ಇ.ಡಿ. ಮೊಕದ್ದಮೆ ಭೀತಿ: ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡು

7
ಹಿರಿಯ ವಕೀಲರೊಂದಿಗೆ ಸಮಾಲೋಚನೆ

ಇ.ಡಿ. ಮೊಕದ್ದಮೆ ಭೀತಿ: ಡಿ.ಕೆ. ಶಿವಕುಮಾರ್ ದೆಹಲಿಗೆ ದೌಡು

Published:
Updated:

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸಿದೆ ಎಂಬ ಸುದ್ದಿಯ ಬೆನ್ನಲ್ಲೇ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ದೆಹಲಿಗೆ ದೌಡಾಯಿಸಿದ್ದಾರೆ.

ಭಾನುವಾರ ಬೆಳಿಗ್ಗೆ 10.15ರ ಸುಮಾರಿಗೆ ಬೆಂಗಾವಲು ಪಡೆಯನ್ನೂ ಬಿಟ್ಟು ಸದಾಶಿವನಗರದ ತಮ್ಮ ನಿವಾಸದಿಂದ ಖಾಸಗಿ ವಾಹನದಲ್ಲಿ ಹೊರಟ ಶಿವಕುಮಾರ್‌, ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸಕ್ಕೂ ತೆರಳದೆ ಅಜ್ಞಾತ ಸ್ಥಳಕ್ಕೆ ಹೋಗಿದ್ದರು.

ಮಧ್ಯಾಹ್ನ ದೆಹಲಿಗೆ ತೆರಳಿದ ಅವರು, ಮೊಕದ್ದಮೆ ದಾಖಲಾದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಸುಪ್ರೀಂ ಕೋರ್ಟ್‌ನ ವಕೀಲ ಕಪಿಲ್‌ ಸಿಬಲ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ನಿರೀಕ್ಷಣಾ ಜಾಮೀನು ಪಡೆಯಲು ಕೂಡಾ ಅವರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ, ಎಲ್ಲ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಮಾಹಿತಿ ನೀಡುವ ಸಾಧ್ಯತೆಯೂ ಇದೆ.

ಶಿವಕುಮಾರ್‌ ಬೆಂಬಲಕ್ಕೆ ನಿಲ್ಲಬೇಕು ಎಂದು ಮೈತ್ರಿ ಸರ್ಕಾರದ ಪಾಲುದಾರ ಜೆಡಿಎಸ್‌– ಕಾಂಗ್ರೆಸ್‌ ಪಕ್ಷಗಳ ಮುಖಂಡರು ನಿರ್ಧರಿಸಿದ್ದಾರೆ. ಈ ವಿಷಯದ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಜತೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಸಮಾಲೋಚನೆ ನಡೆಸಿದ್ದಾರೆ.

ಬಿಜೆಪಿಗೆ ಹೊಟ್ಟೆ ಉರಿ: ಪರಮೇಶ್ವರ

‘ಸಮ್ಮಿಶ್ರ ಸರ್ಕಾರ ಸುಲಲಿತವಾಗಿ ಆಡಳಿತ ನಡೆಸುತ್ತಿರುವುದು ಬಿಜೆಪಿಯವರಿಗೆ ಹೊಟ್ಟೆ ಉರಿ ತರಿಸಿದೆ. ಹೀಗಾಗಿ ಅವರು ಸರ್ಕಾರ ಬಗ್ಗೆ ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

‘ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಂಥ ಕೇಂದ್ರ ತನಿಖಾ ಸಂಸ್ಥೆಗಳನ್ನು‌ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದರು.

****

ನಾನು ಯಾವುದಕ್ಕೂ ಹೆದರುವವನಲ್ಲ. ರಾಜಕೀಯದಲ್ಲಿ ಯಾರು ಪ್ರಬಲವಾಗಿ ಇರುತ್ತಾರೋ ಅಂಥವರನ್ನು ಗುರಿ ಮಾಡಲಾಗುತ್ತದೆ.

– ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 17

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !