ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಶುಲ್ಕ ವಸೂಲಿ | ಸರ್ಕಾರದ ಆದೇಶ ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ದೂರು

Last Updated 8 ಜೂನ್ 2020, 20:54 IST
ಅಕ್ಷರ ಗಾತ್ರ

ಬೆಂಗಳೂರು: ಈ ವರ್ಷ ಶಾಲಾ ಕಾಲೇಜುಗಳು ಕಳೆದ ವರ್ಷದಷ್ಟೇ ಶುಲ್ಕ ವಿಧಿಸಬೇಕು, ಇಲ್ಲವೇ ಕಡಿಮೆ ಶುಲ್ಕ ಪಡೆಯಬೇಕು ಎಂಬ ಶಿಕ್ಷಣ ಇಲಾಖೆಯ ಸೂಚನೆಯನ್ನು ಹಲವು ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳು ಗಾಳಿಗೆ ತೂರಿವೆ.

ರಾಜ್ಯದ ನಾನಾ ಕಡೆಗಳಲ್ಲಿ ಶಾಲೆಗಳಿಗೆ ಮತ್ತು ದ್ವಿತೀಯ ಪಿಯು ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಇದೀಗ ನಡೆಯುತ್ತಿದೆ. ಹಲವೆಡೆ ₹ 5 ಸಾವಿರದಿಂದ ₹ 30 ಸಾವಿರದವರೆಗೆ ಶುಲ್ಕ ಹೆಚ್ಚಳ ಮಾಡಿರುವ ಬಗ್ಗೆ ದೂರುಗಳು ಬಂದಿವೆ.

‘ನಗರದ ಸಹಕಾರನಗರದ ಕಾಲೇಜೊಂದರಲ್ಲಿ ಮಗನ ದ್ವಿತೀಯ ಪಿಯು ಪ್ರವೇಶಾತಿಗೆ ಬಂದಿದ್ದೇನೆ. ಕಳೆದ ವರ್ಷದಂತೆ ಈ ವರ್ಷವೂ ₹ 1.40 ಲಕ್ಷ ಶುಲ್ಕ ಪಡೆಯಬೇಕಿತ್ತು. ಆದರೆ, ₹ 1.70 ಲಕ್ಷ ಶುಲ್ಕ ಕಟ್ಟಬೇಕು ಎಂದು ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಇದು ಸರ್ಕಾರದ ಸೂಚನೆಯ ಸ್ಪಷ್ಟ ಉಲ್ಲಂಘನೆ’ ಎಂದು ಪೋಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘4–5ನೇ ತರಗತಿಯಿಂದಲೇ ಆನ್‌ಲೈನ್ ತರಗತಿ ಹೆಸರಲ್ಲಿ ಹೆಚ್ಚುವರಿ ಶುಲ್ಕ ಪಡೆಯುವುದು ಈ ವರ್ಷದ ಹೊಸ ಪದ್ಧತಿಯಾಗಿದೆ. ಇದು ಪಿಯು ಹಂತದವರೆಗೂ ವ್ಯಾಪಿಸಿದೆ. ಆನ್‌ಲೈನ್‌ ತರಗತಿ ನಡೆಸುವುದಕ್ಕೆ ಹೆಚ್ಚುವರಿ ವೆಚ್ಚ ಏನು ಇದೆ ಎಂಬುದು ಗೊತ್ತಿಲ್ಲ’ ಎಂದು ಹಲವು ಪೋಷಕರು ಹೇಳಿದ್ದಾರೆ.

ಎಚ್ಚರಿಕೆ ಸುತ್ತೋಲೆ: ಲಾಕ್‌ಡೌನ್‌ನಿಂದಾಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರಿಂದ ದ್ವಿತೀಯ ಪಿಯು ಪ್ರವೇಶಾತಿ ವೇಳೆ ಕಳೆದ ವರ್ಷಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯುವಂತಿಲ್ಲ. ಈ ಬಗ್ಗೆ ದೂರು ಬಂದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಏಪ್ರಿಲ್‌ನಲ್ಲಿ ಸುತ್ತೋಲೆ ಹೊರಡಿಸಿದ್ದರು.

ಎಚ್ಚರಿಕೆ ಸುತ್ತೋಲೆ
ಲಾಕ್‌ಡೌನ್‌ನಿಂದಾಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರಿಂದ ದ್ವಿತೀಯ ಪಿಯು ಪ್ರವೇಶಾತಿ ವೇಳೆ ಕಳೆದ ವರ್ಷಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯುವಂತಿಲ್ಲ. ಒಂದು ವೇಳೆ ಈ ಬಗ್ಗೆ ದೂರು ಬಂದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಏಪ್ರಿಲ್‌ನಲ್ಲಿ ಸುತ್ತೋಲೆ ಹೊರಡಿಸಿದ್ದರು.

ಆ.15ರ ಬಳಿಕ ಶಾಲೆ: ಶಿಕ್ಷಕರ ಸ್ವಾಗತ
ದೇಶದಲ್ಲಿ ಶಾಲೆಗಳ ಆರಂಭ ಆಗಸ್ಟ್ 15ರ ನಂತರವೇ ಎಂಬ ಕೇಂದ್ರ ಸಚಿವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ವಾಗತಿಸಿದ್ದು, ಶಾಲೆ ತೆರೆಯಲು ಅವಸರ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ತಕ್ಕ ಉತ್ತರ ಸಿಕ್ಕಿದೆ ಎಂದು ಹೇಳಿದೆ.

‘ಶಿಕ್ಷಕರನ್ನು ಈಗಲೇ ಶಾಲೆಗೆ ಕರೆಸಿಕೊಳ್ಳುತ್ತಿರುವ ಶಿಕ್ಷಣ ಇಲಾಖೆ, ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವಂತೆ ಕಾಣುತ್ತಿದೆ. ಶಿಕ್ಷಕರಿಗೆ ಹಾಜರಾತಿಯಿಂದ ವಿನಾಯಿತಿ ತೋರಿಸುತ್ತಿಲ್ಲ. ಅಕ್ಟೋಬರ್ ಮತ್ತು ಮುಂದಿನ ಏಪ್ರಿಲ್ ರಜೆಯಲ್ಲಿ ಪಾಠದ ಅವಧಿಯನ್ನು ಸರಿದೂಗಿಸುವುದಾಗಿ ಶಿಕ್ಷಕರ ಸಂಘ ಭರವಸೆ ನೀಡಿದ್ದರೂ ಸರ್ಕಾರದಿಂದ ಸ್ಪಷ್ಟ ನಿರ್ಧಾರವಿಲ್ಲ. ಪೋಷಕರ ಸಭೆ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸ ಇದೆ’ ಎಂದು ಸಂಘ ತಿಳಿಸಿದೆ.

**
ಸರ್ಕಾರದ ಆದೇಶ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
-ಎಸ್‌.ಸುರೇಶ್‌ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT