ಬೆಳೆಹಾನಿ: ನೀರಿಲ್ಲದ ಜಮೀನು ಪರಿಗಣನೆ

7
ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ಸೂಚನೆ

ಬೆಳೆಹಾನಿ: ನೀರಿಲ್ಲದ ಜಮೀನು ಪರಿಗಣನೆ

Published:
Updated:

ಬಾಗಲಕೋಟೆ/ವಿಜಯಪುರ: ‘ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಈ ಬಾರಿ ಹಿಂಗಾರು ಹಂಗಾಮಿಗೆ ನೀರು ಸಿಗದಿರುವ ಹಾಗೂ ಕೊಳವೆ ಬಾವಿ ಬತ್ತಿ ಹೋಗಿರುವ ನೀರಾವರಿ ಜಮೀನನ್ನು ಬೆಳೆಹಾನಿ ಸಮೀಕ್ಷೆ ವೇಳೆ ಪರಿಗಣಿಸುವಂತೆ ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಸೂಚನೆ ನೀಡಿದರು.

ಬರ ನಿರ್ವಹಣೆ ಕುರಿತಾದ ಸಂಪುಟ ಉಪ ಸಮಿತಿಯ ಅಧ್ಯಕ್ಷತೆ ವಹಿಸಿ ಬಾಗಲಕೋಟೆಯಲ್ಲಿ ಮಂಗಳವಾರ ಪರಿಶೀಲನಾ ಸಭೆ ನಡೆಸಿದ ಅವರು, ‘ಜಲಾಶಯಗಳಲ್ಲಿ ಸಂಗ್ರಹದ ಕೊರತೆಯಿಂದ ಬೇಸಿಗೆಯಲ್ಲಿ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ, ಅಂತರ್ಜಲದ ಕೊರತೆಯಿಂದ ಕೊಳವೆ ಬಾವಿ ಬತ್ತಿ ಹೋಗಿರುವ ಹೊಲಗಳ ರೈತರಿಗೂ ಬೆಳೆ ನಷ್ಟದ ಪರಿಹಾರ ಸಿಗುವಂತಾಗಲಿ ಎಂಬುದು ಸರ್ಕಾರದ ಉದ್ದೇಶ’ ಎಂದು ಹೇಳಿದರು.

‘ಬೆಳೆಹಾನಿ ಸಮೀಕ್ಷೆಯನ್ನು ಕಾಟಾಚಾರಕ್ಕೆ ಮಾಡುವಂತಿಲ್ಲ. 4ರಿಂದ 5 ದಿನ ತಡವಾದರೂ ಚಿಂತೆ ಇಲ್ಲ. ರೈತರಿಗೆ ನೆರವಾಗುವಂತೆ ಇರಬೇಕು. ಜೊತೆಗೆ ಸಮೀಕ್ಷೆಯ ಬಗ್ಗೆ ಅವರಿಗೆ ಗೊತ್ತಾಗುವಂತೆ ಚೆನ್ನಾಗಿ ಪ್ರಚಾರ ಮಾಡಿ’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರಕ್ಕೆ ₹2,438 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ. ಆದ್ಯತೆಯ ಮೇಲೆ ಹಣ ಬಿಡುಗಡೆ ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದೇನೆ. 15ರಿಂದ 20 ದಿನಗಳಲ್ಲಿ ಬಿಡುಗಡೆಯಾಗಬಹುದು’ ಎಂದು ದೇಶಪಾಂಡೆ ಹೇಳಿದರು.

ರಜೆ ಇಲ್ಲ: ಬರದಿಂದ ತತ್ತರಿಸಿರುವ ರೈತರು ಹಾಗೂ ಗ್ರಾಮೀಣರ ನೆರವಿಗೆ ಅಧಿಕಾರಿ ವರ್ಗ ತಕ್ಷಣವೇ ಧಾವಿಸಬೇಕು. ತುರ್ತು ಸಂದರ್ಭ ಹೊರತುಪಡಿಸಿ, ಇನ್ನುಳಿದಂತೆ ರಜೆ ಪಡೆಯದೇ ಕೆಲಸ ನಿರ್ವಹಿಸಬೇಕು ಸೂಚಿಸಿದರು. 

ಗೌರವದಿಂದ ನಡೆಯಬೇಕು: ‘ಸಚಿವ ಎಚ್‌.ಡಿ.ರೇವಣ್ಣ ನನ್ನ ಆತ್ಮೀಯ. ದೋಸ್ತಿ ಬಗ್ಗೆ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೂ ಸಮ್ಮಿಶ್ರ ಸರ್ಕಾರದಲ್ಲಿ ಪರಸ್ಪರ ಗೌರವ, ಸಹಕಾರದಿಂದ ಮುಂದುವರಿಯಬೇಕಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !