ನಕಲು ಬ್ರ್ಯಾಂಡ್ ಉಡುಪು: ₹ 52 ಲಕ್ಷ ಮೌಲ್ಯದ ಅಂಗಿ ವಶ

ಹೊನ್ನಾವರ: ಪ್ರಸಿದ್ಧ ಕಂಪನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಉಡುಪು ತಯಾರಿಸುತ್ತಿದ್ದ ಆರೋಪದ ಮೇಲೆ ತಾಲ್ಲೂಕಿನ ಹಳದೀಪುರ ಗ್ರಾಮದ ಕುದಬೈಲ್ ಎಂಬಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಮೇಲೆ ಪೊಲೀಸರು ಗುರುವಾರ ರಾತ್ರಿ ದಾಳಿ ಮಾಡಿದ್ದಾರೆ. ವಿವಿಧ ಬ್ರ್ಯಾಂಡ್‌ಗಳ ₹ 52 ಲಕ್ಷ ಮೌಲ್ಯದ ಅಂಗಿಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ಜೀವನ್ ಗಾರ್ಮೆಂಟ್ಸ್‌ನಲ್ಲಿ ಹೊಲಿಯಲಾದ ಬಟ್ಟೆಗಳಿಗೆ ಪ್ರಸಿದ್ಧ ಕಂಪನಿಗಳ ಲೋಗೋ ಹಚ್ಚಲಾಗುತ್ತಿತ್ತು. ಈ ಬಗ್ಗೆ ಬೆಂಗಳೂರಿನ ಆದಿತ್ಯ ಬಿರ್ಲಾ ಫ್ಯಾಷನ್ಸ್ ಮತ್ತು ರಿಟೇಲ್ ಸಂಸ್ಥೆಯವರು ಹೊನ್ನಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ದಾಳಿ ಮಾಡಿದ ಪೊಲೀಸರು, ಗಾರ್ಮೆಂಟ್ಸ್‌ಗೆ ಬೀಗ ಮುದ್ರೆ ಹಾಕಿದರು.
‘ಈ ಘಟಕದಲ್ಲಿ ಒಂದೆರಡು ವರ್ಷಗಳಿಂದಲೇ ಅಲೆನ್ ಸೋಲಿ, ಲೂಯಿ ಫಿಲಿಫ್, ವ್ಯಾನ್ ಹುಸೆನ್ ಮೊದಲಾದ ಹೆಸರಿನ ನಕಲು ಉಡುಪು ತಯಾರಿಸಲಾಗುತ್ತಿದೆ. ಈ ಮೂಲಕ ನಮ್ಮ ಕಂಪನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಲಾಗಿದೆ ಎಂದು ಆದಿತ್ಯ ಬಿರ್ಲಾ ರಿಟೇಲ್ಸ್ ಕಂಪನಿಯವರು ದೂರು ನೀಡಿದ್ದರು. ಜೀವನ್ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಮೋಸ ಹಾಗೂ ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಅವರ ನಿರ್ದೇಶನದ ಮೇರೆಗೆ ಸಿಪಿಐ ಚೆಲುವರಾಜು ಹಾಗೂ ಪಿಎಸ್ಐ ಸಂತೋಷ ಕಾಯ್ಕಿಣಿ ಅವರಿದ್ದ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.