ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿವೈಎಸ್‌ಪಿ, ಪಿಐಗಳಿಗೆ ಇನ್ನು 2 ವರ್ಷ ಕಾರ್ಯಕಾರಿ ಹುದ್ದೆ ಕಡ್ಡಾಯ

Last Updated 16 ಮೇ 2020, 10:57 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಇಲಾಖೆಯ ಸಿವಿಲ್ (ನಾಗರಿಕ) ಸೇವೆಯಲ್ಲಿ ಮುಂಬಡ್ತಿ ಹೊಂದಿದ ಅಧಿಕಾರಿಗಳು ಇನ್ನು ಮುಂದೆ ಎರಡು ವರ್ಷ ಕಾರ್ಯಕಾರಿ (ಸಿಐಡಿ, ಡಿಸಿಆರ್‌ಇ, ಲೋಕಾಯುಕ್ತ, ಎಸಿಬಿ, ರಾಜ್ಯ ಗುಪ್ತವಾರ್ತೆ) ಹುದ್ದೆಯಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಡಿವೈಎಸ್‌ಪಿ/ಎಸಿಪಿ ಮತ್ತು ಪೊಲೀಸ್‌ ಇನ್‌ಸ್ಪೆಕ್ಟರ್‌ (ಪಿಐ) ವರ್ಗಾವಣೆಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಈ ತಿದ್ದುಪಡಿ ಮಾಡಲಾಗಿದೆ. ಡಿವೈಎಸ್‌ಪಿ/ಎಸಿಪಿ ಮತ್ತು ಪಿಐ ಹುದ್ದೆಗೆ ಬಡ್ತಿ ಹೊಂದಿದ ನಂತರ ಕಾರ್ಯಕಾರಿ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು.

ಡಿವೈಎಸ್‌ಪಿ/ಎಸಿಪಿ ಮತ್ತು ಪಿಐ ಹುದ್ದೆಯಲ್ಲಿರುವವರು ಪೊಲೀಸ್‌ ಕಮಿಷನರೇಟ್‌ನಲ್ಲಿ ಕನಿಷ್ಠ 5 ವರ್ಷ ಮಾತ್ರ ಕಾರ್ಯಕಾರಿ ಹುದ್ದೆಯಲ್ಲಿ (ಕಾನೂನು ಸುವ್ಯವಸ್ಥೆ, ಸಂಚಾರ, ಸಿಸಿಬಿ) ಕೆಲಸ ಮಾಡಲು ಅವಕಾಶವಿದೆ. 5 ವರ್ಷ ಪೂರ್ಣಗೊಳಿಸಿದವರು ಆಯಾ ಕಮಿಷನರೇಟ್ ವ್ಯಾಪ್ತಿಯಿಂದ ಹೊರಗಿನ ಘಟಕದಲ್ಲಿ 5 ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು. ಬಳಿಕವಷ್ಟೆ ಆಯಾ ಕಮಿಷನರೇಟ್‌ನಲ್ಲಿ ಕೆಲಸ ಮಾಡಲು ಅರ್ಹತೆ ಗಳಿಸಲಿದ್ದಾರೆ ಎಂದೂ ಆದೇಶದಲ್ಲಿದೆ.

ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್‌ಪಿ/ಎಸಿಪಿ ಮತ್ತು ಪಿಐಗಳಿಗೆ ಅವರ ಅವಧಿ ಮುಗಿದ ಬಳಿಕ ಈ ನಿಬಂಧನೆ ಅನ್ವಯ ಆಗಲಿದೆ.

ಬಡ್ತಿ ಹೊಂದಿದ ಅಧಿಕಾರಿಗಳು ಎರಡು ವರ್ಷದ ಒಳಗೆ ನಾಲ್ಕು ವಾರಗಳ ಪುನರ್‌ಮನನ ತರಬೇತಿ ಪಡೆಯಬೇಕು. ಈ ತರಬೇತಿ ಪೂರ್ಣಗೊಳಿಸದವರನ್ನು ಕಾರ್ಯಕಾರಿ ಹುದ್ದೆಗೆ ಪರಿಗಣಿಸಬಾರದು. ಯಾವುದಾದರು ಪ್ರಮುಖ ಇಲಾಖಾ ವಿಚಾರಣೆ, ಲೋಕಾಯುಕ್ತ, ಎಸಿಬಿ ಪ್ರಕರಣ, ವಿಚಾರಣೆಯಲ್ಲಿರುವ ಅಪರಾಧ ಪ್ರಕರಣ ಎದುರಿಸುವವರು ಅಥವಾ ಪೊಲೀಸ್‌ ಸಿಬ್ಬಂದಿ ಮಂಡಳಿ ಅನರ್ಹ ಎಂದು ಪರಿಗಣಿಸಿದ ಡಿವೈಎಸ್‌ಪಿ/ಎಸಿಪಿ ಮತ್ತು ಪಿಐಯನ್ನು ಕಾರ್ಯಕಾರಿ ಹುದ್ದೆಗೆ ನೇಮಿಸಬಾರದು ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಬಡ್ತಿ ಹೊಂದಿದ ಅಧಿಕಾರಿಗಳಿಗೆ ಕಾರ್ಯಕಾರಿ ಹುದ್ದೆಯಲ್ಲಿ ಕೆಲಸ ಮಾಡಿ ಅನುಭವ ಹೆಚ್ಚಿಸಲು, ತಾಂತ್ರಿಕವಾಗಿ ಕಾರ್ಯಕ್ಷಮತೆ ಪಡೆಯಲು ಹಾಗೂ ಎಲ್ಲರಿಗೂ ಈ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವರ್ಗಾವಣೆ ಮಾರ್ಗಸೂಚಿಯಲ್ಲಿ ತಿದ್ದುಪಡಿ ಮಾಡುವಂತೆ ಪೊಲೀಸ್‌ ಮಹಾ ನಿರ್ದೇಶಕರು ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT