ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಫಾರ್ಮಸಿಗೆ ಕಾನೂನು ಮುದ್ರೆ

ಅಧಿಸೂಚನೆ ಹೊರಡಿಸಿದ ಕೇಂದ್ರ ಆರೋಗ್ಯ ಇಲಾಖೆ l ನಿಯಮಾವಳಿ ಬಿಡುಗಡೆ
Last Updated 2 ಸೆಪ್ಟೆಂಬರ್ 2018, 19:37 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ನಲ್ಲಿ ಔಷಧ ಮಾರಾಟ ವ್ಯವಸ್ಥೆಯ ಜನಪ್ರಿಯತೆಯನ್ನು ಮನಗಂಡ ಕೇಂದ್ರ ಸರ್ಕಾರ ‘ಇ–ಫಾರ್ಮಸಿ’ಗಳನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ.

ಇ–ಫಾರ್ಮಸಿ ಮೂಲಕ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಲು ‘ಔಷಧ ಮತ್ತು ಸೌಂದರ್ಯವರ್ಧಕ ನಿಯಂತ್ರಣ ಕಾಯ್ದೆ(1945)’ಗೆ ತಿದ್ದುಪಡಿ ತರಲು ಸಿದ್ಧವಾಗಿದೆ. ಸದ್ಯ ದೇಶದಲ್ಲಿ ಆನ್‌ಲೈನ್‌ ಮೂಲಕ ಔಷಧ ಮಾರಾಟ ಮಾಡುವುದು ಕಾನೂನುಬದ್ಧವಲ್ಲ.

ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ಕಾನೂನುಬದ್ಧಗೊಳಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ಕಾಯ್ದೆ ತಿದ್ದುಪಡಿಗೆ ಕರಡು ನಿಯಮಾವಳಿಗಳನ್ನೂ ಬಿಡುಗಡೆ ಮಾಡಿದೆ.

ಆನ್‌ಲೈನ್‌ ತಾಣದಲ್ಲಿ ಔಷಧ ಮಾರಾಟ ನಿಯಂತ್ರಣಕ್ಕೆ ಸೂಕ್ತ ಕಾನೂನು ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿತ್ತು.

ಹೊಸ ವ್ಯಾಖ್ಯಾನ:‘ಆನ್‌ಲೈನ್, ವೆಬ್‌ ಪೋರ್ಟಲ್‌ ಅಥವಾ ಇನ್ನಿತರ ಎಲೆಕ್ಟ್ರಾನಿಕ್‌ ವ್ಯವಸ್ಥೆಯ ಮೂಲಕ ಔಷಧ ಮಾರಾಟ, ವಿತರಣೆ, ಸಂಗ್ರಹ, ಸರಬರಾಜು ವಹಿವಾಟು ನಡೆಸುವ ತಾಣ’ ಎಂದು ಇ–ಫಾರ್ಮಸಿಯನ್ನು ವ್ಯಾಖ್ಯಾನಿಸಲಾಗಿದೆ.

ಒಂದು ವೇಳೆ ಆನ್‌ಲೈನ್‌ ತಾಣಗಳು ಕಳಪೆ ದರ್ಜೆ ಅಥವಾ ಕಲಬೆರಕೆ ಔಷಧಗಳನ್ನು ಮಾರಾಟ ಮಾಡಿದರೆ ಗ್ರಾಹಕರು ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸಿ, ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

**

ಅಧಿಸೂಚನೆಯಲ್ಲಿ ಏನಿದೆ?

* ಇ–ಫಾರ್ಮಸಿಯಲ್ಲಿ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ ಔಷಧಗಳ ಮಾರಾಟಕ್ಕೆ ಅವಕಾಶ ಇಲ್ಲ

* ಶೆಡ್ಯೂಲ್‌ 10 ಪಟ್ಟಿಯಲ್ಲಿ ಸೂಚಿಸಲಾಗಿರುವ ಉಪಶಮನಕಾರಿ, ನಿದ್ರೆ, ಉದ್ವೇಗ, ಉದ್ರೇಕ, ಖಿನ್ನತೆ ಮತ್ತು ಒತ್ತಡ ನಿವಾರಿಸುವ ಮಾತ್ರೆಗಳ ಮಾರಾಟಕ್ಕೆ ನಿರ್ಬಂಧ

* ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ. ವೈದ್ಯರ ಸಲಹಾ ಚೀಟಿಯನ್ನು ದಾಖಲೆಯಂತೆ ಕಾಪಾಡುವುದು ಕಡ್ಡಾಯ

* ವೈದ್ಯರ ಚೀಟಿ, ವೈದ್ಯರು ಮತ್ತು ರೋಗಿಯ ಮಾಹಿತಿಗಳನ್ನು ಪರಿಶೀಲಿಸುವ ಹೊಣೆ ಆನ್‌ಲೈನ್‌ ಔಷಧ ಮಾರಾಟ ಸಂಸ್ಥೆಗಳದ್ದಾಗಿರುತ್ತದೆ

* ಔಷಧ ಮಾರಾಟದ ಸಮಗ್ರ ಮಾಹಿತಿಯನ್ನು ಇ–ಫಾರ್ಮಸಿ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯ

**

ಭಾರತದಲ್ಲಿ ಇ–ಫಾರ್ಮಸಿ ಇನ್ನೂ ಬಾಲಾವಸ್ಥೆಯಲ್ಲಿದೆ. ಬರುವ ವರ್ಷಗಳಲ್ಲಿ ದೇಶದ ಔಷಧ ವಹಿವಾಟು ವಲಯದ ಶೇ 5–15ರಷ್ಟು ಆನ್‌ಲೈನ್‌ ಮೂಲಕ ನಡೆಯುವ ನಿರೀಕ್ಷೆ ಇದೆ.

–ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT