ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ‘ಮುಕ್ತ’ ರಾಜ್ಯ: ತಪ್ಪು ಲೆಕ್ಕ

ಡಿಸಿಎಂ ಪರಮೇಶ್ವರ ಸೂಚನೆ ಮೇರೆಗೆ ವಿಶೇಷ ಕಾರ್ಯಾಚರಣೆ
Last Updated 22 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡ್ರಗ್ಸ್‌ ಮಾರಾಟ, ಖರೀದಿ, ದಾಸ್ತಾನು ಭರಾಟೆ ಜೋರಾಗಿದೆ. ಆದರೆ, ಪೊಲೀಸ್‌ ಇಲಾಖೆಗೆ ಸಲ್ಲಿಕೆಯಾದ ವರದಿ ‘ಡ್ರಗ್ಸ್‌ ಮುಕ್ತ ಪ್ರದೇಶ’ದ ವ್ಯಾಪ್ತಿಯನ್ನೇ ಬಹಳಷ್ಟು ಹಿಗ್ಗಿಸಿಬಿಟ್ಟಿದೆ.

ಗೃಹ ಸಚಿವ ಜಿ.ಪರಮೇಶ್ವರ ಸೂಚನೆ ಮೇರೆಗೆ ಮಾದಕ ವಸ್ತುಗಳ ದಂಧೆ ವಿರುದ್ಧ ರಾಜ್ಯದಾದ್ಯಂತ ಪೊಲೀಸರು ಎರಡು ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿದರು. ಆದರೆ, ವರದಿ ನೀಡುವಾಗ ಗಾಂಜಾ ಬೇಸಾಯ ನಡೆಯುತ್ತಿರುವ ಜಿಲ್ಲೆಗಳನ್ನೂ ‘ಡ್ರಗ್ಸ್ ಮುಕ್ತ ಪ್ರದೇಶ’ಗಳ ಪಟ್ಟಿಗೆ ಸೇರಿಸಿ ಅಂಕಿ–ಅಂಶ ಕೊಟ್ಟಿದ್ದಾರೆ.

ಪಶ್ಚಿಮಘಟ್ಟ ಅರಣ್ಯ ಪ್ರದೇಶ, ಚಾಮರಾಜನಗರ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ–ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ವಹಿವಾಟು ಜೋರಾಗಿದ್ದರೂ, ಈ ಭಾಗಗಳಲ್ಲಿ ಪೊಲೀಸರು ದಾಖಲಿಸಿರುವುದು 3 ರಿಂದ 4 ಪ್ರಕರಣಗಳು ಮಾತ್ರ. ಅಂಕಿ–ಅಂಶ ಗಮನಿಸಿದರೆ ಬೆಂಗಳೂರು, ಮಂಗಳೂರು ಹಾಗೂ ಉಡುಪಿ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಕಾರ್ಯಾಚರಣೆ ಗಂಭೀರವಾಗಿ ನಡೆದಿಲ್ಲ ಎಂಬುದು ಸ್ಪಷ್ಟ ಎನ್ನುತ್ತವೆ ಪೊಲೀಸ್ ಮೂಲಗಳು.

‘ಬೆಂಗಳೂರು ಡ್ರಗ್ ಯಾರ್ಡ್‌ ಆಗಿ ಬದಲಾಗಿದೆ’ ಎಂದು ಬಿಜೆಪಿ ನಾಯಕರು ಇದೇ ಜುಲೈನಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ್ದರು. ಅಲ್ಲದೆ, ‘ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದ ನನ್ನ ಮಗನೇ ಮಾದಕ ವ್ಯಸನಿಯಾಗಿದ್ದ. ಶ್ರೀಮಂತರ ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಈಶಾನ್ಯ ರಾಜ್ಯದವರು ಮಾದಕ ವಸ್ತುಗಳನ್ನು ಮಾರುತ್ತಿದ್ದಾರೆ’ ಎಂದು ಶಾಸಕ ಕಳಕಪ್ಪ ಬಂಡಿ ಅವರು ನಿದರ್ಶನದ ಸಮೇತ ವಿವರಣೆ ಕೊಟ್ಟಿದ್ದರು.

ಆ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪರಮೇಶ್ವರ, ‘ಪ್ರತಿ ಜಿಲ್ಲೆಯಲ್ಲೂ ವಿಶೇಷ ಕಾರ್ಯಾಚರಣೆ ನಡೆಸಿ. ಈ ದಂಧೆಯಲ್ಲಿ ತೊಡಗಿರುವವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ. ಕಾರ್ಯಾಚರಣೆಯ ಬಗ್ಗೆ ಪ್ರತಿ ಎರಡು ತಿಂಗಳಿಗೊಮ್ಮೆ ವರದಿ ಕೊಡಿ’ ಎಂದು ಡಿಜಿಪಿ ನೀಲಮಣಿ ಎನ್‌.ರಾಜು ಅವರಿಗೆ ಸೂಚಿಸಿದ್ದರು.

ಅಂತೆಯೇ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿರುವ ದಾಳಿಗಳ ಜಿಲ್ಲಾವಾರು ವಿವರ ಅ. 3ರಂದು ಡಿಜಿಪಿ ಕಚೇರಿ ಸೇರಿದೆ. ಎರಡು ತಿಂಗಳಲ್ಲಿ 289 ಪ್ರಕರಣ ದಾಖಲಿಸಿರುವುದಾಗಿ ಹೇಳಿರುವ ಪೊಲೀಸರು ಚಿಕ್ಕಮಗಳೂರು, ಧಾರವಾಡ, ಕೆಜಿಎಫ್, ಕಲಬುರ್ಗಿ, ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ‘ಶೂನ್ಯ’ ಫಲಿತಾಂಶ (ಒಂದೂ ಪ್ರಕರಣ ದಾಖಲಾಗಿಲ್ಲ) ತೋರಿಸಿದ್ದಾರೆ. ಬೆಂಗಳೂರಿನಲ್ಲಿ ಮೂರು ಮಂದಿ ವಿರುದ್ಧ ‘ಗೂಂಡಾ’ ಅಸ್ತ್ರ ಪ್ರಯೋಗಿಸಿದ್ದನ್ನು ಬಿಟ್ಟರೆ, ಬೇರೆಲ್ಲೂ ಈ ಪ್ರಯೋಗ ನಡೆದಿಲ್ಲ.

ಡ್ರೋನ್ ಕಾರ್ಯಾಚರಣೆ: ‘ಶಿವಮೊಗ್ಗ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಬಳಸಿ ಗಾಂಜಾ ಬೇಸಾಯದ ಸ್ಥಳಗಳನ್ನು ಪತ್ತೆ ಹಚ್ಚಿದ್ದಾರೆ. ಕೆಲವೆಡೆ ಟೊಮೆಟೊ, ಅಡಿಕೆ, ಶುಂಠಿ ಬೆಳೆಗಳ ಮಧ್ಯೆ ಗಾಂಜಾ ಬೆಳೆದಿರುವುದೂ ಬೆಳಕಿಗೆ ಬಂದಿದೆ. ಆದರೆ, ಪೊಲೀಸರು ಡಿಜಿಪಿ ಕಚೇರಿಗೆ ಕಳುಹಿಸಿರುವ ವರದಿಯಲ್ಲಿ ಈ ದಾಳಿಗಳನ್ನು ಉಲ್ಲೇಖಿಸಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ವರದಿಗೆ ಅಸಮಾಧಾನ ವ್ಯಕ್ತಪಡಿಸಿರುವ ಡಿಜಿಪಿ, ಕಾರ್ಯಾಚರಣೆಯ ಸತ್ಯಾಸತ್ಯತೆ ಪರಿಶೀಲಿಸಲು ಮುಂದಾಗಿದ್ದಾರೆ.

‘ಕೇವಲ ಅಂಕಿ–ಅಂಶಗಳ ಕಳುಹಿಸಿದರೆ ಸಾಲದು. ಎಷ್ಟು ಕಡೆ ದಾಳಿ ನಡೆಸಿದ್ದೀರಿ? ನಿರ್ದಿಷ್ಟವಾಗಿ ಯಾವ್ಯಾವ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದೀರಿ? ಎಷ್ಟು ಮಂದಿಯನ್ನು ಬಂಧಿಸಿದ್ದೀರಿ (ದಿನಾಂಕ ಸಹಿತ) ಎಂಬ ವಿವರಣೆಯನ್ನೂ ಕಳುಹಿಸಿಕೊಡಿ’ ಎಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗಲಿಲ್ಲ.

ಕಾರ್ಯಾಚರಣೆ ವಿವರ

ಬೆಂಗಳೂರು – 104

ಉಡುಪಿ – 55

ಮಂಗಳೂರು – 41

ರೈಲ್ವೆ ಠಾಣೆಗಳಲ್ಲೂ ಶೂನ್ಯ!

‘ಆಂಧ್ರದ ಗುಂಟೂರು, ಕರ್ನೂಲ್, ಅನಂತಪುರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಹಾಗೂ ಒಡಿಶಾ ಗಡಿಭಾಗದಿಂದ ಗಾಂಜಾ ಮೂಟೆಗಳು ರೈಲಿನಲ್ಲಿ ರಾಜ್ಯಕ್ಕೆ ಬರುತ್ತಿವೆ. ಆದರೆ, ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ ರಾಜ್ಯದ ಯಾವುದೇ ರೈಲ್ವೆ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT