ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಪಸಾಗದ ಇಎಂಡಿ: ಕಂಗೆಟ್ಟ ಗುತ್ತಿಗೆದಾರರು

ಇ ಸಂಗ್ರಹಣಾ ಪೋರ್ಟಲ್‌ಗೆ ಕನ್ನ ಹಾಕುವ ಮೊದಲೂ ವಿಳಂಬ l ಸರ್ಕಾರ ಬದಲಾದರೂ ಅದೇ ಪರಿಸ್ಥಿತಿ: ಆರೋಪ
Last Updated 8 ಸೆಪ್ಟೆಂಬರ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಕಾಮಗಾರಿಗಳು, ಯೋಜನೆಗಳ ಗುತ್ತಿಗೆ ನೀಡುವಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ರಹಿತ ವ್ಯವಹಾರದ ಸಲುವಾಗಿ ಆರಂಭವಾದ ವಿದ್ಯುನ್ಮಾನ ಟೆಂಡರ್‌ (ಇ–ಟೆಂಡರ್‌) ವ್ಯವಸ್ಥೆಯೇ ಗುತ್ತಿಗೆದಾರರನ್ನು ಇನ್ನಿಲ್ಲದಂತೆ ಸತಾಯಿಸುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.

ಇ–ಸಂಗ್ರಹಣಾ ತಂತ್ರಾಂಶ ಟೆಂಡರ್‌ನ ಪೋರ್ಟಲ್‌ಗೆ ಕನ್ನ ಹಾಕಿದ್ದರಿಂದ ಆಗಸ್ಟ್‌ ತಿಂಗಳಲ್ಲಿ20 ದಿನಗಳ ಕಾಲ ಇಡೀ ವ್ಯವಸ್ಥೆಯೇ ಬುಡಮೇಲಾಗಿತ್ತು. ಆದರೆ ಅದಕ್ಕೆ ಮೊದಲೇ ಅಂದರೆ ನಾಲ್ಕೈದು ತಿಂಗಳಿಂದ ತಾವು ನೀಡಿದ ಅರ್ನೆಸ್ಟ್‌ ಮನಿ ಡಿಪಾಸಿಟ್‌ (ಇಎಂಡಿ) ಹಣವನ್ನೇ ವಾಪಸ್ ಮಾಡಿಲ್ಲ. ಇದರಿಂದ ಸರ್ಕಾರಿ ಆಡಳಿತ ಜೀವಂತ ಇದೆಯೋ, ಸತ್ತಿದೆಯೋ ಎಂಬ ಸಂಶಯ ಮೂಡುವಂತಾಗಿದೆ ಎಂದು ಕೆಲವು ಗುತ್ತಿಗೆದಾರರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಆರೇಳು ಮಂದಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಯೋಜನೆಯೊಂದಕ್ಕೆ ಇಎಂಡಿ ಪಾವತಿಸಿದ್ದೆವು. ಒಬ್ಬರಿಗೆ ಟೆಂಡರ್‌ ಸಿಕ್ಕಿತು. ಇದಾಗಿ ನಾಲ್ಕೈದು ತಿಂಗಳು ಕಳೆದಿದೆ. ಟೆಂಡರ್‌ ಸಿಗದೆ ಉಳಿದ ಆರು ಮಂದಿಗೆ ₹ 24.54 ಲಕ್ಷ ಇಎಂಡಿ ವಾಪಸ್ ಕೊಟ್ಟಿಲ್ಲ. ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಹೇಳಬೇಕಿರುವುದು ಇದನ್ನೇ ಇರಬಹುದೇ?’ ಎಂದು ನಜೀರ್‌ ಅಹ್ಮದ್‌ ಎಂಬುವವರು ಅಳಲು ತೋಡಿಕೊಂಡರು.

‘ನಾವು ಕೇಳಿದಾಗಲೆಲ್ಲ ಸರ್ವರ್ ಡೌನ್‌ ಎಂಬ ಉತ್ತರ ಬರುತ್ತದೆ. ನಾವು ಪಾವತಿಸುವ ದುಡ್ಡಿಗೆ ಬೆಲೆಯೇ ಇಲ್ಲ ಎಂದು ಸರ್ಕಾರ ಭಾವಿಸಿದಂತಿದೆ. ಯಾವ ಸರ್ಕಾರ ಇದ್ದರೂ ಅಷ್ಟೇ, ವ್ಯವಸ್ಥೆಯಂತೂ ಬದಲಾಗುತ್ತಿಲ್ಲ’ ಎಂದು ಮಂಜುನಾಥ್‌ ಎಂಬವವರು ಬೇಸರ ವ್ಯಕ್ತಪಡಿಸಿದರು.

‘ಇಎಂಡಿ ರೂಪದಲ್ಲಿ ನೀಡಿದ ₹ 4.9 ಲಕ್ಷ ವಾಪಸ್‌ ನೀಡಬೇಕು.ಇದಕ್ಕೆ ಬಡ್ಡಿ ಕಟ್ಟುವುದು ಯಾರು? ಒಂದು ತಿಂಗಳಲ್ಲಿ ಟೆಂಡರ್‌ ತೆರೆಯುತ್ತೇವೆಎಂದು ಹೇಳಿದರೂ ಅದನ್ನು ತೆರೆಯುವುದು ಎರಡು ತಿಂಗಳ ನಂತರ. ಟೆಂಡರ್ ತೆರೆದ ಮೇಲೆ ತಕ್ಷಣ ಇಎಂಡಿ ವಾಪಸ್‌ ನೀಡಬೇಕು. ಅದು ಆಗುತ್ತಲೇ ಇಲ್ಲ’ ಎಂದು ವಿನಾಯಕ ಸಿಲ್ಕ್ಸ್ಸ್‌ನ ಕೆ.ಡಿ.ಆರ್‌.ಶ್ರೀಕಾಂತ್‌ ಹೇಳಿದರು.

‘ಸುಮಾರು 20 ದಿನ ಸ್ಥಗಿತಗೊಂಡಿದ್ದ ಪೋರ್ಟಲ್‌ ಮರುಚಾಲನೆಗೊಂಡು ಎರಡು ವಾರ ಕಳೆದಿದೆ. ಆದರೆ ಕನ್ನ ಹಾಕಿದವರ ಕುತಂತ್ರದ ಬಗ್ಗೆ ಇಲಾಖೆ ಈಗಲೂ ಆತಂಕದಿಂದಲೇ ಇದೆ. ಹೀಗಾಗಿ ಸ್ವಯಂಚಾಲಿತವಾಗಿ ಗುತ್ತಿಗೆದಾರರಿಗೆ ಕೆಲವೇ ಸೆಕೆಂಡ್‌ಗಳಲ್ಲಿ ‌ಇಎಂಡಿ ಮರುಪಾವತಿ ವ್ಯವಸ್ಥೆಯನ್ನು ಇನ್ನೂ ಆರಂಭಿಸಿಲ್ಲ’
ಎಂದುಇ–ಆಡಳಿತ ಇಲಾಖೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸುನಿಲ್ ಪನ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

25 ಸಾವಿರ ಮಂದಿಗೆ ಸಂಕಷ್ಟ

ಆಗಸ್ಟ್ ತಿಂಗಳ ಮೊದಲ ಮೂರು ವಾರಗಳ ಕಾಲ ರಾಜ್ಯದಲ್ಲಿ ಇ–ಟೆಂಡರ್‌ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಗುತ್ತಿಗೆದಾರರು ಬಹಳ ಕಷ್ಟ ಅನುಭವಿಸಿದ್ದರು. ಯಂತ್ರೋಪಕರಣಗಳು ಸ್ಥಗಿತಗೊಳ್ಳುವಂತಾಯಿತು. ಕ್ವಾರಿ ಪರವಾನಗಿ ನವೀಕರಣದಂತಹ ಪ್ರಕ್ರಿಯೆಗಳಿಗೆ ತೊಂದರೆ ಉಂಟಾಯಿತು. ಕಾಮಗಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಇದರಿಂದ ಆಗಿರುವ ನಷ್ಟವನ್ನು ನಿಖರವಾಗಿ ಅಂದಾಜಿಸುವುದು ಕಷ್ಟ. ಆದರೂ ಸುಮಾರು 25 ಸಾವಿರ ಮಂದಿಗೆ ತೊಂದರೆ ಉಂಟಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಎಂಜಿನಿಯರ್‌ ಒಬ್ಬರು ತಿಳಿಸಿದರು.

* ಪೋರ್ಟಲ್‌ಗೆ ಕನ್ನ ಹಾಕಿದ್ದರಿಂದಾಗಿ ಇಎಂಡಿ ಯನ್ನು ವೈಯಕ್ತಿಕವಾಗಿ ಪರಿಶೀಲಿಸಿ ನೀಡುತ್ತಿದ್ದೇವೆ. ಇದರಿಂದ 3–4 ದಿನ ವಿಳಂಬವಾಗುತ್ತಿದೆ

-ಡಾ.ಸುನೀಲ್‌ ಪನ್ವರ್‌ ಸಿಇಒ, ಇ–ಆಡಳಿತ ಇಲಾಖೆ

ಅಂಕಿ ಅಂಶ

* 35 ಪ್ರತಿ ತಿಂಗಳು ನಡೆಯುವ ಸರಾಸರಿ ಇ–ಟೆಂಡರ್‌

*1 ಸಾವಿರರಾಜ್ಯದೆಲ್ಲೆಡೆ ಒಂದು ತಿಂಗಳಲ್ಲಿ ನಡೆಯುವ ಟೆಂಡರ್‌

* ₹ 4.09 ಲಕ್ಷ ಗುತ್ತಿಗೆದಾರರು ಇಡಬೇಕಾದ ಇಎಂಡಿ ಮೊತ್ತ

* ₹ 50 ಸಾವಿರ ಮೊದಲು ಇದ್ದ ಇಎಂಡಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT