ಕಾಡುಪ್ರಾಣಿ ದಾಳಿಗೆ ‘ಇ–ಕಾಂಪೆನ್ಸೇಷನ್’

7
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ತಂತ್ರಾಂಶ ಅಭಿವೃದ್ಧಿ: ಶೀಘ್ರವೇ ಪ್ರಾಯೋಗಿಕ ಜಾರಿ

ಕಾಡುಪ್ರಾಣಿ ದಾಳಿಗೆ ‘ಇ–ಕಾಂಪೆನ್ಸೇಷನ್’

Published:
Updated:
Deccan Herald

ಕಾರವಾರ: ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರು, ಪರಿಹಾರಕ್ಕಾಗಿ ಇನ್ನುಮುಂದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇದಕ್ಕಾಗಿ ಅರಣ್ಯ ಇಲಾಖೆಯು ‘ಇ– ಕಾಂಪೆನ್ಸೇಷನ್’ (ಇ–ಪರಿಹಾರ) ಎಂಬ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಕೆಲವೇ ದಿನಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

ಕಾಡಂಚಿನ ರೈತರು, ಇಷ್ಟು ದಿನ ಪರಿಹಾರಕ್ಕಾಗಿ ಅರ್ಜಿಗಳನ್ನು ಭರ್ತಿ ಮಾಡಿ ಅರಣ್ಯ ಇಲಾಖೆಯ ಕಚೇರಿಗಳಿಗೆ ಅಲೆದಾಡಬೇಕಿತ್ತು. ಅಲ್ಲದೇ ಅರ್ಜಿಯ ಪ್ರಸ್ತುತ ಸ್ಥಿತಿಗತಿ ಏನಿದೆ ಎಂಬುದೂ ತಿಳಿಯುತ್ತಿರಲಿಲ್ಲ. ಅತ್ತ, ಅರಣ್ಯ ಇಲಾಖೆಗೂ ಯಾವ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ, ಹಾನಿಗೀಡಾದ ಬೆಳೆ ಯಾವುದು, ಎಷ್ಟು ಹಾನಿಯಾಗಿದೆ ಎಂಬ ಮಾಹಿತಿ ಸಿಗುತ್ತಿರಲಿಲ್ಲ.

ಪ್ರಕ್ರಿಯೆ ಹೇಗಿದೆ?: ‘ಪ್ರಜಾವಾಣಿ’ ಜತೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಗಣಪತಿ, ‘ಬೆಳೆಹಾನಿಯಾದ ರೈತರು ‘ಇ– ಕಾಂಪೆನ್ಸೇಷನ್’ ತಂತ್ರಾಂಶದಲ್ಲಿ ಸಿಗುವ ಅರ್ಜಿಯನ್ನು ಭರ್ತಿ ಮಾಡಬೇಕು. ಅದರ ಜತೆಗೆ ಕೃಷಿ ಜಮೀನಿನ ಸರ್ವೆ ನಂಬರನ್ನೂ ನಮೂದಿಸಬೇಕು. ಬಳಿಕ ಹಾನಿಗೀಡಾದ ಬೆಳೆಯ ಫೋಟೊವೊಂದನ್ನು ಅಪ್‌ಲೋಡ್ ಮಾಡಿದರೆ ಸಾಕು’ ಎಂದು ವಿವರಿಸಿದರು.

‘ರೈತರ ಜಮೀನಿಗೆ ಆಯಾ ವಲಯಗಳ ಅರಣ್ಯ ಸಂರಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನಾಶವಾದ ಬೆಳೆಯ ಪ್ರಮಾಣವನ್ನು ದೃಢೀಕರಿಸುತ್ತಾರೆ. ನಂತರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ರೈತರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಅರ್ಜಿ ವಿಲೇವಾರಿ ಆಗುತ್ತಿರುವ ಬಗ್ಗೆ ಅರ್ಜಿದಾರರ ಮೊಬೈಲ್‌ಗೆ ಎಸ್‌ಎಂಎಸ್ ಮುಖಾಂತರ ಮಾಹಿತಿ ನೀಡಲಾಗುತ್ತದೆ. ಇದರಿಂದ ತಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ತಂತ್ರಾಂಶದ ಬಳಕೆಯ ಬಗ್ಗೆ ಇಲಾಖೆಯ ಸಿಬ್ಬಂದಿ ಜತೆ ಒಂದು ಸುತ್ತಿನ ಸಂವಾದ ಕಾರ್ಯಕ್ರಮ ಈಗಾಗಲೇ ನಡೆದಿದೆ’ ಎಂದು ತಿಳಿಸಿದರು.

ಲಿಖಿತ ಅರ್ಜಿಯನ್ನೂ ಕೊಡಬಹುದು: ‘ಕಂಪ್ಯೂಟರ್ ಬಳಕೆಯ ಎಳ್ಳಷ್ಟೂ ತಿಳಿವಳಿಕೆ ಇಲ್ಲದವರು ಅರಣ್ಯ ಇಲಾಖೆಗೆ ಲಿಖಿತ ಅರ್ಜಿ ಹಾಗೂ ಫೋಟೊ ಕೊಡಬಹುದು. ಅದನ್ನು ಸ್ಕ್ಯಾನ್ ಮಾಡಿ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬಹುದು. ರೈತರ ಪಹಣಿ ಪತ್ರವು ‘ಭೂಮಿ‘ ತಂತ್ರಾಂಶದಲ್ಲಿ ಸಿಗುವ ಕಾರಣ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ. ಇದು ತಂತ್ರಾಂಶದಿಂದಾಗುವ ಪ್ರಯೋಜನವಾಗಲಿದೆ’ ಎನ್ನುವುದು ಅವರ ವಿಶ್ವಾಸ.

ತಜ್ಞರಿಂದ ಅಧ್ಯಯನಕ್ಕೆ ಸಹಕಾರಿ

ಕಾಡು ಪ್ರಾಣಿಗಳ ದಾಳಿಯ ಸಂಪೂರ್ಣ ವಿವರ ಹೊಸ ತಂತ್ರಾಂಶದಲ್ಲಿ ಸಿಗುತ್ತದೆ. ಹೀಗಾಗಿ ಪ್ರತಿವರ್ಷ ಹೆಚ್ಚು ಹಾನಿಯಾಗುವ ಪ್ರದೇಶ, ಬೆಳೆ ವಿವರಗಳನ್ನು ಅಧ್ಯಯನ ಮಾಡಬಹುದು. ಇದರಿಂದ ಕಾಡುಪ್ರಾಣಿಗಳು ಮತ್ತು ಮಾನವನ ನಡುವಿನ ಸಂಘರ್ಷಗಳನ್ನು ಕಡಿಮೆ ಮಾಡಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಜ್ಞರು ಚಿಂತಿಸಲು ಸಹಕಾರಿಯಾಗಲಿದೆ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ.

ಇದಕ್ಕೆ ಅವರು ಕಾಡಾನೆಗಳ ದಾಳಿಯ ಉದಾಹರಣೆ ನೀಡುತ್ತಾರೆ. ‘ಕಾಡಾನೆಗಳ ಹಿಂಡು ನಿರಂತರವಾಗಿ ಕಬ್ಬಿನ ತೋಟದ ಮೇಲೆ ದಾಳಿ ಮಾಡುತ್ತಿದ್ದರೆ ಆ ಭಾಗದ ರೈತರಿಗೆ ಪರ್ಯಾಯ ಬೆಳೆ ಬೆಳೆಯುವ ಸಲಹೆ ನೀಡಬಹುದು. ಪ್ರಾಣಿಗಳ ಹಾವಳಿ ತಡೆಯಲು ಕಂದಕ ನಿರ್ಮಾಣ, ಎತ್ತರ ಹೆಚ್ಚಿಸಿದ ಬೇಲಿ ಅಳವಡಿಕೆ ಮುಂತಾದ ಕ್ರಮಗಳ ಬಗ್ಗೆಯೂ ಯೋಜನೆ ರೂಪಿಸಲು ಸಾಧ್ಯವಿದೆ’ ಎನ್ನುವುದು ಅವರ ಅಭಿಪ್ರಾಯ.

ಬೆಳೆ ಪ್ರಮಾಣ ನಿರ್ಧಾರ ಹೇಗೆ?

ತೋಟಗಾರಿಕಾ ಉತ್ಪನ್ನಗಳ ರೀತಿಯಲ್ಲಿ ಕೃಷಿ ಉತ್ಪನ್ನಗಳ (ಭತ್ತ, ರಾಗಿ, ಜೋಳ) ಹಾನಿಯನ್ನು ನಿಖರವಾಗಿ ಇಂತಿಷ್ಟು ಕ್ವಿಂಟಲ್ ಎಂದು ನಿರ್ಧರಿಸುವುದು ಕಷ್ಟ ಎನ್ನುತ್ತಾರೆ ಸಿಬ್ಬಂದಿಯೊಬ್ಬರು. ಈ ತಂತ್ರಾಂಶ ಇನ್ನೂ ಪ್ರಾಯೋಗಿಕ ಹಂತದಲ್ಲಿರುವುದರಿಂದ, ಮುಂದೆ ಅಗತ್ಯಗಳಿಗೆ ಅನುಗುಣವಾಗಿ ಪರಿಷ್ಕರಿಸಲು ಅವಕಾಶವಿದೆ ಎಂದೂ ಅವರು ಆಶಾಭಾವ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !