉಳಿದ ಶಾಸಕರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪರಿಹಾರ ಕಾರ್ಯಗಳು ಕುಂಠಿತಗೊಂಡಿವೆ. ಶಾಸಕರಿಗೆ ತಮ್ಮ ಕ್ಷೇತ್ರಗಳತ್ತ ಲಕ್ಷ್ಯವೇ ಇಲ್ಲ ಎಂದು ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲವು ದಿನಗಳಿಂದ ರಾಜ್ಯದಾದ್ಯಂತ ಮಳೆ ಬೀಳುತ್ತಿದ್ದರೂ ಈ 10 ದಿನಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ 10, ಉತ್ತರ ಒಳನಾಡಿನಲ್ಲಿ ಶೇ 14 ರಷ್ಟು ಕೊರತೆ ಆಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕೊಂಚ ಚೇತರಿಕೆ ಆಗಿದೆ. ಇಲ್ಲಿ ಮಳೆಯ ಕೊರತೆ ನೀಗಿ ಕ್ರಮವಾಗಿ ಶೇ 1 ಮತ್ತು ಶೇ 6 ರಷ್ಟು ಹೆಚ್ಚು ಮಳೆಯಾಗಿದೆ.

ಜೂನ್‌ನಲ್ಲಿ ಕೆರೆ– ಕುಂಟೆಗಳು, ಜಲಾಶಯಗಳು ಒಣಗಿ ಹೋಗಿದ್ದವು. ಸುಮಾರು 26 ಜಿಲ್ಲೆಗಳಲ್ಲಿ ಮಳೆಯ ಕೊರತೆ ಆಗಿತ್ತು. ಪರಿಸ್ಥಿತಿ ಈ ತಿಂಗಳೂ ಸುಧಾರಿಸಿಲ್ಲ. ಜೂನ್‌ ಆರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಲ್ಲ ಜಿಲ್ಲಾಧಿಕಾರಿಗಳು, ಕಾರ್ಯದರ್ಶಿಗಳು
ಮತ್ತು ಪ್ರಧಾನ ಕಾರ್ಯರ್ಶಿಗಳ ಮಟ್ಟದ ಸಭೆಯನ್ನು ನಡೆಸಿ, ರಾಜ್ಯದ ಸ್ಥಿತಿಗತಿ ಅವಲೋಕಿಸಲಾಗಿತ್ತು.

ರೈತರ ಸಾವಿಗೆ ರಾಜೀನಾಮೆ ಏಕೆ ನೀಡಲಿಲ್ಲ?

ಆ ಬಳಿಕ ಬರ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ಗಂಭೀರ ಚರ್ಚೆ ನಡೆದಿಲ್ಲ. ಈ ಬಗ್ಗೆ ರೈತರು ಮತ್ತು ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ‘ಸಾಲದ ಸುಳಿಗೆ ಸಿಲುಕಿರುವ ಅನ್ನದಾತ ಸಾವಿಗೆ ಶರಣಾಗುತ್ತಿರುವಾಗ ಒಬ್ಬನೂ ರಾಜೀನಾಮೆ ನೀಡಲಿಲ್ಲ. ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಒಬ್ಬನೇ ಒಬ್ಬ ಶಾಸಕನೂ ರಾಜೀನಾಮೆ ನೀಡಲಿಲ್ಲ’ ಎಂಬ ಕೋಪಭರಿತ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಒಬ್ಬನೇ ಒಬ್ಬ ತನ್ನ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ ಎಂದು ರಾಜೀನಾಮೆ ಕೊಡಲಿಲ್ಲ. ತನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಆಸ್ಪತ್ರೆ ಆಗಲಿಲ್ಲ ಎಂದು ಕೂಡ ರಾಜೀನಾಮೆ ನೀಡಲಿಲ್ಲ. ಚಿಕ್ಕ ಕಂದಮ್ಮಗಳ ಮೇಲೆ ಅತ್ಯಾಚಾರ ಆಗುತ್ತಿದೆ. ಕಾನೂನು ವ್ಯವಸ್ಥೆ ಪ್ರಬಲವಾಗುವವರೆಗೂ ನನಗೆ ಅಧಿಕಾರ ಬೇಡ ಎಂದು ಯಾರೂ ರಾಜೀನಾಮೆನೀಡಿರಲಿಲ್ಲ’ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.

‘ಕಾವೇರಿ ನದಿಗಾಗಿ, ಶರಾವತಿ, ನೇತ್ರಾವತಿ, ಕೃಷ್ಣ ನದಿ, ಮಹಾದಾಯಿ ನೀರು ಉಳಿವಿಗಾಗಿ ಯಾವೊಬ್ಬ ಶಾಸಕನೂ ರಾಜೀನಾಮೆ ನೀಡಲಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ತಮ್ಮನ್ನೇ ಮಾರಿಕೊಳ್ಳುವವರನ್ನು ಆಯ್ಕೆ ಮಾಡುತ್ತಿದ್ದೇವೆ’ ಎಂಬ ಕಿಡಿ ನುಡಿಗಳೂ ವ್ಯಕ್ತವಾಗಿವೆ.

ದಶಕದ ಬಳಿಕ ಅಂತಹದ್ದೇ ಸ್ಥಿತಿ

2009 ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಇಂತಹದ್ದೇ ಸ್ಥಿತಿ ನಿರ್ಮಾಣವಾಗಿತ್ತು. ಆಗ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರು ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದರು. ಶಾಸಕರು ಹೈದರಾಬಾದ್‌–ಗೋವಾದ ರೆಸಾರ್ಟ್‌–ಹೋಟೆಲ್‌ನಲ್ಲಿ ಉಳಿದುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದ್ದರು.

ಉತ್ತರ ಕರ್ನಾಟಕದ ಪ್ರದೇಶ ಮಳೆ ಮತ್ತು ಭಾರಿ ಪ್ರವಾಹಕ್ಕೆ ತುತ್ತಾಗಿತ್ತು. ಆದರೆ, ಯಾವ ಶಾಸಕರೂ ಪ್ರವಾಹದಿಂದ ಸಂತ್ರಸ್ತರ ನೆರವಿಗೆ ಧಾವಿಸಲಿಲ್ಲ; ಬದಲಿಗೆ ರಾಜಕೀಯ ಕಿತ್ತಾಟದಲ್ಲೇ ನಿರತರಾಗಿದ್ದರು. ಆಗಲೂ ಸಾರ್ವಜನಿಕರು ಶಾಸಕರ ನಡೆ ಬಗ್ಗೆ ಕಿಡಿಕಾರಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

ಶಾಸಕರು ಹಾಗೂ ರಾಜಕೀಯ ಪಕ್ಷಗಳ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು 50 ಪದಗಳ ಒಳಗೆ ತಿಳಿಸಿ. ನಿಮ್ಮದೊಂದು ಭಾವಚಿತ್ರ ಹಾಗೂ ವಿಳಾಸ ಜತೆಗಿರಲಿ

ವಾಟ್ಸ್‌ಆ್ಯಪ್‌ ಸಂಖ್ಯೆ: 9513322930

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು