ಕಡತಗಳಲ್ಲೇ ಉಳಿದ ‘ಭೂ ವಿಜ್ಞಾನ ಗ್ಯಾಲರಿ’ ಯೋಜನೆ

ಸೋಮವಾರ, ಏಪ್ರಿಲ್ 22, 2019
29 °C
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ₹3.42 ಕೋಟಿ ಪ್ರಸ್ತಾವ

ಕಡತಗಳಲ್ಲೇ ಉಳಿದ ‘ಭೂ ವಿಜ್ಞಾನ ಗ್ಯಾಲರಿ’ ಯೋಜನೆ

Published:
Updated:
Prajavani

ಧಾರವಾಡ: ಭೂಮಿಯ ವೈಜ್ಞಾನಿಕ ಅಧ್ಯಯನಕ್ಕೆ ಅನುಕೂಲವಾಗುವಂತೆ ‘ಭೂ ವಿಜ್ಞಾನ ಗ್ಯಾಲರಿ’ ಸ್ಥಾಪನೆಗೆ ಇಲ್ಲಿನ ಪ್ರಾದೇಶಿಕ ವಿಜ್ಞಾನ ಕೇಂದ್ರವು ಮೂರು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದು, ಇದುವರೆಗೂ ಅದು ಕಡತಗಳಲ್ಲೇ ಉಳಿದಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಇಂಥದ್ದೊಂದು ಕೇಂದ್ರ ಸ್ಥಾಪನೆಗೆ 2016ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆಗಿನ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಕೇಂದ್ರ ಸ್ಥಾಪನೆಗೆ ಆಸಕ್ತಿ ವಹಿಸಿದ್ದರು.

ಆರಂಭದಲ್ಲಿ ಚುರುಕಾಗಿ ನಡೆದ ಪತ್ರ ವ್ಯವಹಾರ ನಂತರ ನಿಂತು ಹೋಯಿತು. ಒಂದೊಮ್ಮೆ ಈ ಕೇಂದ್ರ ಸ್ಥಾಪನೆಯಾಗಿದ್ದಲ್ಲಿ ಭೂಮಿಯ ರಚನೆ, ಅದರ ಗುಣ ಲಕ್ಷಣ, ಭೂಮಿಯೊಳಗೆ ಮತ್ತು ಮೇಲ್ಮೈ ಬದಲಾವಣೆ ಕುರಿತ ಅಧ್ಯಯನಕ್ಕೆ ಪೂರಕವಾಗಬಲ್ಲ ದೇಶದ ಮೊದಲ ಕೇಂದ್ರ ಎನಿಸಿಕೊಳ್ಳುತ್ತಿತ್ತು.

ಸದ್ಯ ಕೋಲ್ಕತ್ತದಲ್ಲಿರುವ ಸೈನ್ಸ್ ಸಿಟಿಯಲ್ಲಿ ಭೂಮಿಯ ವಿಕಾಸ ಕುರಿತು ತಿಳಿಸುವ ಪ್ರದರ್ಶನಾಲಯ ಇದೆ. ಆದರೆ ಇಲ್ಲಿನ ಉದ್ದೇಶಿತ ಕೇಂದ್ರದಲ್ಲಿ ಭೂಮಿಯ ನೈಸರ್ಗಿಕ ಬದಲಾವಣೆ, ಖನಿಜ ಸಂಪತ್ತು ಮತ್ತಿತರ ವಿಷಯಗಳ ಕುರಿತು ತಿಳಿಸುವ ಮಾದರಿಗಳನ್ನಿಡಲು ಯೋಜನೆ ರೂಪಿಸಲಾಗಿತ್ತು. ಸುನಾಮಿ, ಭೂಕಂಪ, ಭೂಮಿ ಒಳಭಾಗದಲ್ಲಿರುವ ಶಿಲಾ ಪದರಗಳ ಮಾಹಿತಿ ನೀಡುವ ಪ್ರಯತ್ನವೂ ಇದಾಗಿತ್ತು.

ಇದು ₹3.42 ಕೋಟಿ ಅಂದಾಜು ವೆಚ್ಚದ ಯೋಜನೆ. 400 ಚದರ ಮೀಟರ್‌ ಜಾಗದಲ್ಲಿ 52 ಮಾದರಿಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ. ಆರಂಭದಲ್ಲಿ ಈ ಯೋಜನೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡುವಂತೆ ಸರ್ಕಾರ ಸೂಚಿಸಿತ್ತು. ನಂತರ ತನ್ನ ನಿರ್ಧಾರ ಬದಲಿಸಿ, ಲೋಕೋಪಯೋಗಿ ಇಲಾಖೆಗೆ ನೀಡುವ ಸಂಬಂಧ ಮರು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ.

ಆರಂಭದಲ್ಲಿ ₹1 ಕೋಟಿ ಮಂಜೂರು ಮಾಡಿದ್ದ ಸರ್ಕಾರ ಈವರೆಗೂ ಅದನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದಾಗಲೂ ಪತ್ರ ಬರೆದು, ಹಣ ಬಿಡುಗಡೆ ಮಾಡುವಂತೆ ಕೋರಿದ್ದರು. ಅದು ಕೂಡ ಫಲ ಕೊಟ್ಟಿಲ್ಲ.

**

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ನಂತರ ಟೆಂಡರ್ ಕರೆಯಬೇಕಿದೆ. ಶೀಘ್ರದಲ್ಲೇ ಆಗುವ ನಿರೀಕ್ಷೆ ಇದೆ
– ಡಾ. ಕೆ.ಬಿ.ಗುಡಸಿ, ನಿರ್ದೇಶಕ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !