ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ನಡುವೆಯೇ ಮಕ್ಕಳ ಕಲಿಕೆ

ನಿರ್ಮಾಣವಾಗದ ಶೆಡ್‌, ಕೈಸೇರದ ಬಾಡಿಗೆ: ನೆಲ್ಯಹುದಿಕೇರಿ ಶಾಲೆಯೇ ‘ಪರಿಹಾರ ಕೇಂದ್ರ’
Last Updated 4 ಅಕ್ಟೋಬರ್ 2019, 13:27 IST
ಅಕ್ಷರ ಗಾತ್ರ

ಮಡಿಕೇರಿ: ಸತತ ಎರಡನೇ ವರ್ಷವೂ ಮಹಾಮಳೆ ಸಂಕಷ್ಟಕ್ಕೆ ತುತ್ತಾದ ಕೊಡಗಿನಲ್ಲಿ ಶಾಲಾ ಕಟ್ಟಡಗಳ ಸ್ಥಿತಿಯೂ ಶೋಚನೀಯವಾಗಿದೆ. ಹಲವು ಶಾಲಾ ಕಟ್ಟಡಗಳು ಈಗಲೋ– ಆಗಲೋ ಬೀಳುವ ಹಂತದಲ್ಲಿವೆ. ಈ ಅಪಾಯದ ನಡುವೆಯೇ ಮಕ್ಕಳು ಕಲಿಯುತ್ತಿದ್ದಾರೆ.

ಈ ವರ್ಷದ ಮಳೆ ಹಾಗೂ ಪ್ರವಾಹದಿಂದ, ಅಂದಾಜು 161 ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಅದರಲ್ಲಿ 39 ಕಟ್ಟಡಗಳು ಅತ್ಯಂತ ಅಪಾಯಕಾರಿಯಾಗಿವೆ. ಗಾಳಿ, ಮಳೆಗೆ ಹೆಂಚುಗಳೇ ಹಾರಿ ಹೋಗಿ ಸಣ್ಣ ಮಳೆಗೂ ಸೋರುತ್ತಿವೆ. ಆರ್‌.ಸಿ.ಸಿ ಕಟ್ಟಡದಲ್ಲೂ ನೀರು ಜಿನುಗುತ್ತಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ₹ 2.52 ಕೋಟಿಗೆ ಶಿಕ್ಷಣ ಇಲಾಖೆ ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರದಿಂದ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ.

ಕೊಡಗಿನ ಶಾಲೆಗಳು ಮಳೆಗಾಲದಲ್ಲಿ ಹತ್ತಾರು ಸಮಸ್ಯೆಗಳಿಗೆ ಒಡ್ಡಿಕೊಳ್ಳುತ್ತಿದ್ದು ಶಾಶ್ವತ ಪರಿಹಾರ ಸಿಕ್ಕಿಲ್ಲ.

ಸಿದ್ದಾಪುರ ಭಾಗದಲ್ಲಿ ಕಾವೇರಿ ನದಿಯು ಉಕ್ಕೇರಿದ್ದರ ಪರಿಣಾಮ ಹಲವು ಕುಟುಂಬಗಳು ಆಶ್ರಯ ಕಳೆದುಕೊಂಡಿವೆ. ನೆಲ್ಯಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲೇ ಈಗಲೂ 64 ಕುಟುಂಬಗಳ 173 ಮಂದಿ ಆಶ್ರಯ ಪಡೆದಿದ್ದು, ಅವರ ಪೈಕಿ 35 ವಿದ್ಯಾರ್ಥಿಗಳೂ ಇದ್ದಾರೆ. ಶಾಲೆಯೇ ಪರಿಹಾರ ಕೇಂದ್ರವಾಗಿ ಬದಲಾದ ಪರಿಣಾಮ, ಆ ಶಾಲೆಗೆ ಬರುವ ವಿದ್ಯಾರ್ಥಿಗಳು ಗದ್ದಲದಲ್ಲಿ ಪಾಠ ಕೇಳುತ್ತಿದ್ದಾರೆ.

‘ಸಂತ್ರಸ್ತರಿಗೆ ಮನೆ ಬಾಡಿಗೆ ಹಣ ಪಾವತಿಸುತ್ತೇವೆ ಇಲ್ಲವೇ ಶೆಡ್‌ ನಿರ್ಮಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದ್ದ ಸರ್ಕಾರ ಕ್ರಮೇಣ ಅದನ್ನು ಮರೆತಿದೆ. ಇದರಿಂದ ಸಂತ್ರಸ್ತ ವಿದ್ಯಾರ್ಥಿಗಳೂ ಸೇರಿದಂತೆ ನೆಲ್ಯಹುದಿಕೇರಿ ಶಾಲೆಗೆ ಬರುವ ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಉಂಟಾಗಿದೆ.

ಇನ್ನೂ ಸಿಕ್ಕಿಲ್ಲ ಕಿಟ್‌!:ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಕೊಡಗಿನಲ್ಲಿ 2 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಸಾವಿರ ವಿದ್ಯಾರ್ಥಿಗಳು ಪರಿಹಾರ ಕೇಂದ್ರ ಸೇರಿದ್ದರು. ಇನ್ನು ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಸಂಬಂಧಿಕರ ಮನೆಗಳಿಗೆ ತೆರಳಿದ್ದರು. ಪ್ರವಾಹದಲ್ಲಿ ವಿದ್ಯಾರ್ಥಿಗಳ ಪುಸ್ತಕಗಳ ಕೊಚ್ಚಿ ಹೋಗಿದ್ದವು. ಪಠ್ಯ ಪುಸ್ತಕ ಮಾತ್ರ ವಿತರಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಇನ್ನೂ ‘ಎಜುಕೇಷನ್‌ ಕಿಟ್‌’ ನೀಡಿಲ್ಲ. 'ಅ. 6ರಿಂದ ದಸರಾ ರಜೆ ಆರಂಭಗೊಳ್ಳುತ್ತಿದ್ದು ಯಾವಾಗ ಕೊಡುತ್ತೀರಾ' ಎಂದು ವಿದ್ಯಾರ್ಥಿಗಳೇ ಪ್ರಶ್ನಿಸುತ್ತಿದ್ದಾರೆ.

‘ಕಿಟ್‌ನಲ್ಲಿ ಪಠ್ಯ ಪುಸ್ತಕ ಹೊರತು ಪಡಿಸಿ ಉಳಿದ ಕಲಿಕೋಪಕರಣಗಳು ಇರಲಿವೆ. ಕಿಟ್‌ ಜಿಲ್ಲೆಗೆ ಪೂರೈಕೆಯಾಗುತ್ತಿದೆ ಸದ್ಯದಲ್ಲೇ ವಿತರಿಸುತ್ತೇವೆ’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾದೋ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT