ಭೂಮಿಯೊಳಗಿನಿಂದ ಕೇಳಿಬಂದ ಭಾರಿ ಸದ್ದು: ಬೆಚ್ಚಿ ಬಿದ್ದ ಜನ 

7

ಭೂಮಿಯೊಳಗಿನಿಂದ ಕೇಳಿಬಂದ ಭಾರಿ ಸದ್ದು: ಬೆಚ್ಚಿ ಬಿದ್ದ ಜನ 

Published:
Updated:

ಕೊಗ್ರೆ (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಭೂಮಿಯೊಳಗಿನಿಂದ ಭಾರಿ ಸದ್ದು ಕೇಳಿಬಂದ ಕಾರಣ, ಇಲ್ಲಿನ ಜನರು ಬೆಚ್ಚಿಬಿದ್ದರು.

ಬೆಳಿಗ್ಗೆ 9.40ರ ಸುಮಾರಿಗೆ ಅತ್ತಿಕೊಡಿಗೆ ಹಾಗೂ ಶಾಂತಿಗ್ರಾಮದ ವ್ಯಾಪ್ತಿಯಲ್ಲಿ ಭೂಮಿಯ ಒಳಭಾಗದಿಂದ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು ಭಯಭೀತರಾದ ಜನರು ಮನೆಯಿಂದ ಹೊರಕ್ಕೆ ಓಡಿ ಬಂದರು.

‘ಮೂರು ತಿಂಗಳಿನಿಂದಲೂ ಆಗಾಗ ಅತ್ತಿಕೊಡಿಗೆ ಸಮೀಪದ ಹೊಸನೆಲ ಬಳಿ ನೆಲದಾಳದಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿದೆ. ಕೆಲವು ಸಲ ಸದ್ದಿನ ರಭಸಕ್ಕೆ ಮನೆಯ ಅಡುಗೆಕೋಣೆಯಲ್ಲಿದ್ದ ಪಾತ್ರೆಗಳು ಅಲುಗಾಡಿದ ಅನುಭವವಾಗಿದೆ’ ಎನ್ನುತ್ತಾರೆ ಹೊಸನೆಲದ ರಾಮಚಂದ್ರ.

‘ಅತ್ತಿಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ರಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಭೂಮಿಯೊಳಗಿನಿಂದ ಶಬ್ದ ಕೇಳಿಬರುತ್ತಿದೆ. ಈ ಬಗ್ಗೆ ಸ್ಥಳೀಯರು ಕೊಪ್ಪ ತಹಶೀಲ್ದಾರ್‌ಗೆ ಲಿಖಿತ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರು ಜೂನ್‌ 21ರಂದು ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೆ ಯಾವುದೇ ವರದಿ ನೀಡಿಲ್ಲ. ಶಬ್ದದಿಂದಾಗಿ ಜನರು ಭಯಭೀತರಾಗಿದ್ದು ಕೆಲವರು ಊರು ತೊರೆಯಲು ಚಿಂತನೆ ನಡೆಸಿದ್ದಾರೆ’ ಎನ್ನುತ್ತಾರೆ ಕೊಗ್ರೆಯ ಜಯಕುಮಾರ್ ಹಾಗೂ ದೇವೇಂದ್ರ.

‘ಈ ಕುರಿತು ಬೆಂಗಳೂರಿನ ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ 20 ದಿನಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಆದರೆ, ಇದುವರೆಗೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶುಕ್ರವಾರ ಮತ್ತೆ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮ್ಮೆ ತಿಳಿಸಲಾಗಿದ್ದು, ಶೀಘ್ರದಲ್ಲೇ ಕೊಗ್ರೆಗೆ ಬಂದು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ನಮ್ಮಲ್ಲಿ ಈ ರೀತಿಯ ಅವಘಡಗಳ ಪರಿಶೀಲನೆಗೆ ಯಾವುದೇ ಪರಿಕರಗಳಿಲ್ಲ’ ಎಂದು ಚಿಕ್ಕಮಗಳೂರಿನ ಗಣಿ ಮತ್ತು ಭೂ ವಿಜ್ಞಾನ ಕೇಂದ್ರದ ವಿಜ್ಞಾನಿ ದಯಾನಂದ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !