ಪರೀಕ್ಷೆ ಮೊದಲೇ ಪಿಯು ಮಂಡಳಿ ಅನಾಥ!

7
ಪೂರ್ಣಾವಧಿ ನಿರ್ದೇಶಕರಿಲ್ಲ, ಪ್ರಾಥಮಿಕ, ಪ್ರೌಢ ಶಿಕ್ಷಣ ಖಾತೆಗೆ ಸಚಿವರೂ ಇಲ್ಲ

ಪರೀಕ್ಷೆ ಮೊದಲೇ ಪಿಯು ಮಂಡಳಿ ಅನಾಥ!

Published:
Updated:

ಬೆಂಗಳೂರು: ದ್ವಿತೀಯ ಪಿಯು ಅಂತಿಮ ಪರೀಕ್ಷೆ ಸಮೀಪಿಸುತ್ತಿದ್ದು, ಪಿಯು ಮಂಡಳಿಗೆ ಪೂರ್ಣಾವಧಿ ನಿರ್ದೇಶಕರು ಮತ್ತು ಪ್ರಾಥಮಿಕ– ಪ್ರೌಢ ಶಿಕ್ಷಣ ಇಲಾಖೆಗೆ ಪ್ರತ್ಯೇಕ ಸಚಿವರು ಇಲ್ಲದಿರುವ ಕಾರಣ ಹೇಳುವವರು– ಕೇಳುವವರು ಯಾರೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

2016 ರಲ್ಲಿ ಪಿಯುಸಿ ವಿಜ್ಞಾನ ವಿಷಯಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಮೂರು ಬಾರಿ ಪರೀಕ್ಷೆಗಳನ್ನು ನಡೆಸುವ ಮೂಲಕ ದೇಶದಲ್ಲೇ ಪಿಯು ಮಂಡಳಿ ಪರೀಕ್ಷಾ ವ್ಯವಸ್ಥೆಯೇ ನಗೆಪಾಟಲಿಗೆ ಗುರಿಯಾಗಿತ್ತು. ಬಳಿಕ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದ ಪರೀಕ್ಷಾ ವ್ಯವಸ್ಥೆಯನ್ನು ಹಳಿಗೆ ತರುವ ಪ್ರಯತ್ನ ನಡೆದಿತ್ತು.

ಪಿಯು ಮಂಡಳಿ ನಿರ್ದೇಶಕಿಯಾಗಿದ್ದ ಸಿ.ಶಿಖಾ ಅವರನ್ನು ಆಗಸ್ಟ್‌ನಲ್ಲಿ ಬೆಸ್ಕಾಂ ಎಂ.ಡಿ ಆಗಿ ವರ್ಗಾವಣೆ ಮಾಡಲಾಯಿತು. ಬೇರೊಬ್ಬರನ್ನು ನೇಮಿಸುವ ಬದಲು ಶಿಖಾ ಅವರಿಗೆ ಪ್ರಭಾರ ನೀಡಲಾಯಿತು.‘ಈ ಹಂತದಲ್ಲಿ ಪೂರ್ಣಾವಧಿ ನಿರ್ದೇಶಕರಿಲ್ಲದಿದ್ದರೂ ವ್ಯವಸ್ಥೆಯನ್ನು ನಿಭಾಯಿಸಬಹುದು. ಆದರೆ, ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ ಪೂರ್ಣಾವಧಿ ನಿರ್ದೇಶಕರು ಇಲ್ಲದಿದ್ದರೆ ಕಷ್ಟವಾಗುತ್ತದೆ. ಆ ಸಮಯದಲ್ಲಿ ಅಗತ್ಯವಾಗಿ ಬೇಕೇ ಬೇಕು’ ಎಂದು ಪಿಯು ಮಂಡಳಿಯ ಜಂಟಿ ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಜ್ಞಾನ ಮತ್ತು ವಾಣಿಜ್ಯ ಕೋರ್ಸ್‌ಗಳು ವೃತ್ತಿಪರ ಕೋರ್ಸ್‌ಗಳಿಗೆ ಹೆಬ್ಬಾಗಿಲು ಆಗಿವೆ. ಅಧಿಕ ಅಂಕ ಗಳಿಸುವುದಕ್ಕೆ ವಿದ್ಯಾರ್ಥಿಗಳ ಮಧ್ಯೆ ಪೈಪೋಟಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಡಿಸ್ಟಿಂಕ್ಷನ್‌ಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಕೆಲವು ಅನುದಾನರಹಿತ ಕಾಲೇಜುಗಳು ಈ ಹಿಂದೆ ಪಿಯು ಮಂಡಳಿಯ ಕೆಲವು ಅಧಿಕಾರಿಗಳ ಜತೆ ಸೇರಿ, ಪ್ರಶ್ನೆ ಪತ್ರಿಕೆಗಳನ್ನು ವ್ಯವಸ್ಥಿತವಾಗಿ ಸೋರಿಕೆ ಮಾಡಿಸಿದ್ದು ಬಯಲಿಗೆ ಬಂದಿತ್ತು. 2016 ರಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಆಗಿದ್ದೂ ಈ ಲಾಬಿಯಿಂದಲೇ ಎಂಬುದು ತನಿಖೆಯಿಂದ ದೃಢಪಟ್ಟಿತ್ತು.

ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಜಯ್‌ ಸೇಠ್ ಮತ್ತು ನಿರ್ದೇಶಕಿ ಸಿ.ಶಿಖಾ ಅವರು ಕಳಂಕಿತ ಅಧಿಕಾರಿಗಳನ್ನು ಪತ್ತೆ ಮಾಡಿ ಎತ್ತಂಗಡಿ ಮಾಡಿದ್ದರು. ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಗೆ ಚಾಲನೆ ನೀಡಿದ್ದರು. ಆಯಾ ಪರೀಕ್ಷಾ ದಿನದಂದು ಬೆಳಿಗ್ಗೆಯೇ ಆನ್‌ಲೈನ್‌ ಮೂಲಕ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆಗೆ ತಯಾರಿ ನಡೆಸಿದ್ದರು. 

ಪೂರ್ಣಾವಧಿಗೆ ಹಾಗೂ ಕಟ್ಟುನಿಟ್ಟಿನ ನಿರ್ದೇಶಕರು ಇಲ್ಲವಾದರೆ, ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಲಾಬಿ ಈ ಬಾರಿಯೂ ಕೈಚಳಕ ತೋರಿಸುವ ಸಾಧ್ಯತೆ ಇದೆ. ಕಳೆದ 10  ವರ್ಷಗಳಲ್ಲಿ ಪಿಯು ಮಂಡಳಿಗೆ 15 ನಿರ್ದೇಶಕರು ಬಂದು ಹೋಗಿದ್ದಾರೆ. ಯಾವುದೇ ನಿರ್ದೇಶಕರು ಹೆಚ್ಚು ಅವಧಿಗೆ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಿಖಾ ಒಬ್ಬರೇ ಹೆಚ್ಚು ದಿನ ಇದ್ದವರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ದ್ವಿತೀಯ ಪಿಯು ಅಂತಿಮ ಪರೀಕ್ಷೆ ಸಂಬಂಧ ಮಂಡಳಿ ಸಭೆ ಈಗಾಗಲೇ ನಡೆಯಬೇಕಿತ್ತು. ಮುಂದಿನ ವಾರ ಸಭೆ ನಡೆಯುವ ಸಾಧ್ಯತೆ ಇದೆ. ಶಿಖಾ ಅವರು ಜಾರಿಗೆ ತಂದ ವ್ಯವಸ್ಥೆಯನ್ನೇ ಈ ಬಾರಿಯೂ ಜಾರಿ ಮಾಡಲಾಗುವುದು’ ಎಂದು ಜಂಟಿ ನಿರ್ದೇಶಕರು ತಿಳಿಸಿದರು.

ಸಲಹೆ ಕೇಳಿದ ಸಿಬಿಎಸ್‌ಇ

ಕಳೆದ ವರ್ಷ ಸಿಬಿಎಸ್‌ಇಯ 12 ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಪಿಯು ಮಂಡಳಿ ಅನುಸರಿಸಿದ ವಿಧಾನದ ಬಗ್ಗೆ ಶಿಕ್ಷಣ ಇಲಾಖೆಯಿಂದ ಮಾಹಿತಿ ಕೇಳಿತ್ತು. ಕರ್ನಾಟಕದಲ್ಲಿ ಜಿಲ್ಲಾ ಆಡಳಿತ ಮತ್ತು ಪೊಲೀಸ್‌ ಇಲಾಖೆ ನೆರವು ಪಡೆಯುತ್ತಿರುವ ಮತ್ತು ತೆಗೆದುಕೊಂಡ ಕ್ರಮಗಳ ಮಾಹಿತಿಯನ್ನು ನೀಡಿತ್ತು.

ಶಿಕ್ಷಣ ಇಲಾಖೆ ಕೇಳುವವರಿಲ್ಲ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಯಾರೂ ಹೇಳುವವರು ಇಲ್ಲ ಕೇಳುವವರು ಇಲ್ಲ ಎನ್ನುವ ಅನಾಥ ಸ್ಥಿತಿ ನಿರ್ಮಾಣವಾಗಿದೆ. ಪಿಯು ಮಂಡಳಿಗೆ ಪೂರ್ಣಾವಧಿಯ ನಿರ್ದೇಶಕರನ್ನು ನೇಮಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಅರುಣ್ ಶಹಪೂರ ಆಗ್ರಹಿಸಿದ್ದಾರೆ.

ಅಂಕಿ ಅಂಶ

* 1250 ಸರ್ಕಾರಿ ಪಿಯು ಕಾಲೇಜುಗಳು

* 750 ಅನುದಾನಿತ ಪಿಯು ಕಾಲೇಜುಗಳು

* 4,000 ಅನುದಾನ ರಹಿತ ಖಾಸಗಿ ಕಾಲೇಜುಗಳು

‌ * 7 ಲಕ್ಷ ಈ ಬಾರಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !