ಬುಧವಾರ, ಫೆಬ್ರವರಿ 26, 2020
19 °C

36 ಶವಪರೀಕ್ಷೆ ನಡೆಸಿದ್ದ ನಕಲಿ ವೈದ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗದಗ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದ ನಕಲಿ ವೈದ್ಯ ವಿಕಾಸ್‌ ತನ್ನ ಸೇವಾವಧಿಯಲ್ಲಿ ಅಸಹಜವಾಗಿ ಮೃತಪಟ್ಟ 36 ಜನರ ಮರಣೋತ್ತರ ಪರೀಕ್ಷೆ ನಡೆಸಿದ್ದ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ ಹಾಗೂ ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಾತ್ಕಾಲಿಕ ವೈದ್ಯನಾಗಿ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸಿದ್ದಾನೆ. ಶವ ಪರೀಕ್ಷೆ ಹೇಗೆ ನಡೆಸುತ್ತಿದ್ದ ಎಂಬ ಕುರಿತು ಪೊಲೀಸರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದ ವಿಕಾಸ್‌, ಬೆಳಗಾವಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿದ್ದಾನೆ. ನರ್ಸಿಂಗ್ ಪದವಿ ಪ್ರಮಾಣ ಪತ್ರ ಕೈಸೇರಿದ ಬಳಿಕ ಅಸಲಿ ವೈದ್ಯ ಡಾ.ವಿಕಾಸ್‌ ಪಾಟೀಲ್‌ ಅವರ ಪ್ರಮಾಣಪತ್ರಗಳ ನಕಲಿ ಸೃಷ್ಟಿಸಿದ್ದಾನೆ. ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಅಸಲಿ ವೈದ್ಯರಿಗೆ ನೀಡಿದ ಪ್ರಮಾಣಪತ್ರಕ್ಕೆ ತನ್ನ ಭಾವಚಿತ್ರ ಅಂಟಿಸಿಕೊಂಡಿದ್ದಾನೆ. ದಾಖಲೆಗಳ ನಕಲು ಮಾಡುವುದನ್ನು ಅಂತರ್ಜಾಲದ ಮೂಲಕ ತಿಳಿದುಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರಿಗೆ ಗೊತ್ತಿರುವ ಎಲ್ಲ ಜ್ಞಾನ ನನಗೂ ಇದೆ. ಅವರು ನೀಡುವ ಚಿಕಿತ್ಸೆಯನ್ನು ನಾನೂ ನೀಡುತ್ತೇನೆ. ಬಿಎಸ್ಸಿ ನರ್ಸಿಂಗ್‌ ಪದವೀಧರ ಎಂದು ಹೇಳಿಕೊಳ್ಳಲು ಕೀಳರಿಮೆ ಇತ್ತು. ಹೀಗಾಗಿ, ವೈದ್ಯನೆಂದು ಹೇಳಿಕೊಂಡೆ’ ಎಂದು ಆರೋಪಿಯು ಹೇಳಿಕೆ ನೀಡಿದ್ದಾನೆ.

ಆರೋಪಿಯನ್ನು ಪೊಲೀಸರು ಸೋಮವಾರ ರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗೌರಿ–ಗಣೇಶ ಹಬ್ಬದ ಬಳಿಕ ಪುನಃ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಹೈಡೋಸ್ ಔಷಧ ನೀಡುತ್ತಿದ್ದ

‘ವಿಕಾಸ್‌ ನೀಡಿದ ಚಿಕಿತ್ಸೆಯಲ್ಲಿ ಈವರೆಗೆ ಲೋಪ ಕಂಡುಬಂದಿಲ್ಲ. ಆದರೆ, ಹೈಡೋಸ್‌ ಔಷಧಗಳನ್ನು ರೋಗಿಗಳಿಗೆ ನೀಡುತ್ತಿದ್ದರು’ ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈತನ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದರು.

‘ರೋಗಿಯೊಬ್ಬರಿಗೆ ಸಾಮಾನ್ಯವಾಗಿ ಗರಿಷ್ಠ ಮೂರು ದಿನಗಳಿಗೆ ಅಗತ್ಯವಿರುವಷ್ಟು ಔಷಧ ನೀಡಬೇಕು. ಆದರೆ, ವಿಕಾಸ್‌ ಐದು ದಿನಗಳಿಗೆ ಆಗುವಷ್ಟು ಮಾತ್ರೆಗಳನ್ನು ನೀಡುತ್ತಿದ್ದರು. ಅಲ್ಲದೇ, ಅವೆಲ್ಲವೂ ಹೈಡೋಸ್‌ ಔಷಧಗಳಾಗಿದ್ದವು. ಈ ಕುರಿತು ಶುಶ್ರೂಷಕಿಯರು ಹಾಗೂ ಔಷಧ ವಿತರಕರು ತಾಲ್ಲೂಕು ವೈದ್ಯಾಧಿಕಾರಿಯ ಗಮನ ಸೆಳೆದಿದ್ದರು’ ಎಂದು ವಿವರಿಸಿದರು.

ಆರೋಗ್ಯ ಕೇಂದ್ರದಲ್ಲಿ ವಿಕಾಸ್‌ ಸೇರಿ ಮೂವರು ವೈದ್ಯರಿದ್ದರು. ನಿವೃತ್ತಿಯ ಬಳಿಕ ತಾತ್ಕಾಲಿಕ ವೈದ್ಯರಾಗಿ ನೇಮಕಗೊಂಡ 67 ವರ್ಷದ ಡಾ.ಶಂಕರಪ್ಪ ಹಾಗೂ ಸ್ತ್ರೀರೋಗ ತಜ್ಞೆ ಡಾ.ಉಮಾ ನಂಜುಂಡಪ್ಪ ಹಗಲು ವೇಳೆ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ, 27 ವರ್ಷದ ವಿಕಾಸ್‌ ರಾತ್ರಿ ವೇಳೆ ಮಾತ್ರ ಕೆಲಸ ಮಾಡುತ್ತಿದ್ದ. ಇದರಿಂದ ಬಹುತೇಕರಿಗೆ ಈತನ ಚಲನವಲನಗಳು ಗೊತ್ತಾಗಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು