ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್‌ ಮಗಳು ಐಶ್ವರ್ಯಾ ಆಸ್ತಿ: 5 ವರ್ಷದಲ್ಲಿ ನೂರುಪಟ್ಟು ಹೆಚ್ಚಳ

Last Updated 13 ಸೆಪ್ಟೆಂಬರ್ 2019, 8:58 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯಾ ಅವರ ₹ 1.10 ಕೋಟಿ ಆಸ್ತಿ ಐದೇ ವರ್ಷಗಳಲ್ಲಿ ₹ 108 ಕೋಟಿಗೆ ಏರಿಕೆಯಾಗಲು ಸಾಧ್ಯವೆ?

ಈ ಪ್ರಶ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಉತ್ತರ ಪಡೆಯಲು ಇ.ಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಶಿವಕುಮಾರ್‌ 2018ರ ವಿಧಾನಸಭೆ ಚುನಾವಣೆ ವೇಳೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಪುತ್ರಿ ₹ 108 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಆದರೆ, 2013ರ ಚುನಾವಣಾ ಅಫಿಡವಿಟ್‌ನಲ್ಲಿ ಐಶ್ವರ್ಯಾ ಆಸ್ತಿ ಮೌಲ್ಯ ₹1.10 ಕೋಟಿ ಎಂದು ಹೇಳಲಾಗಿತ್ತು.

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಶಿವಕುಮಾರ್‌ ಬಂಧಿತರಾಗಿ ಇ.ಡಿ ವಶದಲ್ಲಿರುವಾಗಲೇ ದೆಹಲಿ ಜಯಪ್ರಕಾಶ್‌ ಭವನದಲ್ಲಿರುವ ಇ.ಡಿ. ಕಚೇರಿಯಲ್ಲಿ ಐಶ್ವರ್ಯಾ ವಿಚಾರಣೆಯೂ ನಡೆಯುತ್ತಿದೆ. ಶಿವಕುಮಾರ್‌ ಅವರ ಮೂವರು ಮಕ್ಕಳಲ್ಲಿ ದೊಡ್ಡವರಾದ 22 ವರ್ಷದ ಐಶ್ವರ್ಯಾ ಎಂಬಿಎ ಪದವೀಧರರು. ತಂದೆಗೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲಿ ಇವರು ನಿರ್ದೇಶಕಿ.

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಮಯದಲ್ಲಿ ಶಿವಕುಮಾರ್‌ ಕಾಂಗ್ರೆಸ್‌ ಶಾಸಕರನ್ನು ಕರೆತಂದು ಬಿಡದಿ ಸಮೀಪರ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಆಶ್ರಯ ನೀಡಿದ್ದರು. ಈ ಶಾಸಕರು ರೆಸಾರ್ಟ್‌ನಲ್ಲಿ ಇರುವಾಗಲೇ 2017ರ ಆ. 2ರಂದು ಶಿವಕುಮಾರ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು.

ಶಿವಕುಮಾರ್‌ ಅವರ ಹಣಕಾಸು ಸಹಾಯಕರಾಗಿದ್ದ ಚಂದ್ರಶೇಖರ್‌ ಸುಖಪುರಿಯ ಅವರ ಮನೆ ಮೇಲೂ ಐ.ಟಿ ದಾಳಿ ಆಗಿತ್ತು. ಸುಖಪುರಿಯ ಮನೆಯಿಂದ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಐಶ್ವರ್ಯಾ ಕೆಫೆ ಕಾಫಿ ಡೇ ಮತ್ತು ಸೋಲ್‌ ಸ್ಪೇಸ್‌ ಜತೆ ನಡೆಸಿದ ಹಣಕಾಸು ವಹಿವಾಟು ಕುರಿತ ಮಾಹಿತಿಯೂ ಇತ್ತು.

ಚಂದ್ರಶೇಖರ್‌ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸುತ್ತಿ ಬಳಸಿ ಗೋಪ್ಯವಾಗಿ ₹ 20 ಕೋಟಿ ಹಣ ಶಿವಕುಮಾರ್‌ ಅವರಿಗೆ ವರ್ಗಾವಣೆ ಆಗಿರುವ ಸಂಗತಿ ಬಯಲಾಯಿತು. ಈ ಬಗ್ಗೆಯೂ ಐಶ್ವರ್ಯಾ ಅವರನ್ನು ಪ್ರಶ್ನಿಸಲಾಗುತ್ತಿದೆ. ಇದಲ್ಲದೆ, 108 ಕೋಟಿ ಪೈಕಿ ₹ 76.11 ಕೋಟಿ ಹಣವನ್ನು ಸೋಲ್‌ ಸ್ಪೇಸ್‌ ಸಂಸ್ಥೆಯಿಂದ ಆಸ್ತಿ ಖರೀದಿಸಲು ಅವರು ಪಾವತಿಸಿದ್ದಾರೆ. ಈ ವಹಿವಾಟುಗಳು ಐಶ್ವರ್ಯಾ ಅವರನ್ನು ಸಂಕಷ್ಟಕ್ಕೆ ಗುರಿಪಡಿಸಿವೆ.

₹ 25 ಕೋಟಿ ಮೌಲ್ಯದ ಕೃಷಿ ಜಮೀನು ಐಶ್ವರ್ಯಾ ಅವರ ಹೆಸರಿನಲ್ಲಿ ನೋಂದಣಿ ಆಗಿದೆ. ಆಭರಣ ಹಾಗೂ ಆಕಾಶ್‌ ಅವರ ಹೆಸರಿನಲ್ಲಿ ಯಾವುದೇ ಬೆಲೆ ಬಾಳುವ ಆಸ್ತಿ ಇಲ್ಲದಿರುವುದು ಗಮನಾರ್ಹ ಸಂಗತಿ. ಶಿವಕುಮಾರ್‌ ಹಿರಿಯ ಪುತ್ರಿ ಖಾತೆಗೆ ಅಜ್ಜಿ ಗೌರಮ್ಮ ಅವರಿಂದ ₹ 3 ಕೋಟಿ ವರ್ಗಾವಣೆ ಆಗಿದೆ. ಆದರೆ, ಈ ಹಣವನ್ನು ಗೌರಮ್ಮ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

ಐಶ್ವರ್ಯಾ ಅವರಿಗೆ ಶಿವಕುಮಾರ್‌ ₹ 11 ಕೋಟಿ ಸಾಲ ನೀಡಿದ್ದಾರೆ. ಬೇರೆ ಕಡೆಗಳಿಂದಲೂ ಅವರು ಸಾಲ ಪಡೆದಿದ್ದಾರೆ. ಐಶ್ವರ್ಯಾ ಅವರ ಹೆಸರಿನಲ್ಲಿ ಚಿನ್ನಾಭರಣವನ್ನು ಖರೀದಿಸಲಾಗಿದೆ. ಐಶ್ವರ್ಯಾ ಎಲ್ಲ ಆಸ್ತಿ ಖರೀದಿಗೆ ಬಳಸಿರುವ ಆದಾಯದ ಮೂಲವನ್ನು ಬಹಿರಂಗಪಡಿಸಬೇಕಾದ ಅನಿವಾರ್ಯ ಸ್ಥಿತಿ ಸೃಷ್ಟಿ ಆಗಿದೆ.

ಇ.ಡಿಯಿಂದ ಡಿಕೆಶಿ ಪುತ್ರಿ ವಿಚಾರಣಿ

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಡಿ.ಕೆ. ಶಿವಕುಮಾರ್ ಅವರ ವಿಚಾರಣೆ ಮುಂದುವರಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳು, ಗುರುವಾರ ಅವರ ಪುತ್ರಿ ಐಶ್ವರ್ಯಾ ಅವರನ್ನೂ ವಿಚಾರಣೆಗೆ ಒಳಪಡಿಸಿದರು.

ಬೆಳಿಗ್ಗೆ 11ಕ್ಕೆ ಇ.ಡಿ ಕಚೇರಿಗೆ ಬಂದ ಐಶ್ವರ್ಯಾ ಅವರ ವಿಚಾರಣೆಯನ್ನು ಮಧ್ಯಾಹ್ನ 2.30 ರಿಂದ ಸಂಜೆ 7ರವರಗೆ ನಡೆಸಲಾಯಿತು.

ಆಸ್ತಿ ಹಾಗೂ ಕೆಲವು ವ್ಯವಹಾರಗಳ ಕುರಿತು ತಂದೆ ಶಿವಕುಮಾರ್‌ ಅವರ ಸಮ್ಮುಖದಲ್ಲೇ ಪುತ್ರಿಯನ್ನು ಪ್ರಶ್ನಿಸಿದ ಅಧಿಕಾರಿಗಳು, ಈ ಸಂಬಂಧ ಹೇಳಿಕೆ ದಾಖಲಿಸಿಕೊಂಡರು. ಶುಕ್ರವಾರ 11 ಗಂಟೆಗೆ ಮತ್ತೆ ವಿಚಾರಣೆ ಬರುವಂತೆ ಸೂಚಿಸಲಾಗಿದೆ.

ಸಂಜೆ 5.30ರವರೆಗೆ ಶಿವಕುಮಾರ್‌ ಅವರ ವಿಚಾರಣೆ ನಡೆಸಿದ ಅಧಿಕಾರಿಗಳು, ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದರು.

ಅತಿಸಾರ ಮತ್ತು ರಕ್ತದದೊತ್ತಡದಿಂದ ಬಳಲಿದ ಶಿವಕುಮಾರ್‌ ಅವರನ್ನು ಕಾಣಲು ಆಸ್ಪತ್ರೆಗೆ ಬಂದ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಅವರಿಗೆ ಅಧಿಕಾರಿಗಳು ಅವಕಾಶ ನೀಡಲಿಲ್ಲ.

ಅವಧಿ ಮುಕ್ತಾಯ: ಕಳೆದ 3ರಂದು ಬಂಧನಕ್ಕೆ ಒಳಗಾಗಿರುವ ಶಿವಕುಮಾರ್‌ ಅವರನ್ನು ಇದೇ 13ರವರೆಗೆ ನ್ಯಾಯಾಲಯವು ಇ.ಡಿ. ಕಸ್ಟಡಿಗೆ ಒಪ್ಪಿಸಿದೆ. ಶುಕ್ರವಾರ ಕಸ್ಟಡಿ ಅವಧಿ ಮುಗಿಯುವುದರಿಂದ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಶಿವಕುಮಾರ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಆಕ್ಷೇಪಣೆ ಸಲ್ಲಿಸುವುದರ ಜೊತೆಗೆ ವಿಚಾರಣೆಗಾಗಿ ಮತ್ತಷ್ಟು ದಿನಗಳ ಕಾಲ ಅವರನ್ನು ವಶಕ್ಕೆ ಒಪ್ಪಿಸುವಂತೆಯೂ ಇ.ಡಿ ಕೇಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT