ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಜಾರ್ಜ್‌ ಬೆನ್ನಿಗೆ ಬಿದ್ದ ಇ.ಡಿ

Last Updated 11 ನವೆಂಬರ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಶಾಸಕ ಕೆ.ಜೆ. ಜಾರ್ಜ್ ವಿರುದ್ಧ, ‘ವಿದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ’ (ಫಾರಿನ್ ಎಕ್ಸ್‌ಚೇಂಜ್ ಮ್ಯಾನೇಜ್‌
ಮೆಂಟ್‌ ಆಕ್ಟ್‌– ಫೇಮಾ) ಅಡಿ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಜಾರ್ಜ್‌ ಅವರು ಹೊಂದಿರುವ ಆಸ್ತಿಯ ಮಾಹಿತಿಯನ್ನು ಅಧಿಕೃತವಾಗಿ ಸಂಗ್ರಹಿಸುತ್ತಿರುವ ಇ.ಡಿ ಅಧಿಕಾರಿಗಳು, ಈಗಾಗಲೇ ಲೋಕಾಯುಕ್ತದಲ್ಲಿ ಜಾರ್ಜ್‌ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ಪಡೆದುಕೊಂಡಿದೆ. ಜಾರ್ಜ್‌ ವಿಧಾನಸಭೆಗೆ ಆಯ್ಕೆಯಾದ ವರ್ಷದಿಂದ ಇಲ್ಲಿಯವರೆಗೆ (1985–2019) ಲೋಕಾಯುಕ್ತಕ್ಕೆ ಸಲ್ಲಿಸಿದ ಆಸ್ತಿ ವಿವರಗಳನ್ನು ಪಡೆದಿರುವ ಅಧಿಕಾರಿಗಳು, ಅದನ್ನು ಆಧಾರವಾಗಿಟ್ಟು ತನಿಖೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಜಾರ್ಜ್‌ ವಿರುದ್ಧ ಫೆಮಾ ಕಾಯ್ದೆಯಡಿ ಪ್ರಕರಣದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಅವರು ಘೋಷಿಸಿಕೊಂಡಿರುವ ಆಸ್ತಿ ವಿವರಗಳ ದೃಢೀಕೃತ ನಕಲು ಪ್ರತಿ ನೀಡುವಂತೆ ಲೋಕಾಯುಕ್ತಕ್ಕೆ ಪತ್ರ ಬರೆಯಲಾಗಿತ್ತು. ಅಲ್ಲದೆ, ಅವರಿಗೆ ಸಂಬಂಧಿಸಿದ ಅಥವಾ ಅವರ ಕುಟುಂಬ ಸದಸ್ಯರು, ಜಾರ್ಜ್‌ಗೆ ಸಂಬಂಧಿಸಿದ ‌ವ್ಯವಹಾರಗಳ ಜೊತೆ ಪಾಲುದಾರಿಕೆ ಹೊಂದಿರುವವರ ವಿಚಾರಣಾ ವರದಿಗಳಿದ್ದರೆ ಅವುಗಳನ್ನೂ ತುರ್ತಾಗಿ ನೀಡುವಂತೆ ಲೋಕಾಯುಕ್ತಕ್ಕೆ ಪತ್ರ ಬರೆಯಲಾಗಿತ್ತು’ ಎಂದು ಇ.ಡಿ. ಮೂಲಗಳು ತಿಳಿಸಿವೆ.

‘ಪತ್ರಕ್ಕೆ ಲೋಕಾಯುಕ್ತ ಕಚೇರಿ ಸ್ಪಂದಿಸಿದ್ದು, ಕೇಳಿದ ಮಾಹಿತಿಗಳನ್ನು ಈಗಾಗಲೇ ನೀಡಿದೆ. ಜಾರ್ಜ್‌ ವಿರುದ್ಧ 15ಕ್ಕೂ ಹೆಚ್ಚು ದೂರುಗಳಿರುವ ಬಗ್ಗೆಯೂ ಲೋಕಾಯುಕ್ತ ಮಾಹಿತಿ ನೀಡಿದೆ. ಆದರೆ, ಮೇಲ್ನೋಟಕ್ಕೆ ಆ ದೂರುಗಳು ಯಾವುದು ಕೂಡಾ ಫೆಮಾ ಕಾಯ್ದೆಯಡಿ ಬರುವುದಿಲ್ಲ. ಅಲ್ಲದೆ, ಆ ದೂರುಗಳು ಪ್ರಾಥಮಿಕ ತನಿಖಾ ಹಂತದಲ್ಲಿವೆ. ಚುನಾವಣಾ ಆಯೋಗ ಮತ್ತು ಲೋಕಾಯುಕ್ತದಲ್ಲಿ ಜಾರ್ಜ್‌ ಘೋಷಿಸಿಕೊಂಡ ಆಸ್ತಿಗಳ ತುಲನೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

‘ಕೆ.ಜೆ. ಜಾರ್ಜ್ ಅವರು ಸಚಿವರಾಗಿದ್ದಾಗ ದೇಶ– ವಿದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್‌ ರೆಡ್ಡಿ ಇತ್ತೀಚೆಗೆ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

‘ಇ.ಡಿ ಅಧಿಕಾರಿಗಳಿಗೆ ಸಲ್ಲಿಸಿರುವ ನಾಲ್ಕು ಪುಟಗಳ ದೂರಿನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜಾರ್ಜ್ ಭಾರಿಪ್ರಮಾಣದ ಆಸ್ತಿ ಹೊಂದಿದ್ದಾರೆ. ನ್ಯೂಯಾರ್ಕ್‌ನ ಮ್ಯಾನ್‌ ಹಟನ್‌ನ ಲಫಯೇಟ್‌ ಸ್ಟ್ರೀಟ್‌ನಲ್ಲಿರುವ ಕೆಲವು ಆಸ್ತಿಗಳೂ ಸೇರಿದಂತೆ ಅನೇಕ ಆಸ್ತಿಗಳನ್ನು ದೂರಿನಲ್ಲಿ ಪಟ್ಟಿ ಮಾಡಲಾಗಿದೆ. ಜಾರ್ಜ್‌ ಅವರ ಮಗಳು ರೇನಿತಾ ಅಬ್ರಹಾಂ ಮತ್ತು ಅಳಿಯ ಕೆವಿನ್‌ ಅಬ್ರಹಾಂ ನ್ಯೂಯಾರ್ಕಿನಲ್ಲಿದ್ದು, ಈ ಆಸ್ತಿಗಳ ಮೌಲ್ಯ ಹತ್ತಾರು ಕೋಟಿ ಎಂದು ದೂರಿನಲ್ಲಿ ವಿವರಿಸಲಾಗಿದೆ.

*
ಕೆ.ಜೆ. ಜಾರ್ಜ್‌ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣ ತನಿಖಾ ಹಂತದಲ್ಲಿದೆ. ಹೀಗಾಗಿ, ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ
-ರಮಣ್ ಗುಪ್ತಾ, ಜಂಟಿ ನಿರ್ದೇಶಕ, ಜಾರಿ ನಿರ್ದೇಶನಾಲಯ

*
ಚುನಾವಣಾ ಆಯೋಗ ಮತ್ತು ಲೋಕಾಯುಕ್ತದಲ್ಲಿ ನನ್ನ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ. ಜಾರಿ ನಿರ್ದೇಶನಾಲಯ ವಿವರಣೆ ಕೇಳಿದರೆ ಕೊಡಲು ಸಿದ್ಧ.
-ಕೆ.ಜೆ. ಜಾರ್ಜ್‌, ಕಾಂಗ್ರೆಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT