ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ರಾಜ್ಯ ಚುನಾವಣೆ ಬಳಿಕ ರಾಷ್ಟ್ರ ರಾಜಕೀಯ ಚಿತ್ರಣ ಬದಲು: ದಿನೇಶ್

Last Updated 19 ನವೆಂಬರ್ 2018, 7:46 IST
ಅಕ್ಷರ ಗಾತ್ರ

ಬೆಂಗಳೂರು: 'ಜನರ ಒಲವು ಇದ್ದ ಕಾರಣಕ್ಕೇ ಇಂದಿರಾ ಗಾಂಧಿ 17 ವರ್ಷ ಪ್ರಧಾನಿ ಆಗಿದ್ದರು. ಕುತಂತ್ರದಿಂದ, ದಬ್ಬಾಳಿಕೆ ನಡೆಸಿ ಅವರು ಪ್ರಧಾನಿ ಪಟ್ಟಕ್ಕೆ ಏರಿರಲಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಇಂದಿರಾ ಗಾಂಧಿ ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಜನರ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ಜನಪರ ಆಡಳಿತ ನೀಡಿದ್ದ ಅವರ ಹೆಸರಲ್ಲಿ ಯಾರೇ ಚುನಾವಣೆಗೆ ನಿಂತಿದ್ದರೂ ಗೆಲ್ಲುತ್ತಿದ್ದರು' ಎಂದರು.

'ಅವರ ಕಾಲದಲ್ಲಿ ರಾಜಕೀಯ ನಡೆಸುವುದುಅಷ್ಟು ಸರಳವಾಗಿರಲಿಲ್ಲ. ಅವರು ಹಲವು ನಿರ್ಧಾರಗಳನ್ನು ಕೈಗೊಂಡಾಗ ಪಕ್ಷದಲ್ಲೇ ವಿರೋಧ ಎದುರಾಗಿತ್ತು. ಅವರ ಅವಧಿಯಲ್ಲಿ ಆದ ಕೆಲಸ, ಎದುರಾದ ಸಂಕಷ್ಟವನ್ನು ನೆನೆಯಬೇಕಿದೆ ಎಂದರು.

'ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಜನ ಇಂದು ಬಿಜೆಪಿಯಿಂದ ದೂರ ಹೋಗಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ರಾಷ್ಟ್ರ ರಾಜಕೀಯ ಚಿತ್ರಣ ಬದಲಾಗಲಿದೆ' ಎಂದು ಭವಿಷ್ಯ ನುಡಿದರು.

ಹಸಿರು ಕ್ರಾಂತಿ ಹರಿಕಾರರು

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮಾತನಾಡಿ, ಕೆಲವೇ ಕೆಲವು‌ ನಾಯಕರು ಮಾತ್ರ ರಾಜಕೀಯದಲ್ಲಿ ನೆನಪಾಗುತ್ತಾರೆ. ಅಂಥವರಲ್ಲಿ ಇಂದಿರಾ ಗಾಂಧಿ ಕೂಡಾ ಒಬ್ಬರು. ಎಲ್ಲರೂ ತಮ್ಮ ಛಾಪು ಮೂಡಿಸಿ ಹೋಗುವುದಿಲ್ಲ. ಹಸಿರು ಕ್ರಾಂತಿ ಮಾಡುವ ಮೂಲಕ ದೇಶದ ಆಹಾರ ಸಮಸ್ಯೆಗೆ ಶಾಶ್ವತ ಪರಿಹಾರ ತಂದುಕೊಟ್ಟರು. ಇಂದು ನಾವು ಆಹಾರಧಾನ್ಯ ರಫ್ರು ಮಾಡುವ ಶಕ್ತಿ ಬಂದಿದ್ದರೆ ಅದಕ್ಕೆ ಇಂದಿರಾಗಾಂಧಿ ಕಾರಣ' ಎಂದರು.

'ಕಾಂಗ್ರೆಸ್ ಮಾಡಿದ್ದ ಕಾರ್ಯವನ್ನು ಮರೆಸುವ ಕಾರ್ಯವನ್ನು ಇಂದಿನ ಬಿಜೆಪಿ ಕೇಂದ್ರ ಸರ್ಕಾರ ಮಾಡುತ್ತಿದೆ. ಇಂದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಹಿಂದಿನ ಸರ್ಕಾರ ಮಾಡಿದ ಜನಪ್ರಿಯ ಕೆಲಸ ಮುಂದುವರಿಸುವ ಆಶಯ ಹೊಂದಿ ಸರ್ಕಾರ ಮಾಡಿದ್ದೇವೆ' ಎಂದರು.

'ನಾವು ರೈತ ವಿರೋಧಿ ಎನ್ನುವ ಕಾರ್ಯ ಮಾಡುತ್ತಿದೆ. ರೈತರಿಗೆ ಅನುಕೂಲವಾಗುವ ಯಾವ ಕೆಲಸವನ್ನೂ ಕೇಂದ್ರ ಸರ್ಕಾರ ಮಾಡಿಲ್ಲ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಅರಿಯಬೇಕು. 2019 ರ ಚುನಾವಣೆ ಗೆಲ್ಲಲು ನಿರ್ಣಾಯಕ ಹೋರಾಟ ಮಾಡಬೇಕಾಗುತ್ತದೆ ಎಂದರು.

ದೇಶಕಂಡ ಉತ್ತಮ ಪ್ರಧಾನಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, 'ಇಂದಿರಾ ಗಾಂಧಿ ಜಗತ್ತು ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ. ಬಾಲ್ಯದಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದರು. ಅಪ್ಪಟ ರಾಷ್ಟ್ರೀಯತೆ, ದೇಶಪ್ರೇಮ ಬೆಳೆಸಿಕೊಂಡಿದ್ದರು. ಜಗತ್ತಿನಲ್ಲೇ ಪ್ರಭಾವಿ ಮಹಿಳೆ ಅನ್ನಿಸಿಕೊಂಡಿದ್ದರು. ಬಡವರ ಬಂಧು ಅನ್ನಿಸಿಕೊಂಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿದರು' ಎಂದು ಬಣ್ಣಿಸಿದರು.

'ಇಂದಿರಾ ಗಾಂಧಿ ಜನಸಾಮಾನ್ಯರಿಗೆ ಸಮಾನತೆ ತಂದುಕೊಟ್ಟರು. ದೇಶದ ಕೀರ್ತಿ ಹೆಚ್ಚಿಸಿದರು. ಅವರ ಅವಧಿಯಲ್ಲಿ ವಿಶ್ವದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆಯಿತು. ದೇಶಕ್ಕಾಗಿ ಅವರ ಬಲಿದಾನ ನೆನೆಯಬೇಕಿದೆ. ಪ್ರಜಾಪ್ರಭುತ್ವ, ಸಂವಿಧಾನ ಅತಂತ್ರ ಸ್ಥಿಯಲ್ಲಿದೆ. ಸರ್ವಾಧಿಕಾರಿ ಸರ್ಕಾರ ಕಿತ್ತು ಹಾಕಿ ಜಾತ್ಯತೀತ ಸರ್ಕಾರ ಮರಳಲು ಜನರು ಅವಕಾಶ ಮಾಡಿಕೊಡಬೇಕು' ಎಂದು ಖಂಡ್ರೆ ಮನವಿ ಮಾಡಿದರು.

ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವೆ ಮೋಟಮ್ಮ, ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT