ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರು ಗೆದ್ದರೆ ಸಚಿವರಾಗುತ್ತಾರೆ ಎಂಬುದು ನೀತಿ ಸಂಹಿತೆ ಉಲ್ಲಂಘನೆಯಲ್ಲ: ಡಿಸಿಎಂ

Last Updated 16 ನವೆಂಬರ್ 2019, 13:26 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಿಜೆಪಿಗೆ ಸೇರಿದ 17 ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಗೆದ್ದ ನಂತರ ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಹೇಳಿರುವುದು ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಹೇಳುವುದು ಪಕ್ಷದ ನಿರ್ಣಯ. ಪಕ್ಷದ ಪ್ರಣಾಳಿಕೆಯಲ್ಲೂ ಸಾಕಷ್ಟು ಭರವಸೆಗಳನ್ನು ಕೊಡುತ್ತೇವೆ. ಹಾಗಾಗಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದುವೇಳೆ ಪಕ್ಷ ಸೇರ್ಪಡೆಯಾದವರಿಗೆ ಅಧಿಕಾರ ಕೊಟ್ಟರೆ ಆ ಪ್ರಶ್ನೆ ಮೂಡುತ್ತಿತ್ತು’ ಎಂದರು.

‘ಒಂದು ರಾಜಕೀಯ ಪಕ್ಷವೆಂದ ಮೇಲೆ ಸಾವಿರಾರು ಕಾರ್ಯಕರ್ತರು ಇರುತ್ತಾರೆ. ನೂರಾರು ಜನ ಟಿಕೆಟ್‌ ಆಕಾಂಕ್ಷಿಗಳು ಇರುತ್ತಾರೆ. ಸ್ವಾಭಾವಿಕವಾಗಿ ಅವರಿಗೂ ಬೆಳೆಯಬೇಕು ಎಂಬ ಭಾವನೆ ಇರುತ್ತದೆ. ಹಾಗಾಗಿ ಅವರ ಮನದಿಂಗಿತ ವ್ಯಕ್ತಪಡಿಸುತ್ತಾರೆ. ಅದನ್ನೇ ಅಸಮಾಧಾನ ಎಂದು ಕರೆದರೆ ಹೇಗೆ? ಯಾರು ಕೂಡ ಸನ್ಯಾಸಿಗಳಲ್ಲ’ ಎಂದು ಹೇಳುವ ಮೂಲಕ ಆನಂದ್‌ ಸಿಂಗ್‌ ಅವರಿಗೆ ವಿಜಯನಗರ ಕ್ಷೇತ್ರದ ಟಿಕೆಟ್‌ ಕೊಟ್ಟಿರುವುದಕ್ಕೆ ಪಕ್ಷದಲ್ಲಿ ಅಸಮಾಧಾನವಿದೆ ಎಂಬುದನ್ನು ಒಪ್ಪಿಕೊಂಡರು.

‘17 ಜನ ಅನರ್ಹ ಶಾಸಕರು ನಮಗಾಗಿ ತ್ಯಾಗ ಮಾಡಿ ಬಂದಿದ್ದಾರೆ. ಪಕ್ಷದಲ್ಲಿರುವವರು ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಅವರ ಗೆಲುವಿಗೆ ಶ್ರಮಿಸಬೇಕು. ಇದು ನಮ್ಮ ಪಾಲಿಗೆ ಅತ್ಯಂತ ಮಹತ್ವದ ಚುನಾವಣೆ’ ಎಂದು ಹೇಳಿದರು.

‘ಆನಂದ್‌ ಸಿಂಗ್‌ ಪಕ್ಷಕ್ಕೆ ಬಂದ ನಂತರ ಮೂಲ ಬಿಜೆಪಿಗರು ಮೂಲೆಗುಂಪಾಗುತ್ತಾರೆ ಎನ್ನುವುದು ಸರಿಯಲ್ಲ. ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಎಲ್ಲರಿಗೂ ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ಇರುತ್ತದೆ. ನ. 18ರಂದು ಆನಂದ್‌ ಸಿಂಗ್‌ ನಾಮಪತ್ರ ಸಲ್ಲಿಸಲಿದ್ದು, ಪಕ್ಷದ ಎಲ್ಲಾ ಮುಖಂಡರು ಅವರೊಂದಿಗೆ ಇರುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT