ಡೇರಾ ಪ್ರಚಾರಕ್ಕೆ ಶಿಕ್ಷಣ ಇಲಾಖೆ ನಿರಾಸಕ್ತಿ

7

ಡೇರಾ ಪ್ರಚಾರಕ್ಕೆ ಶಿಕ್ಷಣ ಇಲಾಖೆ ನಿರಾಸಕ್ತಿ

Published:
Updated:

ಬೆಂಗಳೂರು: ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ (ಡೇರಾ) ಕುರಿತು ಪ್ರಚಾರ ಮಾಡುವಲ್ಲಿ ಶಿಕ್ಷಣ ಇಲಾಖೆ ನಿರಾಸಕ್ತಿ ಹೊಂದಿದೆ. ಇದರಿಂದ ಶಿಕ್ಷಣ ಸಂಸ್ಥೆಗಳಿಂದ ಅನ್ಯಾಯಕ್ಕೊಳಗಾದ ಪೋಷಕರು ಕಚೇರಿಗಳನ್ನು ಅಲೆಯುವ ಸ್ಥಿತಿ ಉಂಟಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ 25ರಷ್ಟು ಪ್ರವೇಶಾತಿ ನೀಡುವ ವಿಚಾರದಲ್ಲಿಯೇ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಇದನ್ನು ಪರಿಹರಿಸಲು ಕೋರಿ ಬಹುತೇಕ ಪೋಷಕರು ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗುತ್ತಿದ್ದಾರೆ.

‘ದೂರು ಬಂದ ಬಗ್ಗೆ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಮಕ್ಕಳ ಹಕ್ಕುಗಳ ಆಯೋಗಕ್ಕೆ ಇದೆ. ಆದರೆ, ಡೇರಾ ನೇರವಾಗಿ ತಪ್ಪಿತಸ್ಥ ಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳಬಹುದು. ಇಲಾಖೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬಹುದು’ ಎಂದು ಆರ್‌ಟಿಇ ಕಾರ್ಯಕರ್ತ ನಾಗಸಿಂಹ ರಾವ್‌ ತಿಳಿಸಿದರು.

ಜಿಲ್ಲಾಧಿಕಾರಿಯೇ ಡೇರಾದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಮಿತಿಯಲ್ಲಿರುತ್ತಾರೆ. ‘ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಅನ್ಯಾಯಕ್ಕೊಳದ ಅನೇಕ ಪೋಷಕರು ಬಿಇಒ ಕಚೇರಿಗಳಿಗೆ ಅಲೆದಾಡುತ್ತಿರುತ್ತಾರೆ. ಇದೆಲ್ಲವೂ ಬಹಿರಂಗಗೊಂಡರೂ ಡೇರಾ ಇಲ್ಲಿಯವರೆಗೂ ಒಂದೇ ಒಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು ತಿಳಿದುಬಂದಿಲ್ಲ’ ಎಂದು ಅವರು ದೂರಿದರು.

‘ಈ ವರ್ಷದ ಆರಂಭದಿಂದ ಸುಮಾರು 50 ದೂರುಗಳನ್ನು ಡೇರಾಗೆ ಸಲ್ಲಿಸಲಾಗಿದೆ. ಅವುಗಳು ಇಲ್ಲಿಯವರೆಗೂ ಇತ್ಯರ್ಥವಾಗಿಲ್ಲ. ಅನೇಕ ಪೋಷಕರಿಗೆ ಹೇಗೆ ದೂರು ಸಲ್ಲಿಸಬೇಕು ಎಂಬುದೂ ತಿಳಿದಿಲ್ಲ. ಡೇರಾಗೆ ದೂರು ದಾಖಲಿಸುವ ಪ್ರಕ್ರಿಯೆಯ ಕುರಿತು ಇಲಾಖೆ ಮಾಹಿತಿ ಬಿತ್ತರಿಸಬೇಕು’ ಎಂದು ಒತ್ತಾಯಿಸಿದರು.

ಡಿಡಿಪಿಐ, ಬಿಇಒಗಳಿಂದ ಅಕ್ರಮ: ‘ಖಾಸಗಿ ಶಾಲೆಗಳ ಮೂಲಸೌಕರ್ಯ, ಸಿಬ್ಬಂದಿ, ಬೋಧನಾ ಗುಣಮಟ್ಟವನ್ನು ಪರಿಶೀಲಿಸಬೇಕಿರುವ ಡಿಡಿಪಿಐ ಹಾಗೂ ಬಿಇಒಗಳು ಈ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸದಿದೆ, ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಡೇರಾ ಅಸ್ತಿತ್ವ ಕಳೆದುಕೊಂಡಿದೆ’ ಎಂದು ಕೆಲ ಪೋಷಕರು ಆರೋಪಿಸಿದರು.

ಪಠ್ಯಪುಸ್ತಕ, ಸಮವಸ್ತ್ರ, ಹೆಚ್ಚುವರಿ ಶುಲ್ಕ, ಡೊನೆಶನ್‌ಗಳ ವಿರುದ್ಧ ಡೇರಾಗೆ ದೂರು ಸಲ್ಲಿಸಬಹುದು. ಪ್ರತಿದಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ರೀತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು. 

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !