ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ: ಕಾಗದರಹಿತ ವ್ಯವಸ್ಥೆ ಶೀಘ್ರ ಅನುಷ್ಠಾನ- ವಿಶ್ವೇಶ್ವರ ಹೆಗಡೆ ಕಾಗೇರಿ

Last Updated 9 ಸೆಪ್ಟೆಂಬರ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಸಚಿವಾಲಯ ಮತ್ತು ಕಲಾಪವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುವುದು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಡಿಜಿಟಲೀಕರಣ ಯೋಜನೆ (ಇ–ವಿಧಾನ ಅಪ್ಲಿಕೇಶನ್‌) ಅನುಷ್ಠಾನಕ್ಕೆ ಸಿದ್ಧವಿದ್ದು, ಕಾಲಮಿತಿಯೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ಯೋಜನೆಯಿಂದ ವಿಧಾನಸಭೆ ಕಲಾಪ ಮತ್ತು ಸಚಿವಾಲಯದಲ್ಲಿ ಕಾಗದದ ಬಳಕೆ ಸಂಪೂರ್ಣವಾಗಿ ನಿಲ್ಲಲಿದೆ. ಹಿಮಾಚಲ ಪ್ರದೇಶ ರಾಜ್ಯದ ವಿಧಾನಸಭೆ ಡಿಜಿಟಲೀಕರಣವಾಗಿದ್ದು, ಅಲ್ಲಿ ಕಾಗದದ ಬಳಕೆ ಸಂಪೂರ್ಣವಾಗಿ ನಿಂತಿದೆ. ಈ ಸಂಬಂಧ ಈಗಾಗಲೇ ರಾಜ್ಯದ ಸಚಿವಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೂ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡಲಾಗಿದೆ.

ಈ ಹಿಂದೆ ಕೆ.ಬಿ.ಕೋಳಿವಾಡ ಸಭಾಧ್ಯಕ್ಷರಾಗಿದ್ದಾಗ, ಡಿಜಿಟಲೀಕರಣಕ್ಕೆ ಆಸಕ್ತಿ ತೋರಿದ್ದರು. ಹಿಮಾಚಲ ಪ್ರದೇಶದಲ್ಲಿ ಡಿಜಿಟಲೀಕರಣ ಅನುಷ್ಠಾನವನ್ನು ಅಧ್ಯಯನ ಮಾಡಿ ಬರಲು ಅಧಿಕಾರಿಗಳ ತಂಡವನ್ನೂ ಕಳುಹಿಸಿದ್ದರು. ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ಯೋಜನೆಗೆ ನೆರವು ನೀಡುವುದಾಗಿ ಹೇಳಿದಾಗ, ಸರ್ಕಾರ ಮತ್ತೆ ಆಸಕ್ತಿ ತೋರಿಸಿತ್ತು. ಅಷ್ಟರಲ್ಲೇ ವಿಧಾನಸಭಾ ಚುನಾವಣೆ ಬಂದು ಸರ್ಕಾರವೇ ಬದಲಾಯಿತು.

ಈ ಯೋಜನೆಯಿಂದ ಕೆಲವರ ಉದ್ಯೋಗಕ್ಕೆ ಕುತ್ತು ಬರುತ್ತದೆ ಎಂಬ ಮಾತುಗಳೂ ಕೇಳಿ ಬಂದಿವೆ. ಅಲ್ಲದೆ, ಸಚಿವಾಲಯದ ಮುದ್ರಣ ಕಾರ್ಯವನ್ನು ಕೈಗೆತ್ತಿಕೊಳ್ಳುವ ಪ್ರಿಂಟಿಂಗ್‌ ಪ್ರೆಸ್‌ ಲಾಬಿಗಳೂ ಡಿಜಿಟಲೀಕರಣವನ್ನು ವಿರೋಧಿಸುತ್ತಿವೆ.

ಈ ಯೋಜನೆ ಜಾರಿಗೆ ಬಂದರೆ, ಪ್ರತಿಯೊಬ್ಬ ಶಾಸಕನೂ ಸದನದಲ್ಲಿ ಲ್ಯಾಪ್‌ಟಾಪ್‌ ಬಳಸಬೇಕಾಗುತ್ತದೆ. ಪ್ರಶ್ನೋತ್ತರಗಳು, ವಿಧೇಯಕಗಳು, ವರದಿಗಳೂ ಸೇರಿದಂತೆ ಎಲ್ಲ ಮಾಹಿತಿಯನ್ನೂ ಅಪ್‌ಲೋಡ್‌ ಮಾಡಲಾಗುತ್ತದೆ. ಒಂದು ಚೂರು ಸಹ ಕಾಗದ ಬಳಸುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಎಲ್ಲ ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಅವರ ಆಸನದ ಮುಂದೆಯೇ ಲ್ಯಾಪ್‌ಟಾಪ್‌ ಇಟ್ಟಿರುತ್ತಾರೆ. ಅದರ ಮೂಲಕವೇ ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

‘ಹಿಮಾಚಲ ಪ್ರದೇಶ ಅತಿ ಚಿಕ್ಕ ರಾಜ್ಯ ಮತ್ತು ಅಲ್ಲಿ ಶಾಸಕರು ಹಾಗೂ ಸಚಿವಾಲಯ ಸಿಬ್ಬಂದಿಯೂ ಕಡಿಮೆ. ನಮ್ಮ ರಾಜ್ಯದಲ್ಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಅಧಿಕಾರಿಗಳ ಸಂಖ್ಯೆಯೂ ಹೆಚ್ಚು. ಇದಕ್ಕೆ ತಗಲುವ ವೆಚ್ಚವೂ ಹೆಚ್ಚು’ ಎಂಬ ಮಾತುಗಳೂ ಅಧಿಕಾರಿಗಳಿಂದ ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT